ಮೈಸೂರು(ಆ.4): ವಿದೇಶದ ಕನ್ನಡದ ಕಂಪನ್ನು ಸೂಸುವ ನಾವಿಕೋತ್ಸವಕ್ಕೆ ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಶನಿವಾರಾ ಅದ್ದೂರಿ ಚಾಲನೆ ದೊರೆಯಿತು. ವಿಶ್ವದ ಮೂಲೆ ಮೂಲೆಗಳಿಂದ ಬಂದ ಕನ್ನಡಡಿಗರು ಒಂದಾಗಿ ಕನ್ನಡ ಡಿಂಡಿಮ ನುಡಿಸಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೆ ಕನ್ನಡ ಕಳೇದು ಹೋಗುವ ಅಪಾಯದಲ್ಲಿದೆ. ಆದರೆ ಪ್ರಪಂಚದ ಬೇರೆ ಬೇರೆ ಕಡೆ ನೆಲೆ ನಿಂತಿರುವ ಕನ್ನಡಿಗರು ಕನ್ನಡವ ಕಟ್ಟಿ ಬೆಳೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.  ಮೈಸೂರು ದಸರಾ ವೇಳೆ ಅನಿವಾಸಿ ಕನ್ನಡಿಗರು ಕಾರ್ಯಕ್ರಮ ಹಮ್ಮಿಕೊಳ್ಳುವುದಾದರೆ ವೇದಿಕೆ ರೂಪಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಅಮೆರಿದಲಲ್ಲಿ ನೆಲೆ ನಿಂತು  ಭಾರತಕ್ಕೆ ವಾಪಸ್ ಆಗಿರುವ ಗುರುಪ್ರಸಾದ್ ಮತ್ತು ಗೌಡರ್ ಡೆವಲಪ್ ಮಾಡಿದ ಕನ್ನಡ ಸೇರಿದಂತೆ 18 ಭಾಷೆಗಳ ಕೀಲಿಮಣೆಯುಳ್ಳ  ಕ-ನಾದ ಕಿಲಿಮಣೆ ತಂತ್ರಾಂಶವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಅನಿವಾಸಿ ಕನ್ನಡಿಗರ ಮಕ್ಕಳ ಕನ್ನಡ ಕಲಿಕೆಗೆ ನೆರವಾಗಲೆಂದೇ ಪ್ರಾಧಿಕಾರ ಸಿದ್ಧಪಡಿಸಿರುವ ಪುಸ್ತಕ ಬಿಡುಗಡೆ ಮಾಡಿದರು. 8 ಸಂಪುಟದ ಪುಸ್ತಕದಲ್ಲಿ ಕನ್ನಡವನ್ನು ಅತಿ ಸರಳವಾಗಿ ತಿಳಿಸಲಾಗಿದೆ. ಪ್ರಾಧಿಕಾರದ ವೆಬ್ ತಾಣದಲ್ಲಿ ಉಚಿತವಾಗಿ ವೀಕ್ಷಿಸಬಹುದು ಎಂದು ತಿಳಿಸಿದರು.

ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಮಾತನಾಡಿ, ಅಮೆರಿದಲ್ಲಿ ಇದ್ದಷ್ಟು ಕನ್ನಡ ಅಭಿಮಾನ ಎಲ್ಲೂ ಇಲ್ಲ ಎಂದು ತಮ್ಮ ವಿದೇಶ ಪ್ರವಾಸದಲ್ಲಿ ಆದ ಕನ್ನಡದ ಅನುಭವ ಹಂಚಿಕೊಂಡರು. ಕನ್ನಡಿಗರ ಅಭಿಮಾನ ನಿಜಕ್ಕೂ ದೊಡ್ಡದು ಎಂದು ಕೊಂಡಾಡಿದರು.

ರಂಗಕರ್ಮಿ, ನಟ ಮುಖ್ಯಮಂತ್ರಿ ಚಂದ್ರು,  ವೈಟ್ ಹೌಸ್ ನ ಸಲಹೆಗಾರ ಕೆ.ವಿ.ಕುಮಾರ್, ನಾವಿಕ ಸಮ್ಮೇಳನ ಅಧ್ಯಕ್ಷ ಸುರೇಶ್ ರಾಮಚಂದ್ರ, ಡಾ.ಕೆ.ಮುರಳಿಧರ , ಲಕ್ಷ್ಮೀ ರಾಜ್ ಮಾರ್,  ಡಾ.ಶರಚ್ಚಂದ್ರ ಸ್ವಾಮೀಜಿ, ಭಾರತೀಯ ಸಂಘದ ಮಧುಸೂದನ ಶಾಸ್ತ್ರಿ ಹಾಜರಿದ್ದರು. ಭಾನುವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಹಲವರ ಪ್ರತಿಭೆಗೆ ಸಮ್ಮೇಳನ ವೇದಿಕೆಯಾಗಲಿದೆ.

ಈ ಸುದ್ದಿಯನ್ನೂ ಓದಿ-ಸಾಂಸ್ಕೃತಿಕ ನಗರಿಯಲ್ಲಿ ‘ನಾವಿಕ’ ವಿಶ್ವ ಕನ್ನಡ ಸಮ್ಮೇಳನ