ಬೆಂಗಳೂರು(ಡಿ.26): ಕೊರೋನಾದಿಂದ ಪ್ರಯಾಣಿಕರ ಕೊರತೆ ಎದುರಿಸುತ್ತಿರುವ ಕೆಎಸ್‌ಆರ್‌ಟಿಸಿ ಮುಂದಿನ ದಿನಗಳಲ್ಲಿ ಬಸ್‌ಗಳ ಕಾರ್ಯಾಚರಣೆ ಹಾಗೂ ಚಾಲನಾ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸುವ ಕುರಿತಂತೆ ಹೊಸ ‘ಡ್ಯೂಟಿ ರೋಟಾ’ ಸಿದ್ಧಪಡಿಸಲು ಮುಂದಾಗಿದೆ.

ಲಾಕ್‌ಡೌನ್‌ ತೆರವು ಬಳಿಕ ಬಸ್‌ ಸೇವೆ ಪುನರಾರಂಭಿಸಿದ್ದರೂ ಕೊರೋನಾ ಪೂರ್ವದಲ್ಲಿ ಕಾರ್ಯಾಚರಿಸುತ್ತಿದ್ದಷ್ಟು ಬಸ್‌ಗಳನ್ನು ಪ್ರಸ್ತುತ ಕಾರ್ಯಾಚರಿಸಲು ಸಾಧ್ಯವಾಗುತ್ತಿಲ್ಲ. ಪ್ರಯಾಣಿಕರ ಸಂಖ್ಯೆ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಿರುವುದರಿಂದ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್‌ ಕಾರ್ಯಾಚರಿಸಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಬಸ್‌ ಕಾರ್ಯಾಚರಣೆ ಸಂಬಂಧ ಕೌನ್ಸೆಲಿಂಗ್‌ ನಡೆಸಿ, ಪೂರ್ವ ಸಿದ್ಧತೆಗಳೊಂದಿಗೆ 2021ರ ಫೆಬ್ರವರಿ 1ರಿಂದ ಜಾರಿಗೆ ಬರುವಂತೆ ಹೊಸ ‘ಡ್ಯೂಟಿ ರೋಟಾ’ ಪದ್ಧತಿ ಅನುಷ್ಠಾನಗೊಳಿಸಬೇಕು. ಹೊಸ ಡ್ಯೂಟಿ ರೋಟಾ ಸಿದ್ಧಪಡಿಸುವಾಗ ಚಾಲನಾ ಸಿಬ್ಬಂದಿಗಳಿಂದ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಾರಿಗೆ ಸಮರ ಸುಖಾಂತ್ಯ; ರಸ್ತೆಗಿಳಿದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ

ಏನಿದು ಡ್ಯೂಟಿ ರೋಟಾ?

ವೈಜ್ಞಾನಿಕ ವಿಧಾನದಲ್ಲಿ ಚಾಲನಾ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸುವುದು, ನಿಯೋಜನೆ ವೇಳೆ ಸಿಬ್ಬಂದಿಯ ಹಿರಿತನ ಪರಿಗಣನೆ, ಸಿಬ್ಬಂದಿ ರಜೆ ನಿರ್ವಹಣೆ, ಕರ್ತವ್ಯದ ಪಾಳಿ ನಿರ್ವಹಣೆಗೆ ಡ್ಯೂಟಿ ರೋಟಾ ಎನ್ನಲಾಗುತ್ತದೆ. ಕೆಎಸ್‌ಆರ್‌ಟಿಸಿಯಲ್ಲಿ ಸುಮಾರು 38 ಸಾವಿರ ನೌಕರರು ಇದ್ದಾರೆ. ಈ ಪೈಕಿ ಶೇ.80ರಷ್ಟು ಚಾಲನಾ ಸಿಬ್ಬಂದಿಯೇ ಇದ್ದಾರೆ. ಈ ಎಲ್ಲ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸುವುದು ಸವಾಲೇ ಸರಿ. ಈ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳು ಯಾವುದೇ ದೂರು, ಸಮಸ್ಯೆಗಳಿಗೆ ಆಸ್ಪದ ನೀಡದ ಹಾಗೆ ಯೋಜನಾ ಬದ್ಧವಾಗಿ ಡ್ಯೂಟಿ ರೋಟಾ ಸಿದ್ಧಪಡಿಸಿ, ಅದರಂತೆ ಚಾಲನಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ.