ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ವೀಣಾ ಹಾನಾಪುರ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಹಾಸ್ಟೆಲ್ ಕೋಣೆಯಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಮೂಲದ ಡಾ. ವೀಣಾ ಹಾನಾಪುರ (25) ಎಂದು ಗುರುತಿಸಲಾಗಿದೆ.

ಎಂಪಿಎಚ್‌ ಕೋರ್ಸ್ ವ್ಯಾಸಾಂಗ!

ಮೃತ ವೀಣಾ ಅವರು ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್ (MPH) ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ನಿನ್ನೆ ರಾತ್ರಿ ವಾಡಿಕೆಯಂತೆ ತಮ್ಮ ಹಾಸ್ಟೆಲ್ ರೂಮ್‌ಗೆ ತೆರಳಿದ್ದ ವೀಣಾ, ರಾತ್ರಿ 11 ಗಂಟೆಯಾದರೂ ಹೊರಬಾರದೇ ಇದ್ದಾಗ ಅನುಮಾನಗೊಂಡ ಹಾಸ್ಟೆಲ್ ವಾರ್ಡನ್ ಕೊಠಡಿಯ ಬಳಿ ತೆರಳಿ ತಪಾಸಣೆ ನಡೆಸಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಸಿಬ್ಬಂದಿ ಸಹಾಯದಿಂದ ಕೊಠಡಿಯ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಮಂಚದ ಕಂಬಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವೀಣಾ ಅವರ ಶವ ಪತ್ತೆಯಾಗಿದೆ.

ಸಾವು ಅಲ್ಲ, ಎಂದು ಪೋಷಕರ ಗಂಭೀರ ಆರೋಪ!

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ವೀಣಾ ಅವರ ಕುಟುಂಬಸ್ಥರು ಮಗಳ ಸಾವಿನ ಹಿಂದೆ ಅಪಾರ ಅನುಮಾನಗಳಿವೆ ಎಂದು ಆರೋಪಿಸಿದ್ದಾರೆ. ಇದು ಆತ್ಮಹತ್ಯೆಯಲ್ಲ, ಬದಲಿಗೆ ಭೀಕರ ಕೊಲೆ ಎಂದು ಅವರು ಪ್ರತಿಪಾದಿಸುತ್ತಿದ್ದಾರೆ.

ಪೋಷಕರು ವ್ಯಕ್ತಪಡಿಸಿರುವ ಪ್ರಮುಖ ಅನುಮಾನಗಳೇನು?

ನೆಲಕ್ಕೆ ತಾಗಿದ್ದ ಕಾಲುಗಳು: ನೇಣು ಬಿಗಿದುಕೊಂಡಿದ್ದ ಸ್ಥಿತಿಯಲ್ಲಿದ್ದ ಶವದ ಕಾಲುಗಳು ನೆಲಕ್ಕೆ ತಾಗುತ್ತಿದ್ದವು. ಮಂಚದ ಕಂಬಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಯಾರೋ ಕೊಲೆ ಮಾಡಿ ತೂಗಾಕಿದ್ದಾರೆ ಎಂಬುದು ಪೋಷಕರ ಮುಖ್ಯ ಆರೋಪ.

ಅಪರಿಚಿತ ಬಟ್ಟೆ ಹಾಗೂ ಗಾಯದ ಗುರುತು: ನೇಣು ಬಿಗಿದುಕೊಳ್ಳಲು ಬಳಸಿರುವ ಬಟ್ಟೆ ಮಗಳಿಗೆ ಸೇರಿದ್ದಲ್ಲ. ಜೊತೆಗೆ ಮಗಳ ಮುಖದ ಮೇಲೆ ತೀವ್ರ ಗಾಯದ ಗುರುತುಗಳಿದ್ದು, ಆಕೆಯ ಮೇಲೆ ಹಲ್ಲೆ ನಡೆಸಿರುವ ಸಾಧ್ಯತೆಯಿದೆ.

ಡೆತ್ ನೋಟ್ ಮೇಲಿನ ಅನುಮಾನ: ಘಟನಾ ಸ್ಥಳದಲ್ಲಿ ಸಿಕ್ಕಿದೆ ಎನ್ನಲಾದ ಡೆತ್ ನೋಟ್‌ನಲ್ಲಿರುವ ಹಸ್ತಾಕ್ಷರ ತಮ್ಮ ಮಗಳದ್ದಲ್ಲ ಎಂದು ಪೋಷಕರು ಸ್ಪಷ್ಟಪಡಿಸಿದ್ದಾರೆ.

ಜಿಮ್ಸ್ ಶವಾಗಾರಕ್ಕೆ ಶವ ರವಾನೆ!

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಮ್ಸ್ (GIMS) ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. "ನಮ್ಮ ಮಗಳ ಸಾವಿನ ಹಿಂದೆ ದೊಡ್ಡ ಸಂಚಿದೆ, ನಮಗೆ ನ್ಯಾಯ ಸಿಗಬೇಕು ಮತ್ತು ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆಯಾಗಬೇಕು" ಎಂದು ಕಣ್ಣೀರಿಡುತ್ತಾ ಪೋಷಕರು ಪೊಲೀಸರನ್ನು ಆಗ್ರಹಿಸಿದ್ದಾರೆ. ವಿದ್ಯಾರ್ಥಿನಿಯ ಸಾವಿನ ನಿಜವಾದ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ತಿಳಿದುಬರಬೇಕಿದ್ದು, ಈ ಘಟನೆಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.