ಕೊಡಗು: ಕೂಜಿಮಲೆಗೆ ಬಂದಿದ್ದವರು ನಕ್ಸಲರು ತನಿಖೆಯಲ್ಲಿ ದೃಢ!
ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಪ್ರದೇಶ ಕೂಜಿಮಲೆಗೆ ಶನಿವಾರ ಸಂಜೆ ಬಂದಿದ್ದ ನಾಲ್ವರು ಅಪರಿಚಿತರು ವಾಂಟೆಂಡ್ ಲಿಸ್ಟ್ ನಲ್ಲಿರುವ ನಕ್ಸಲರೇ ಎಂಬ ಮಾಹಿತಿ ಪೊಲೀಸ್ ಮತ್ತು ನಕ್ಸಲ್ ನಿಗ್ರಹ ಪಡೆಗೆ ಗೊತ್ತಾಗಿದೆ ಎಂಬ ಮಾಹಿತಿ ಲಭಿಸಿದೆ. ಪ್ರಸ್ತುತ ಈ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿಯುತ್ತಿದೆ.
ದುರ್ಗಾಕುಮಾರ್ ನಾಯರ್ ಕೆರೆ
ಸುಳ್ಯ (ಮಾ.19): ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಪ್ರದೇಶ ಕೂಜಿಮಲೆಗೆ ಶನಿವಾರ ಸಂಜೆ ಬಂದಿದ್ದ ನಾಲ್ವರು ಅಪರಿಚಿತರು ವಾಂಟೆಂಡ್ ಲಿಸ್ಟ್ ನಲ್ಲಿರುವ ನಕ್ಸಲರೇ ಎಂಬ ಮಾಹಿತಿ ಪೊಲೀಸ್ ಮತ್ತು ನಕ್ಸಲ್ ನಿಗ್ರಹ ಪಡೆಗೆ ಗೊತ್ತಾಗಿದೆ ಎಂಬ ಮಾಹಿತಿ ಲಭಿಸಿದೆ. ಪ್ರಸ್ತುತ ಈ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿಯುತ್ತಿದೆ.
ನಕ್ಸಲರು ಕೂಜಿಮಲೆಯ ಅಂಗಡಿಗೆ ಬಂದು ದಿನಸಿ ಖರೀದಿಸಿ ತೆರಳಿದ್ದಾರೆ ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಭಾನುವಾರ ರಾತ್ರಿ ವೇಳೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಸೋಮವಾರ ಬೆಳಗ್ಗೆ ಮಡಿಕೇರಿಯ ಗುಪ್ತಚರ ಎಸ್.ಐ. ನವೀನ್ ಕೋಟ್ಯಾನ್ ಮತ್ತು ಸಿಬ್ಬಂದಿ ಬಂದರು. ಕಾರ್ಕಳ ಹಾಗೂ ಭಾಗಮಂಡಲದಿಂದ ಆಗಮಿಸಿದ ನಕ್ಸಲ್ ನಿಗ್ರಹ ಪಡೆಯ ತಂಡಗಳು ಬಂದು ಕೂಜಿಮಲೆ, ಉಪ್ಪುಕಳ , ಕಡಮಕಲ್ ಭಾಗಗಳಿಂದ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತು. ಸ್ವಲ್ಪ ಹೊತ್ತಿನಲ್ಲಿ ಕಾರ್ಕಳದಿಂದ ನಕ್ಸಲ್ ನಿಗ್ರಹ ಪಡೆಯ ಡಿವೈಎಸ್ಪಿ ರಾಘವೇಂದ್ರ ಆಗಮಿಸಿದರು. ಮಡಿಕೇರಿಯಿಂದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜ್ , ಮಡಿಕೇರಿ ಗ್ರಾಮಾಂತರ ಸರ್ಕಲ್ ಇನ್ ಸ್ಪೆಕ್ಟರ್ ಉಮೇಶ್ ಉಪ್ಪಳಿಕೆ ಮತ್ತಿತರ ಅಧಿಕಾರಿಗಳು ಬಂದರು. ಕೇಂದ್ರ ಗುಪ್ತಚರ ಇಲಾಖೆಯವರೂ ಸ್ಥಳಕ್ಕೆ ಬಂದರು.
