ಖಾಸಗಿ ಮಾರುಕಟ್ಟೆ ದರ ಮತ್ತು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿ ದರದ ನಡುವೆ ಭಾರಿ ವ್ಯತ್ಯಾಸವಿದ್ದು, ಇದರಿಂದ ಬೊಕ್ಕಸಕ್ಕೆ ಆದಾಯ ನಷ್ಟವಾಗುತ್ತಿದೆ. ಹೀಗಾಗಿ ಪ್ರದೇಶವಾರು ಆಸ್ತಿ ಮಾರ್ಗಸೂಚಿ ದರ ನಿಗದಿಪಡಿಸುವ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯದ ಆಡಳಿತಾತ್ಮಕ ಹಾಗೂ ಪ್ರಚಲಿತ ರಾಜಕೀಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ರಾಜ್ಯಾದ್ಯಂತ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ, ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ವಿಳಂಬ, 'ಮೂರನೇ ಮುಖ್ಯಮಂತ್ರಿ' ಕುರಿತ ವದಂತಿಗಳು, ಸಚಿವ ಸಂಪುಟ ವಿಸ್ತರಣೆ, ಜಿಬಿಎ ಚುನಾವಣೆ ಹಾಗೂ ಎಥೆನಾಲ್ ಮಿಶ್ರಣ ವರದಿ ವಿವಾದ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.
ಆಸ್ತಿ ಮಾರ್ಗಸೂಚಿ ದರ ಏರಿಕೆ ಕುರಿತು ಮಹತ್ವದ ಸುಳಿವು
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರವನ್ನು ಪರಿಷ್ಕರಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ. ಇಡೀ ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರದೇಶವಾರು ಆಸ್ತಿ ಮಾರ್ಗಸೂಚಿ ದರ ಮಾಡ್ತೇವೆ. ಖಾಸಗಿ ಆಸ್ತಿಗಳ ಮಾರ್ಗಸೂಚಿಗೂ ಸರ್ಕಾರಿ ಮಾರ್ಗಸೂಚಿ ದರಕ್ಕೂ ಬಹಳ ಅಂತರ ಇದೆ. ಉದಾಹರಣೆಗೆ ಖಾಸಗಿ ದರ 20 ಕೋಟಿ ಇದ್ರೆ, ಸರ್ಕಾರಿ ದರ 5 ಕೋಟಿ ಇದೆ. ಇದರಿಂದ ಸರ್ಕಾರಕ್ಕೆ ನಷ್ಟ ಆಗುತ್ತೆ. ಹಾಗಾಗಿ ಆಸ್ತಿ ಮಾರ್ಗಸೂಚಿ ದರ ಏರಿಸುವ ಬಗ್ಗೆ ಪರಿಶೀಲನೆ ಮಾಡ್ತಿದ್ದೇವೆ ಎಂದರು.
