ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ ಚಿಕಿತ್ಸೆ ಫಲಕಾರಿಯಾಗದೆ ತಾಯಿ ಮತ್ತು ಒಂದು ಮಗು ಮೃತಪಟ್ಟಿದ್ದಾರೆ. ತಂದೆ ಕರಿಲಿಂಗಪ್ಪ ಅವರ ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ
ಬೆಂಗಳೂರು (ಅ.7): ನಗರದ ಕೆಂಗೇರಿ ಸಮೀಪದ ನಾಯಂಡಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಮಕ್ಕಳು ಸೇರಿ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದ ಪ್ರಕರಣ. ಗಾಯಗೊಂಡಿದ್ದವರ ಪೈಕಿ ತಾಯಿ ಲಕ್ಷ್ಮಮ್ಮ, ಒಂದು ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಒಂದು ಸಣ್ಣ ನಿರ್ಲಕ್ಷ್ಯಕ್ಕೆ ಬದುಕು ಸರ್ವನಾಶವಾಯ್ತು!
ಕಳೆದ ಶುಕ್ರವಾರ ಬೆಳಗಿನ ಜಾವ ನಾಯಂಡಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ದುರ್ಘಟನೆ ನಡೆದಿತ್ತು. ರಾಯಚೂರು ಭಾಗದಿಂದ ಬೆಂಗಳೂರಿಗೆ ವಲಸೆ ಬಂದಿದ್ದ ಕರಿಲಿಂಗಪ್ಪ ಕುಟುಂಬ. ಇಕ್ಕಟ್ಟಾದ ಮನೆಯಲ್ಲಿ ನಾಲ್ವರು ಮಕ್ಕಳು ಸೇರಿ ದಂಪತಿ ವಾಸ ಮಾಡುತ್ತಿದ್ದರು. ರಾತ್ರಿ ಅಡುಗೆ ಮಾಡಿ ಉಂಡು ಮಲಗಿದ್ದ ಕುಟುಂಬ. ಆದರೆ ರಾತ್ರಿ ಸ್ಟೌ ಬಳಸಿದ ಬಳಿಕ ಗ್ಯಾಸ್ ಸಿಲಿಂಡರ್ ಆಫ್ ಮಾಡುವುದು ಮರೆತ ಪರಿಣಾಮವೋ ಏನೋ ರಾತ್ರಿಯೆಲ್ಲ ಗ್ಯಾಸ್ ಲೀಕ್ ಆಗಿದೆ. ಆದರೂ ಗಮನಕ್ಕೆ ಬಂದಿಲ್ಲ.
ಬೆಳಗ್ಗೆ ಸ್ಟೌ ಹಚ್ಚುವಾಗ ಸಿಲಿಂಡರ್ ಸ್ಫೋಟ!
ಬೆಳಗ್ಗೆ ಸ್ಟೌ ಹಚ್ಚುವಾಗ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಮನೆ ಸಂಪೂರ್ಣ ಜಖಂಗೊಂಡು ಮಕ್ಕಳ ಸೇರಿ ಆರು ಜನ ದಿಕ್ಕಪಾಲಾಗಿಬಿದ್ದಿದ್ದರು. ಸ್ಫೋಟದ ಸದ್ದಿಗೆ ಸುತ್ತಮುತ್ತಲಿನ ಜನ ಆತಂಕಗೊಂಡು ಬಂದು ನೋಡಿದಾಗ ಗಂಭೀರ ಗಾಯಗೊಂಡಿದ್ದ ಲಕ್ಷ್ಮಮ್ಮ, ಕರಿಲಿಂಗಪ್ಪ ಜೊತೆಗೆ ಮಕ್ಕಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮಮ್ಮ, ಒಂದು ಮಗು ಕೊನೆಯುಸಿರು ಎಳೆದಿದ್ದಾರೆ.
ಕರಿಲಿಂಗಪ್ಪ ಸ್ಥಿತಿಯೂ ಗಂಭೀರ
ಇನ್ನು ಈ ದುರಂತ ಘಟನೆಯಲ್ಲಿ ಕರಿಲಿಂಗಪ್ಪ ಸ್ಥಿತಿ ಕೂಡ ಗಂಭೀರವಾಗಿದ್ದು, ಐಸಿಯು ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.


