ಸೋಂಕು-ಸಾವಲ್ಲಿ ಕೊರೋನಾ ದಾಖಲೆ: ಒಂದೇ ದಿನ 42 ಮಂದಿ ಸಾವು, 1839 ಕೇಸ್!
ಸೋಂಕು-ಸಾವಲ್ಲಿ ಕೊರೋನಾ ದಾಖಲೆ| ಒಂದೇ ದಿನ 42 ಮಂದಿ ಸಾವು, 1839 ಕೇಸ್| 21500 ತಲುಪಿದ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ 335ಕ್ಕೆ,| ಬೆಂಗಳೂರಲ್ಲಿ ಮೊದಲ ಬಾರಿ 1000 ದಾಟಿದ ಕೊರೋನಾ ವೈರಸ್| ನಿನ್ನೆ 439 ಮಂದಿ ಸೇರಿ 9244 ಗುಣಮುಖ, 11,966 ಕೇಸು ಸಕ್ರಿಯ
ಬೆಂಗಳೂರು(ಜು.05): ತೀವ್ರ ವೇಗದಲ್ಲಿ ದಾಂಗುಡಿ ಇಡುತ್ತಿರುವ ಕೊರೋನಾ ವೈರಸ್ ಶನಿವಾರ ಒಂದೇ ದಿನ 42 ಮಂದಿಯನ್ನು ಬಲಿ ಪಡೆದಿದೆ. ಜತೆಗೆ, ರಾಜ್ಯದ 1839 ಮಂದಿಗೆ ಸೋಂಕಿದೆ. ಈ ಸೋಂಕು ಮತ್ತು ಸಾವು ಎರಡೂ ಏಕ ದಿನದ ಇದುವರೆಗಿನ ದಾಖಲೆ.
ಈ ದಾಖಲೆಗಳ ಸಹಿತ ಶನಿವಾರ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20 ಸಾವಿರದ ಗಡಿ ದಾಟಿದೆ.
ಶುಕ್ರವಾರ 1694 ಮಂದಿಗೆ ಸೋಂಕು ಹಬ್ಬಿ, 21 ಮಂದಿ ಸಾವನ್ನಪ್ಪಿದ್ದೇ ಈ ವರೆಗಿನ ಅತಿ ಹೆಚ್ಚು ದಾಖಲೆಯಾಗಿತ್ತು. ಈ ದಾಖಲೆಯನ್ನು ಶನಿವಾರ ಮುರಿದ ಕರೋನಾ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 21549ಕ್ಕೆ (ಈ ಸಂಖ್ಯೆ ಶುಕ್ರವಾರ 19710 ಇತ್ತು) ಹಾಗೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 335ಕ್ಕೆ (ನಾಲ್ಕು ಅನ್ಯ ಕಾರಣದ ಸಾವು ಹೊರತುಪಡಿಸಿ) ತಲುಪಿಸಿದೆ.
ಕರ್ನಾಟಕದ ಆಶಾ ಕಾರ‍್ಯಕರ್ತರಿಗೆ ಕೇಂದ್ರ ಭೇಷ್!
ಬೆಂಗಳೂರಲ್ಲೇ 1172 ಪಾಸಿಟಿವ್:
ಶನಿವಾರದ 1839 ಸೋಂಕು ಪ್ರಕರಣಗಳಲ್ಲಿ ರಾಜಧಾನಿ ಬೆಂಗಳೂರು ಒಂದರಲ್ಲೇ 1172 ಮಂದಿಗೆ ಸೋಂಕು ದೃಢಪಟ್ಟಿದೆ. ತನ್ಮೂಲಕ ಬೆಂಗಳೂರು ಇದೇ ಮೊದಲ ಬಾರಿಗೆ ಏಕ ದಿನದ ಸೋಂಕಿನಲ್ಲಿ ಒಂದು ಸಾವಿರದ ಗಡಿಯನ್ನು ದಾಟಿದೆ. ಅಲ್ಲದೆ, 42 ಸಾವಿನ ಪ್ರಕರಣಗಳಲ್ಲೂ 24 ಮಂದಿ ಬೆಂಗಳೂರಿನಲ್ಲೇ ಸಾವನ್ನಪ್ಪಿದ್ದಾರೆ. ಇದರಿಂದ ನಗರದ ಒಟ್ಟು ಸೋಂಕಿತರ ಸಂಖ್ಯೆ 8345ಕ್ಕೆ, ಸಾವಿನ ಸಂಖ್ಯೆ 129ಕ್ಕೆ ಏರಿಕೆಯಾಗಿದೆ. ಇದರಿಂದ ಬೆಚ್ಚಿ ಬಿದ್ದ ಜನತೆ ನಗರದಿಂದ ಗುಳೆ ಹೊರಡಲು ಆರಂಭಿಸಿದೆ.