ಕೇಂದ್ರದ ಬರ ಪರಿಹಾರ ವಿಳಂಬ, ರಾಜ್ಯದ ಕೇಂದ್ರ ಸಚಿವರು ಕೊಡಿಸಲಿ
ಕೇಂದ್ರದಿಂದ ಬರ ಪರಿಹಾರ ವಿಳಂಬ ವಿಚಾರವಾಗಿ ಮಾತನಾಡಿದ ಡಿಸಿಎಂ ಪರಮೇಶ್ವರ್, ಕೇಂದ್ರದಿಂದ ಬರ ಪರಿಹಾರ ಇನ್ನೂ ಬಂದಿಲ್ಲ. ಆದ್ರೆ ರಾಜ್ಯದಿಂದ ಪರಿಹಾರ ಹಂಚಿಕೆ ಮಾಡ್ತಿದ್ದೇವೆ. ಕೇಂದ್ರ ಸರ್ಕಾರ ಇನ್ನೂ ಅಪಾಯಿಂಟ್ಮೆಂಟ್ ಕೊಟ್ಟಿಲ್ಲ, ಇಲ್ಲಿವರೆಗೆ ಮೂರು ಮೆಮೊರಾಂಡಮ್ ಕೊಟ್ಟಿದ್ದೇವೆ. ನಮ್ಮ ಮನವಿಗೆ ಇನ್ನೂ ಪ್ರಧಾನಿ ಕಚೇರಿ ಆಗಲಿ ಕೇಂದ್ರದ ಸಚಿವಾಲಯವಾಗಲಿ ಸಂಪರ್ಕ ಮಾಡಿಲ್ಲ. ಕಳೆದ ಸಲ ಬರ ಪರಿಹಾರ ವಿಳಂಬ ಆದಾಗ ಕೋರ್ಟ್ಗೆ ಹೋಗಿದ್ವಿ, ಆ ನಂತರ ಅವ್ರು ಕೊಟ್ರು ಈಗ ಸರ್ವಪಕ್ಷ ನಿಯೋಗ ಹೋಗಬೇಕು, ಇನ್ನೂ ಕೇಂದ್ರ ಸರ್ಕಾರ ಇದಕ್ಕೆ ಸಮಯ ಕೊಟ್ಟಿಲ್ಲ. ಈ ಸಲವೂ ಸುಪ್ರೀಂಕೋರ್ಟ್ ಗೆ ಹೋಗೋ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ನೋಡೋಣ ಕೇಂದ್ರದವರು ಏನ್ ಮಾಡ್ತಾರೆ ನೋಡ್ಕೊಂಡು ಚರ್ಚೆ ಮಾಡ್ತೇವೆ. ರಾಜ್ಯದಿಂದ ಕೇಂದ್ರದಲ್ಲಿ ಸಚಿವರಾಗಿರೋರು ಪರಿಹಾರ ಕೊಡಿಸಬೇಕು. ರಾಜ್ಯದ ರೈತರ ಸಲುವಾಗಿ ಕೇಂದ್ರ ಸಚಿವರು ಬರ ಪರಿಹಾರ ಕೊಡಿಸಲಿ ಎಂದು ಆಗ್ರಹಿಸಿದರು.
ರಾಜ್ಯಕ್ಕೆ ಮೂರನೇ ಸಿಎಂ ವಿಚಾರ
ಇನ್ನು ರಾಜ್ಯದಲ್ಲಿ ಮೂರನೇ ಸಿಎಂ ಆಗ್ತಾರೆ ಎಂಬ ಚರ್ಚೆ ವಿಚಾರವನ್ನು ಪರಮೇಶ್ವರ್ ತಳ್ಳಿ ಹಾಕಿದ್ದಾರೆ. ಈಗ ಶಿವಕುಮಾರ್ ಸಿಎಂ ಇದ್ದಾರೆ, ಏನೇನೋ ಹೇಳಬೇಡಿ. ಶಿವಕುಮಾರ್ ನಮ್ಮ ಸಿಎಂ, ಅವರು ಸಮರ್ಥವಾಗಿ ಆಡಳಿತ ಮಾಡ್ತಿದ್ದಾರೆ. ಮೂರು ವರ್ಷ ಸಿದ್ದರಾಮಯ್ಯ ಪ್ರಣಾಳಿಕೆಯ ಭರವಸೆ ಈಡೇರಿಸುವ ಕೆಲಸ ಮಾಡಿದ್ರು, ಉಳಿದದ್ದು ಡಿಕೆಶಿ ಮಾಡ್ತಾರೆ. ಅವರ ನೇತೃತ್ವದಲ್ಲಿ ಪ್ರಣಾಳಿಕೆ ಭರವಸೆ ಈಡೇರಿಸಿ, ಮತ್ತೆ ಅಧಿಕಾರಕ್ಕೆ ಬರಬೇಕು. ಶಾಸಕರು, ಸಚಿವರಿಗೆ ಸಿಎಂ ಮೇಲೆ ಯಾವುದೇ ಅಸಮಾಧಾನ ಇಲ್ಲ. ಅಸಮಾಧಾನ ಇದ್ರೆ ಸಿಎಲ್ಪಿ ಸಭೆಯಲ್ಲಿ ಚರ್ಚೆ ಮಾಡ್ತಾರೆ. ಮೂರನೇ ಸಿಎಂ ಅನ್ನೋದು ವಿಪಕ್ಷಗಳ ಆರೋಪ. ವಿಪಕ್ಷಗಳು ಅವರ ಮನೆ ದೋಸೆ ತೂತು ನೋಡಲ್ಲ, ನಮ್ಮನೆ ದೋಸೆ ಲೆಕ್ಕ ಹಾಕ್ತಾರೆ ಎಂದರು.