ಲೋಕಸಭಾ ಚುನಾವಣೆ ಹೊತ್ತಲ್ಲಿ ಕೊಡಗಿನಲ್ಲಿ ಕೆಂಪು ಉಗ್ರರು ಪ್ರತ್ಯಕ್ಷ!
ಘಟನಾ ಸ್ಥಳಕ್ಕೆ ಬಂದ ಅಧಿಕಾರಿಗಳು ನಕ್ಸಲರು ಬಂದಿದ್ದ ಅಂಗಡಿ ಮಾಲೀಕ ರಾಮಲಿಂಗ, ಅವರ ಪುತ್ರ ರಾಮಚಂದ್ರ, ಘಟನೆಯ ಸಂದರ್ಭ ಸ್ಥಳದಲ್ಲಿದ್ದ ಕೂಲಿ ಕಾರ್ಮಿಕರಾದ ರೂಬಿ, ದುರ್ಗ ಅವರಿಂದ ಮಾಹಿತಿ ಪಡೆದರು.
ಅವರು ನೀಡಿದ ಮಾಹಿತಿ ಮತ್ತು ಅಧಿಕಾರಿಗಳು ತೋರಿಸಿದ ಪೊಟೋಗಳ ಆಧಾರದಲ್ಲಿ ಬಂದಿದ್ದ ಇಬ್ಬರು ಯುವತಿಯರ ಸಹಿತ ನಾಲ್ವರೂ ಕೂಡಾ ವಾಂಟೆಡ್ ಲಿಸ್ಟ್ ನಲ್ಲಿರುವ ನಕ್ಸಲೀಯರೇ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ವಿಕ್ರಂ ಗೌಡ ಕೂಡಾ ಈ ತಂಡದಲ್ಲಿದ್ದ ಶಂಕೆ ವ್ಯಕ್ತವಾಗಿದ್ದು , ಈ ನಿಟ್ಟಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಉಳಿದಂತೆ ಲತಾ, ಜಿಶಾ, ಸಂತೋಷ್ ಅಥವಾ ರವಿ ತಂಡದಲ್ಲಿರಬಹುದೆಂದು ಶಂಕಿಸಲಾಗಿದೆ.
ಮೂರು ಪ್ರದೇಶಗಳಿಂದ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದಿದ್ದು, ಡ್ರೋನ್ ಮೂಲಕವೂ ಕಾರ್ಯಾಚರಣೆ ನಡೆಯುತ್ತಿದೆ.
ಈ ಭಾಗದ ಇತರ ಕಡೆ ನಕ್ಸಲ್ ಚಲನ ವಲನಗಳ ಮಾಹಿತಿಯ ಆಧಾರದಲ್ಲಿ ಈ ಘಟನೆಯ ನಿಖರ ಮಾಹಿತಿ ತಿಳಿಯಬಹುದಾಗಿದೆ ಎಂದು ಎ.ಎನ್.ಎಫ್. ಮೂಲಗಳಿಂದ ತಿಳಿದುಬಂದಿದೆ.
ಘಟನೆಯ ಕುರಿತು ಉನ್ನತ ಪೊಲೀಸ್ ಅಧಿಕಾರಿಗಳ ಸಂಪರ್ಕದಲ್ಲಿರುವುದಾಗಿ ಕೊಡಗು ಎಸ್ಪಿ ರಾಮರಾಜ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ದಟ್ಟಾರಣ್ಯದ ನಡುವೆ ರಬ್ಬರ್ ಎಸ್ಟೇಟ್:
ಕೂಜಿಮಲೆ ಪುಷ್ಪಗಿರಿ ಪರ್ವತ ಶ್ರೇಣಿಯ ದಟ್ಟಾರಣ್ಯ ಪ್ರದೇಶ. ಇಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ರಬ್ಬರ್ ಎಸ್ಟೇಟ್ ಇದೆ. ಸರ್ಕಾರಿ ಸ್ವಾಮ್ಯದಲ್ಲಿದ್ದ ಈ ಎಸ್ಟೇಟನ್ನು ಖಾಸಗಿಯವರಿಗೆ ಲೀಸ್ ಗೆ ನೀಡಲಾಗಿದೆ.
