ಪಟನಾ(ಜು.04):: ಕೊರೋನಾದಿಂದ ಏನೂ ಆಗಲ್ಲ ಬಿಡಿ ಎಂದು ಉಡಾಫೆ ಮಾಡಿ ಮಾತನಾಡಿ, ಸಭೆ-ಸಮಾರಂಭಗಳನ್ನು ನಡೆಸುವವರಿಗೆ ಇಲ್ಲಿದೆ ಎಚ್ಚರಿಕೆ ಸುದ್ದಿ. ಬಿಹಾರದಲ್ಲಿ ಕೊರೋನಾ ನಿಯಮಾವಳಿಗಳನ್ನು ಗಾಳಿಗೆ ತೂರಿ ನಡೆಸಿದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ 113 ಮಂದಿಗೆ ವೈರಸ್‌ ಸೋಂಕು ತಗುಲಿದೆ. ಕೊರೋನಾದಿಂದಾಗಿ, ಮದುವೆ ಆದ ಎರಡೇ ದಿವಸಕ್ಕೆ ನವ ವಿವಾಹಿತ ಬಲಿಯಾಗಿದ್ದಾನೆ.

ಫಲಿಸದ ಬಿಜೆಪಿ ರಣತಂತ್ರ: ಕಾಂಗ್ರೆಸ್‌ಗೆ ಒಲಿದ ಅದೃಷ್ಟ

ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಇಲ್ಲಿನ ಗುರುಗ್ರಾಮದ ಯುವಕನ ಮದುವೆ ಜೂನ್‌ 15ರಂದು ಆಯೋಜಿತವಾಗಿತ್ತು. ಮದುವೆಗೂ 2 ದಿನ ಮುನ್ನ ವರನಿಗೆ ಜ್ವರ ಆರಂಭವಾಯಿತು. ಮದುವೆ ಮುಂದೂಡಿಬಿಡಿ ಎಂದು ಆತ ಕೋರಿದ. ಆದರೆ, ಉಡಾಫೆ ಮಾಡಿದ ಬಂಧುಗಳು ‘ಪ್ಯಾರಾಸಿಟಮಾಲ್‌ ಸೇವಿಸು. ಸರಿ ಆಗುತ್ತೆ’ ಎಂದು ಆತನಿಗೆ ಮಾತ್ರೆ ತಿನ್ನಿಸಿದರು. ಮದುವೆ ನಡೆಯಿತು. ಯಾವುದೇ ಸಾಮಾಜಿಕ ಅಂತರ, ಮಾಸ್ಕ್‌ ಇಲ್ಲದೇ 350 ಮಂದಿ ಮದುವೆಯಲ್ಲಿ ಪಾಲ್ಗೊಂಡು ಮೋಜು ಮಾಡಿದರು.

ಆದರೆ ಮದುವೆ ಆದ ಎರಡೇ ದಿನಕ್ಕೆ ಆತನ ಆರೋಗ್ಯ ಬಿಗಡಾಯಿಸಿತು. ಪಟನಾದ ಏಮ್ಸ್‌ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆಯೇ ಆತ ಅಸುನೀಗಿದ. ಆದಾಗ್ಯೂ ಬುದ್ಧಿ ಕಲಿಯದ ಬಂಧುಗಳು, ಸರ್ಕಾರಕ್ಕೆ ಮಾಹಿತಿ ನೀಡದೇ ಅಂತ್ಯಕ್ರಿಯೆ ನಡೆಸಿದರು.

ಮದುವೆ ಅಂದ್ರೆ ಸುಮ್ಮನೇನಾ? ಟೊಮ್ಯಾಟೋದಲ್ಲೂ ಹೊಡ್ಸಿಕೊಳ್ಳಬೇಕು, ನಾಯಿನೂ ಕಟ್ಕೋಬೇಕು!

ಆಗ ಈ ವಿಷಯ ಗೊತ್ತಾದ ಯಾರೋ ಒಬ್ಬರು, ಸರ್ಕಾರಕ್ಕೆ ಮಾಹಿತಿ ಮುಟ್ಟಿಸಿದರು. ಆಗ ಆರೋಗ್ಯಾಧಿಕಾರಿಗಳು ಬಂದು ತಪಾಸಣೆ ಮಾಡಿದಾಗ ವರನ 15 ಬಂಧುಗಳಿಗೆ ಕೊರೋನಾ ದೃಢಪಟ್ಟಿದೆ. ಬಳಿಕ ಮದುವೆಗೆ ಬಂದ ಅತಿಥಿಗಳನ್ನೆಲ್ಲ ಜೂನ್‌ 24ರಿಂದ 3 ದಿನ ತಪಾಸಣೆ ಮಾಡಿದಾಗ, ಮೊದಲಿನ 15 ಬಂಧುಗಳು ಸೇರಿದಂತೆ 113 ಮಂದಿಗೆ ಕೊರೋನಾ ದೃಢಪಟ್ಟಿದೆ. ಈ ಘಟನೆಯಿಂದ ಇಡೀ ಗ್ರಾಮವೇ ತಲ್ಲಣಗೊಂಡಿದೆ.

ಘಟನೆಯ ಹಿನ್ನೆಲೆಯಲ್ಲಿ ನಿಯಮ ಗಾಳಿಗೆ ತೂರಿ ಮದುವೆ ನಡೆಸಿದ ವರನ ತಂದೆ ಅಂಬಿಕಾ ಚೌಧರಿ ಮೇಲೆ ಪಟನಾ ಜಿಲ್ಲಾಡಳಿತ ಪ್ರಕರಣ ದಾಖಲಿಸಿದೆ.