ಸಿದ್ದರಾಮಯ್ಯ ಲೇಟಾಗಿ ಹೋದ್ರಂತೆ
ಸೋನಿಯಾ ಬುಕ್ ರಿಲೀಸ್ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕಡೆಗಣನೆ ಆರೋಪ ವಿಚಾರವಾಗಿ ಮಾತನಾಡಿ, ಆ ರೀತಿ ಏನೂ ಆಗಿಲ್ಲ. ಸೀಟುಗಳ ಮೇಲೆ ಸ್ಟಿಕ್ಕರ್ ಹಾಕಿರಲಿಲ್ಲ. ಯಾರೂ ಬೇಕಾದರೂ ಎಲ್ಲಿಯಾದರೂ ಕೂರಲು ಅವಕಾಶ ಇತ್ತು. ಸಿದ್ದರಾಮಯ್ಯ ಲೇಟಾಗಿ ಹೋದ್ರಂತೆ, ಹಾಗಾಗಿ ಹಿಂದೆ ಕೂತ್ರು. ಅವರನ್ನು ಅವಮಾನಿಸುವುದಾಗಲೀ, ಕಡೆಗಣಿಸುವುದಾಗಲೀ ಯಾವ ಕಾರಣಕ್ಕೂ ಆಗಿಲ್ಲ. ಸಿದ್ದರಾಮಯ್ಯ ಉನ್ನತ ಮಟ್ಟದ ನಾಯಕರು, ಅವರನ್ನು ನಾವ್ಯಾರೂ ಆ ಥರ ನಡೆಸಿಕೊಳ್ಳಲ್ಲ ಎಂದು ಈ ವಿವಾದಕ್ಕೆ ತೆರೆ ಎಳೆದರು.
ಅಧಿವೇಶನಕ್ಕೂ ಮುನ್ನ ಮಹಿಳಾ ಸಚಿವೆ ಸೇರ್ಪಡೆ
ಇನ್ನು ಸಂಪುಟಕ್ಕೆ ಮಹಿಳಾ ಸಚಿವೆ ಸೇರ್ಪಡೆ ವಿಚಾರವಾಗಿ ಮಾತನಾಡಿದ ಡಿಸಿಎಂ ಪರಮೇಶ್ವರ್ , ಸಿಎಂ ಅವರು ದೆಹಲಿಗೆ ಹೋಗಿದ್ದಾಗ ಚರ್ಚೆ ಮಾಡ್ಕೊಂಡು ಬಂದಿದ್ದಾರೆ. ಅಧಿವೇಶನಕ್ಕೂ ಮುನ್ನ ಮಹಿಳಾ ಸಚಿವೆ ಸೇರ್ಪಡೆ ಆಗಬಹುದು ಎಂದರು. ಇನ್ನು ಜಿಬಿಎ ಚುನಾವಣೆ ಮುಂದೂಡಿಕೆಗೆ ಮತ್ತೆ ಸುಪ್ರೀಂಕೋರ್ಟ್ ಮೊರೆ ಹೋದ ವಿಚಾರವಾಗಿ ಮಾತನಾಡಿ, ಅಂತಿಮ ಮತದಾರರ ಪಟ್ಟಿ ಇನ್ನೂ ತಯಾರಾಗಿಲ್ಲ. ಇದೇ ಎಲ್ಲ ಗೊಂದಲಕ್ಕೆ ಕಾರಣ. ಕರಡು ಮತದಾರರ ಪಟ್ಟಿ ಈಗ ಬಿಡುಗಡೆ ಆಗಿದೆ. ಅಂತಿಮ ಪಟ್ಟಿ ಬರಬೇಕು. ಇಲ್ಲವಾದರೆ 2011ರ ಜನಗಣತಿ ಪ್ರಕಾರ ಚುನಾವಣೆಗೆ ಅವಕಾಶ ಕೊಡಬೇಕು. ಈಗ ಜನಗಣತಿ ನಡೀತಿದೆ. ಯಾವುದಾದರೂ ಒಂದು ಮಾನದಂಡ ಇರಬೇಕು ಎಂದು ಹೇಳಿದರು.
