Karnataka Cabinet Expansion: ಜೂ.18ಕ್ಕೆ ಪರಿಷತ್ ಚುನಾವಣೆ ಇದ್ದು ಅದರ ಬಳಿಕ ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಡಗು (ಜೂ.15): ಜೂ.18ಕ್ಕೆ ಪರಿಷತ್ ಚುನಾವಣೆ ಇದ್ದು ಅದರ ಬಳಿಕ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ವಿ ಬಾಡಗದಲ್ಲಿ 40 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಕ್ರೀಡಾ ತರಬೇತಿ ಕೇಂದ್ರದ ಕಾಮಗಾರಿ ವೀಕ್ಷಣೆ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಹೈಕಮಾಂಡ್, ಸಿಎಂ, ಮಾಜಿ ಸಿಎಂ ಹಾಗೂ ನೂತನ ಕೆಪಿಸಿಸಿ ಅಧ್ಯಕ್ಷರು ಸೇರಿ ಸಚಿವ ಸಂಪುಟ ವಿಸ್ತರಣೆ ವೇಳೆ ಯಾರಿಗೆಲ್ಲಾ ಸಚಿವ ಸ್ಥಾನ ಕೊಡಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ.

ಅವರ ಸಭೆ ಬಳಿಕ ಸಚಿವ ಸಂಪುಟ ವಿಸ್ತರಣೆ ಆಗಬಹುದು. ಕಡಿಮೆ ಅವಧಿ ಇರುವುದರಿಂದ ತಕ್ಷಣದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದಿದ್ದಾರೆ. ಇನ್ನು ಕೊಡಗು ಜಿಲ್ಲೆಗೆ ಸಚಿವ ಸ್ಥಾನ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಜಿಲ್ಲೆಗೆ ಪ್ರಾತಿನಿಧ್ಯ ಕೊಡುವಂತೆ ಹಿಂದಿನಿಂದಲೂ ಕೂಗಿದೆ. ಅದಕ್ಕೆ ನಾನೂ ಧ್ವನಿಗೂಡಿಸುತ್ತೇನೆ ಎಂದರು.

ರೈತರ ಹಾದಿ ತಪ್ಪಿಸಲಾಗುತ್ತಿದೆ

ಕೆಲವೊಮ್ಮೆ ರೈತರ ದಾರಿ ತಪ್ಪಿಸುವ ಕೆಲಸ ಆಗುತ್ತದೆ. ಅದೇ ರೀತಿ ಬಿಡದಿಯಲ್ಲೂ ರೈತರ ಹಾದಿ ತಪ್ಪಿಸವ ಕೆಲಸ ಆಗುತ್ತಿದೆ. ರಾಜಕೀಯವಾಗಿ ರೈತರನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಬಿಡದಿ ಟೌನ್ ಶಿಪ್ ವಿಷಯದಲ್ಲಿ ವಿಜಯೇಂದ್ರ ರಾಹುಲ್ ಗಾಂಧಿಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪೊನ್ನಣ್ಣ ಅವರು ಬಿಡದಿ ಟೌನ್ ಶಿಪ್ ಪ್ಲಾನ್ ಈಗಿನದೇನು ಅಲ್ಲ.

