ಕೆರೆ ಸ್ವಚ್ಛತೆಗಾಗಿ ಬಿಬಿಎಂಪಿ ಯಂತ್ರ ಖರೀದಿ?: ತ್ಯಾಜ್ಯ ವಿಲೇವಾರಿಗೆ ಅನುಕೂಲ
ಬಿಬಿಎಂಪಿ ವ್ಯಾಪ್ತಿಯ ಕೆರೆಗಳನ್ನು ವೈಜ್ಞಾನಿಕವಾಗಿ ಸ್ವಚ್ಛಗೊಳಿಸಲು ‘ಜಲದೋಸ್ತ್’ ಎಂಬ ಏರ್‌ಬೋಟ್ ಸ್ವಯಂಚಾಲಿತ ಯಂತ್ರವನ್ನು ಖರೀದಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು (ಜೂ.15): ಬಿಬಿಎಂಪಿ ವ್ಯಾಪ್ತಿಯ ಕೆರೆಗಳನ್ನು ವೈಜ್ಞಾನಿಕವಾಗಿ ಸ್ವಚ್ಛಗೊಳಿಸಲು ‘ಜಲದೋಸ್ತ್’ ಎಂಬ ಏರ್‌ಬೋಟ್ ಸ್ವಯಂಚಾಲಿತ ಯಂತ್ರವನ್ನು ಖರೀದಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಗರದ ಬಿಬಿಎಂಪಿ ವ್ಯಾಪ್ತಿಯ ಸುಮಾರು 167 ಕೆರೆಗಳ ಪೈಕಿ ಬಹುತೇಕ ಎಲ್ಲ ಕೆರೆಗಳು ಸಸ್ಯಕಳೆ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕಸದಿಂದ ಕಲುಷಿತಗೊಂಡಿವೆ. ಅವುಗಳ ಸ್ವಚ್ಛತೆ ಹಾಗೂ ಜಲಮೂಲಗಳ ಮಾಲಿನ್ಯ ತಡೆಗಟ್ಟುವುದು ಪಾಲಿಕೆಗೆ ಸವಾಲಿನ ಕೆಲಸವಾಗಿದೆ. ಹೀಗಾಗಿ, ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್) ಸಹಯೋಗದಲ್ಲಿ ರಾಷ್ಟ್ರೀಯ ವೈಮಾಂತರೀಕ್ಷ ಪ್ರಯೋಗಾಲಯದಿಂದ (ಎನ್‌ಎಎಲ್) ತಯಾರಿಸಲ್ಪಟ್ಟ ‘ಜಲದೋಸ್ತ್’ ಏರ್‌ಬೋಟ್ ಸ್ವಯಂ ಚಾಲಿತ ಯಂತ್ರವನ್ನು ಬಳಸಿ ಕೆರೆ ಸ್ವಚ್ಛಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಜಲದೋಸ್ತ್ ಯಂತ್ರವು ಕಡಿಮೆ ವೆಚ್ಚ, ಕಡಿಮೆ ತೂಕ ಹಾಗೂ ಹೆಚ್ಚು ತ್ಯಾಜ್ಯ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ವಿಶಾಲ ವ್ಯಾಪ್ತಿಯ ಕೆರೆಯನ್ನೂ ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಒಂದು ಯಂತ್ರವನ್ನು ಖರೀದಿಸಿದರೆ ನಗರದ ಎಲ್ಲ ಕೆರೆಗಳ ನಿರ್ವಹಣೆ ಸಾಧ್ಯವಾಗುತ್ತದೆ. ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಂದಿನ ಬಜೆಟ್‌ನಲ್ಲಿ ಅನ್ವಯವಾಗುವಂತೆ ಟೆಂಡರ್ ಮೂಲಕ ಯಂತ್ರ ಖರೀದಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ಸ್ವದೇಶಿ ನಿರ್ಮಿತ ಏರ್‌ಬೋಟ್: ಸಿಎಸ್‌ಐಆರ್ ಸಹಯೋಗದಲ್ಲಿ ಎನ್‌ಎಎಲ್ ಸಂಸ್ಥೆ ನಿರ್ಮಿತ ಜಲದೋಸ್ತ್ ಸ್ವಯಂಚಾಲಿತ ಯಂತ್ರವು 40 ಅಡಿ ಉದ್ದವಿದೆ. ವಿದೇಶದಲ್ಲಿ ಈ ಯಂತ್ರದ ಬೆಲೆ ಸುಮಾರು 2.5 ಕೋಟಿ ರು. ಇದ್ದರೆ, ಬೆಂಗಳೂರಿನ ಎನ್‌ಎಎಲ್ ಸಂಸ್ಥೆ ಕೇವಲ 95 ಲಕ್ಷ ರು. (ಜಿಎಸ್‌ಟಿ ಸೇರಿ) ವೆಚ್ಚದಲ್ಲಿ ಇದನ್ನು ನಿರ್ಮಿಸಿದೆ. ಕೇವಲ ನಾಲ್ಕು ನಿಮಿಷದಲ್ಲಿ 4 ಟನ್‌ನಷ್ಟು ಜಲಕಳೆ ಸ್ವಚ್ಛಗೊಳಿಸುತ್ತದೆ. ಒಂದು ಟ್ರಿಪ್‌ಗೆ ಮೂರು ಟ್ರ್ಯಾಕ್ಟರ್ ತುಂಬುವಷ್ಟು ತ್ಯಾಜ್ಯ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಒಂದು ದಿನಕ್ಕೆ ಸುಮಾರು ಎರಡು ಏಕರೆ ಜಲ ಪ್ರದೇಶ ಸ್ವಚ್ಛಗೊಳಿಸುತ್ತದೆ ಎಂದು ಎನ್‌ಎಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ವರ್ಜೀನಿಯಾದಲ್ಲಿ ಆ.30ರಿಂದ 3 ದಿನ 12ನೇ ಅಕ್ಕ ಸಮ್ಮೇಳನ: ಅಮೆರಿಕದ 42 ಸಂಘಗಳಿಂದ ಕನ್ನಡ ಹಬ್ಬ
ಕಳೆದ ಡಿಸೆಂಬರ್‌ನಲ್ಲಿ ನಗರದ ಕನ್ನಮಂಗಲ ಕೆರೆಯ ಸುಮಾರು 800 ಟನ್ ತೇಲುವ ಕಸ ಸ್ವಚ್ಛಗೊಳಿಸುವ ಮೂಲಕ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ವಿ ಕಂಡಿದೆ. ದೇಶ್ಯಾದ್ಯಂತ ಯಂತ್ರದ ಪೂರೈಕೆಗೂ ಸಿದ್ಧತೆ ನಡೆಸುತ್ತಿರುವುದಾಗಿ ರಾಷ್ಟ್ರೀಯ ವೈಮಾಂತರೀಕ್ಷ ಪ್ರಯೋಗಾಲಯದ (ಎನ್‌ಎಎಲ್) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.