ಎಥೆನಾಲ್ ರಿಪೋರ್ಟ್ ಸುಳ್ಳು ಎಂಬ ಕೇಂದ್ರ ಸಚಿವ ಗೋಪಿ ಹೇಳಿಕೆ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಲ್ಯಾಬೋರೇಟರಿ ರಿಸಲ್ಟ್ ಅನ್ನು ನಾವು ಅಲ್ಲಗಳೆಯೋಕೆ ಆಗುತ್ತಾ? ಲ್ಯಾಬೋರೇಟರಿ ರಿಸಲ್ಟ್ ಸೈಂಟಿಫಿಕ್. ಆ ಸೈಂಟಿಫಿಕ್ ಡೇಟಾ ಇಟ್ಟುಕೊಂಡು ನಮ್ಮ ಆಹಾರ ಸಚಿವರು ರಿಜ್ವಾನ್ ರಿಷದ್ ಅವರು ಮಾತನಾಡಿದ್ದಾರೆ. ಅದನ್ನ ಅಲ್ಲಗಳೆಯೋದು ಅಂತಂದ್ರೆ ಏನು? ಅರ್ಥ ಏನಿದೆ? ಕೇಂದ್ರ ಸಚಿವರೇ ಅದನ್ನ ಆ ರೀತಿ ಹೇಳಿಬಿಟ್ಟರೆ ಮತ್ತೆ ಯಾರು ಹೇಳೋದು? ಈಗ 30%, 20% ಎಥನಾಲ್ ಮಿಕ್ಸ್ ಮಾಡ್ತಿದ್ದಾರೆ ಅಂತ ಹೇಳಿ ರಿಸಲ್ಟ್ಸ್ ಬಂದಿದೆ. ಆ ರಿಸಲ್ಟ್ಸಿನ ಆಧಾರದ ಮೇಲೆ ಅವರು ಹೇಳಿದ್ದಾರೆ. ಕರ್ನಾಟಕದ ಮಟ್ಟಿಗೆ ಅವರು ಹೇಳಿರೋದು, ಅವರೇನು ಇಡೀ ದೇಶದಲ್ಲಿ ಮಾಡ್ತಾರೆ ಅಂತ ರಿಜ್ವಾನ್ ಅವರು ಹೇಳಿಲ್ಲ. ಕರ್ನಾಟಕದ ಮಟ್ಟಿಗೆ ಈ ರೀತಿ ಆಗ್ತಾ ಇದೆ. ಅದು ಆಗಬಾರದು ಅನ್ನೋದನ್ನ ಆಯಿಲ್ ಕಂಪನಿಗಳಿಗೆಲ್ಲ ಸೂಚನೆ ಕೊಡಬೇಕು ಅಂತ ಹೇಳಿದ್ದಾರೆ. ಅದನ್ನ ಅವರು ಕೇಂದ್ರ ಸಚಿವರು ಆ ರೀತಿ ಹೇಳೋದು ಸರಿ ಇಲ್ಲ ಎಂದರು.