ರಾಜ್ಯದ ಇತರೆಡೆಯೂ..:
ಇನ್ನು, ದಕ್ಷಿಣ ಕನ್ನಡದಲ್ಲಿ 75, ದಕ್ಷಿಣ ಕನ್ನಡ 73, ಬೀದರ್ 51, ಧಾರವಾಡ 45, ರಾಯಚೂರು 41, ಮೈಸೂರು 38, ಕಲಬುರಗಿ, ವಿಜಯಪುರ ತಲಾ 37, ಮಂಡ್ಯ, ಉತ್ತರ ಕನ್ನಡ ತಲಾ 35, ಶಿವಮೊಗ್ಗ 31, ಹಾವೇರಿ 28, ಬೆಳಗಾವಿ 27, ಹಾಸನ 25, ಉಡುಪಿ 18, ಚಿಕ್ಕಬಳ್ಳಾಪುರ, ತುಮಕೂರು ತಲಾ 12, ಬೆಂಗಳೂರು ಗ್ರಾಮಾಂತರ, ಕೋಲಾರ ತಲಾ 11, ದಾವಣಗೆರೆ 7, ಚಾಮರಾಜ ನಗರ 5, ಗದಗ 4, ಕೊಪ್ಪಳ, ಚಿಕ್ಕಮಗಳೂರು ತಲಾ 3, ರಾಮನಗರ 2, ಯಾದಗಿರಿ 1 ಕೊರೋನಾ ಸೋಂಕು ಪ್ರಕರಣಗಳು ಶನಿವಾರ ದೃಢಪಟ್ಟಿವೆ.
ನವ ವಿವಾಹಿತ ವರ ಬಲಿ, ಮದುವೆಗೆ ಬಂದ 113 ಮಂದಿಗೆ ಕೊರೋನಾ!
42 ಸಾವು ಎಲ್ಲೆಲ್ಲಿ?:
ಶನಿವಾರ ಬೆಂಗಳೂರಿನಲ್ಲೇ 24 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಉಳಿದಂತೆ ಬೀದರ್ 6, ದಕ್ಷಿಣ ಕನ್ನಡ 4, ಧಾರವಾಡ ಮತ್ತು ಕಲಬುರಗಿ ತಲಾ 3, ಬೆಂಗಳೂರು ಗ್ರಾಮಾಂತರ ಮತ್ತು ಹಾಸನ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಈ ಪೈಕಿ ತೀವ್ರ ಉಸಿರಾಟದ ತೊಂದರೆ (ಸಾರಿ)ಯಿಂದ 25 ಮಂದಿ, ವಿಷಮ ಶೀತಜ್ವರ (ಐಎಲ್‌ಐ)ದಿಂದ 9 ಮಂದಿ, ಯಾವುದೇ ಲಕ್ಷಣಗಳಿಲ್ಲದೆ ಸೋಂಕಿಗೆ ತುತ್ತಾಗಿದ್ದ ಇಬ್ಬರು ಬಲಿಯಾಗಿದ್ದಾರೆ. ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಹಾಗೂ ಮನೆಯಲ್ಲಿಯೇ ಸಾವನ್ನಪ್ಪಿದ್ದ ಇಬ್ಬರಿಗೆ ಮರಣಾ ನಂತರ ಪರೀಕ್ಷೆಯಿಂದ ಸೋಂಕು ದೃಢಪಟ್ಟಿದ್ದು, ಉಳಿದಂತೆ ನಾಲ್ವರು ಮೃತರ ಸೋಂಕಿತರ ಸಂಪರ್ಕ ಮಾಹಿತಿ ಲಭ್ಯವಾಗಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
439 ಮಂದಿ ಗುಣಮುಖ:
ಇನು ್ನಬೆಂಗಳೂರಿನಲ್ಲಿ 195 ಮಂದಿ ಸೇರಿ ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾದ ಒಟ್ಟು 439 ಮಂದಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ಇದರಿಂದ ಈ ವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 9244ಕ್ಕೇರಿದೆ. ಉಳಿದವರಲ್ಲಿ 11,966 ಮಂದಿ ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್‌ನಿಂದ ದುಡ್ಡು ಮಾಡುವ ದಾರಿದ್ರ್ಯ ಬಂದಿಲ್ಲ: ಸಿದ್ದರಾಮಯ್ಯಗೆ ತಿರುಗೇಟು
ಐಸಿಯುನಲ್ಲಿ 226:
ಈ ಪೈಕಿ ಆರೋಗ್ಯ ಸ್ಥಿತಿ ಗಂಭೀರಗೊಂಡಿರುವ ಬೆಂಗಳೂರಿನ 124 ಜನ ಸೇರಿ 226 ಮಂದಿಯನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ನಾಲ್ವರು ಅನ್ಯ ಕಾರಣದಿಂದ ಮೃತಪಟ್ಟವರು ಸೇರಿ 339 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.