ಈ ರಬ್ಬರ ಎಸ್ಟೇಟ್ ನಲ್ಲಿ ಸುಮಾರು 25 ರಷ್ಟು ಕುಟುಂಬಗಳು ಕೆಲಸಕ್ಕಿದ್ದು ಸುಮಾರು 80ಕ್ಕಿಂತ ಅಧಿಕ ಕಾರ್ಮಿಕರಿದ್ದಾರೆ. ಇವರಲ್ಲಿ ಜಾರ್ಖಂಡ್, ಒಡಿಶಾ, ತಮಿಳುನಾಡಿನವರೂ ಇದ್ದಾರೆ. ಈ ಕುಟುಂಬಗಳಿಗೆ ಅನುಕೂಲವಾಗಲು ರಾಮಲಿಂಗ ಅವರು ಕೆಲವು ತಿಂಗಳುಗಳ ಹಿಂದಷ್ಟೇ ಅಂಗಡಿ ತೆರೆದಿದ್ದರು. ಆ ಅಂಗಡಿಯಲ್ಲಿ ಈ ಘಟನೆ ನಡೆದಿದೆ.
ದಿನಸಿ ಸಾಮಾಗ್ರಿ ಕೊಂಡೊಯ್ದರು:
ಶನಿವಾರ ಮುಸ್ಸಂಜೆ 6 ರಿಂದ 7 ರ ನಡುವೆ ಈ ಬೆಳವಣಿಗೆ ನಡೆದಿದೆ. ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರು ಅಂಗಡಿಗೆ ಬಂದಿದ್ದಾರೆ. ಎಲ್ಲರೂ ಸಮವಸ್ತ್ರದ ರೀತಿಯ ಬಟ್ಟೆ ಧರಿಸಿದ್ದು, ಕೈಯಲ್ಲಿ ಗನ್ ಇತ್ತು. ಓರ್ವ ಯುವತಿ ಗನ್ ಹಿಡಿದು ಹೊರಗೆ ನಿಂತಿದ್ದು ಉಳಿದ ಮೂವರು ಗನ್ ಹೊರಗಡೆ ಇಟ್ಟು ಅಂಗಡಿಯ ಒಳಗೆ ಬಂದಿದ್ದಾರೆ. ಎಲ್ಲರೂ ಕನ್ನಡ ಮಾತನಾಡುತ್ತಿದ್ದರು. ಅಕ್ಕಿ, ಬೆಲ್ಲ, ಬೇಳೆ, ನೀರುಳ್ಳಿ, ಬಟಾಟೆ, ಬಿಸ್ಕತ್ತು ಸೇರಿದಂತೆ ಸುಮಾರು 3500 ರು. ಮೊತ್ತದ ಸಾಮಾಗ್ರಿ ಖರೀದಿಸಿ ಹಣ ನೀಡಿ ತೆರಳಿದ್ದಾರೆ.
ಕೊಡಗು: ರೋಗಿಗಳ ಊಟದ ಹೆಸರಲ್ಲೂ ನಡೆಯಿತಾ ಗೋಲ್ಮಾಲ್?
ಈ ಪ್ರದೇಶಕ್ಕೆ ಅರಣ್ಯ ಇಲಾಖೆ ಮತ್ತು ವೈಲ್ಡ್ ಲೈಫ್ ನವರು ಕೆಲವೊಮ್ಮೆ ಭೇಟಿ ನೀಡಿ, ಶೆಡ್ ನಲ್ಲಿ ತಂಗುತ್ತಿದ್ದು, ಅಂಗಡಿ ಮಾಲಕರು ಇವರನ್ನು ಅದೇ ರೀತಿ ಭಾವಿಸಿದ್ದಾರೆ. ಆದರೆ ಭಾನುವಾರ ಇಲ್ಲಿಗೆ ಬಂದಿದ್ದ ಸ್ಥಳೀಯ ಅರಣ್ಯ ಸಿಬ್ಬಂದಿಯಲ್ಲಿ ಅಂಗಡಿಯವರು ನಾಲ್ವರು ಬಂದಿದ್ದ ವಿಚಾರ ಪ್ರಸ್ತಾಪಿಸಿದಾಗ ಅವರು, ನಮ್ಮವರ್ಯಾರೂ ಬಂದಿಲ್ಲ ಎಂದು ತಿಳಿಸಿದ್ದರು. ಆ ಬಳಿಕ ಬಂದವರು ನಕ್ಸಲೀಯರು ಎಂಬ ಗುಮಾನಿ ಎದ್ದಿತ್ತು.