ಡಿ ಕೆ ಶಿವಕುಮಾರ್ ಸಿಎಂ ಆಗುವ ಮೊದಲಿನಿಂದಲೂ ಬಿಡದಿ ಟೌನ್ ಶಿಪ್ ಪ್ಲಾನ್ ಇತ್ತು. ಅದನ್ನು ಸಿಎಂ ಡಿ.ಕೆ ಶಿವಕುಮಾರ್ ಅವರು ಮುತುವರ್ಜಿಯಿಂದ ಮಾಡಲು ಮುಂದಾಗಿದ್ದಾರೆ ಅಷ್ಟೆ. ಅಲ್ಲಿನ ಭೂಮಿ ಯಾವ ರೀತಿ ಇದೆ ಅಂತ ನಾನು ನೋಡಿಲ್ಲ. ರೈತರ ಅಭಿಪ್ರಾಯವನ್ನು ಕೇಳಿಲ್ಲ. ಆದರೆ ಡಿಕೆಶಿ ಅವರು ಬಿಡದಿ ಟೌನ್ ಶಿಪ್ ವಿಷಯದಲ್ಲಿ ತುಂಬಾ ಮುಂದಾಲೋಚನೆ ಇರುವ ನಾಯಕರು ಅವರು. ಅಲ್ಲಿನ ಶಾಸಕರು ಬಹಳ ಒತ್ತು ಕೊಟ್ಟು ಈ ಯೋಜನೆ ಆಗಬೇಕು ಎನ್ನುತ್ತಿದ್ದಾರೆ. ಅವರು ಜನಪ್ರತಿನಿಧಿಯಾಗಿ ಜನಾಭಿಪ್ರಾಯವನ್ನೇ ಬೆಂಬಲಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಶಾಸಕ ಪೊನ್ನಣ್ಣ ಬಿಡದಿ ಟೌನ್ ಶಿಪ್ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಎಲ್ಲಾ ರಾಜಕಾಣಿಗಳು ಆಸ್ತಿ ಬಹಿರಂಗಪಡಿಸಲಿ

ದೇಶದಲ್ಲಿ ಎಲ್ಲಾ ರಾಜಕಾರಣಿಗಳು ಆಸ್ತಿ ಎಷ್ಟು ಇದೆ ಎಂದು ಬಹಿರಂಗ ಮಾಡಲಿ. ಮೊದಲು ಎಷ್ಟು ಇತ್ತು, ನಂತರ ಎಷ್ಟು ಆಗಿದೆ ಎಂಬುದು ಗೊತ್ತಾಗಲ್ಲಿದೆ. ಆರಂಭದಲ್ಲಿ ಎಷ್ಟಿತ್ತು ಈಗ ಎಷ್ಟಾಗಿದೆ ಎನ್ನುವುದು ಗೊತ್ತಾಗುತ್ತದೆ. ಹೇಗೆ ಇಷ್ಟು ಆಸ್ತಿ ಆಯ್ತು, ಎಲ್ಲಿಂದ ಬಂತು ಅಂತ ಗೊತ್ತಾಗುತ್ತದೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ. 1999 ರಲ್ಲಿ ಡಿ.ಕೆ.ಶಿ ಅವರ ಬಳಿ ಕೇವಲ 3 ಎಕರೆ ಮಾತ್ರವೇ ಆರ್ಟಿಸಿ ಭೂಮಿ ಇದ್ದಿದ್ದು ಈಗ ಹೇಗೆ 1800 ಕೋಟಿ ಆಯ್ತು.

ಡಿಕೆಶಿ ಆಸ್ತಿ ಬಗ್ಗೆ ದಾಖಲೆ ನೀಡಲಿ ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ವಿರಾಜಪೇಟೆ ಸಮೀಪದ ವಿ. ಬಾಡಗದಲ್ಲಿ ಮಾತನಾಡಿದ ಅವರು ಡಿಕೆಶಿ ಅವರು ನಾನು ಉದ್ಯಮಿ ಅಂತ ಒಪ್ಪಿಕೊಂಡಿದ್ದಾರೆ. ಸಾಕಷ್ಟು ಉದ್ಯಮಗಳನ್ನು ನಡೆಸುತ್ತಿದ್ದಾರೆ, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದೇನೆ ಅಂತ ಒಪ್ಪಿಕೊಂಡಿದ್ದಾರೆ. ಪರಿಣಾಮ ಆಸ್ತಿ ಹೆಚ್ಚಾಗಿರುತ್ತದೆ ಅಲ್ಲವೆ ಎಂದು ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ ಪ್ರಶ್ನಿಸಿದ್ದಾರೆ.