ಹಾಲಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರು ಸಾರಿಗೆ ಸಚಿವರಾಗಿದ್ದಾಗಲೇ 2012ರಲ್ಲಿ ವೇತನ ಪರಿಷ್ಕರಣೆಗಾಗಿ ಸಾರಿಗೆ ನೌಕರರ ಮುಷ್ಕರ ನಡೆಸುವ ಪದ್ಧತಿ ಆರಂಭವಾಯಿತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬೆಂಗಳೂರು (ಮೇ.01): ಹಾಲಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರು ಸಾರಿಗೆ ಸಚಿವರಾಗಿದ್ದಾಗಲೇ 2012ರಲ್ಲಿ ವೇತನ ಪರಿಷ್ಕರಣೆಗಾಗಿ ಸಾರಿಗೆ ನೌಕರರ ಮುಷ್ಕರ ನಡೆಸುವ ಪದ್ಧತಿ ಆರಂಭವಾಯಿತು. ಈಗ ಅದನ್ನು ಮರೆತು ತಮ್ಮ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳು ಅಭಿವೃದ್ದಿಯಲ್ಲಿ ಉತ್ತುಂಗದಲ್ಲಿದ್ದವು ಎಂಬ ಭ್ರಮೆಯಲ್ಲಿದ್ದು, ಅದರಿಂದ ಹೊರಬನ್ನಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Add Asianetnews Kannada as a Preferred SourcegooglePreferred

ಸಾರಿಗೆ ನೌಕರರು ಮೇ 20ರಂದು ಮುಷ್ಕರ ನಡೆಸುವ ಘೋಷಣೆಯ ಕುರಿತು ಸರ್ಕಾರವನ್ನು ಟೀಕಿಸಿರುವ ಆರ್‌.ಅಶೋಕ್‌ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿರುವ ರಾಮಲಿಂಗಾರೆಡ್ಡಿ, ಆರ್‌. ಅಶೋಕ್‌ ಅವರು ಸಾರಿಗೆ ಸಚಿವರಾಗಿದ್ದಾಗಲೇ ಮೊದಲ ಬಾರಿಗೆ ವೇತನ ಪರಿಷ್ಕರಣೆಗಾಗಿ ನೌಕರರು ಮುಷ್ಕರ ನಡೆಸಿದರು. ಅಲ್ಲದೆ, ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿ 15 ದಿನಗಳ ಕಾಲ ಮುಷ್ಕರ ಮಾಡಿಸಿದ ಕೀರ್ತಿಯೂ ಬಿಜೆಪಿ ಪಕ್ಷದ ಆಡಳಿತಕ್ಕೆ ಸಲ್ಲುತ್ತದೆ.

ಅಲ್ಲದೆ, ಕಳೆದ ಬಾರಿ ಬಿಜೆಪಿ ಆಡಳಿತದಲ್ಲಿದ್ದಾಗಲೇ ಎರಡು ಬಾರಿ ಮುಷ್ಕರ ನಡೆದಿದ್ದನ್ನು ಅಶೋಕ್‌ ಮರೆತಿದ್ದಾರೆ. 2020ರ ಡಿಸೆಂಬರ್‌ನಲ್ಲಿ ಹಾಗೂ 2021ರ ಏಪ್ರಿಲ್‌ನಲ್ಲಿ ಮುಷ್ಕರ ನಡೆಸಲಾಗಿತ್ತು. ಆಗ 3500ಕ್ಕೂ ಹೆಚ್ಚಿನ ನೌಕರರನ್ನು ವಜಾ, ಅಮಾನತು ಮಾಡಿ, ಎಫ್‌ಐಆರ್‌ ಹಾಕಿಸಲಾಗಿತ್ತು. ಈಗ ಸಾರಿಗೆ ನೌಕರರ ಬಗ್ಗೆ ಅನುಕಂಪದ ಮಾತನ್ನಾಡಲು ಅಶೋಕ್‌ ಸೇರಿದಂತೆ ಬಿಜೆಪಿ ನಾಯಕರಿಗೆ ಯಾವ ನೈತಿಕತೆಯೂ ಇಲ್ಲ ಎಂದಿದ್ದಾರೆ.

ತಮ್ಮದೇ ಬಿಜೆಪಿ ಸರ್ಕಾರವಿದ್ದಾಗ 2023ರ ಮಾರ್ಚ್‌ನಲ್ಲಿ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಿ, 38 ತಿಂಗಳ ವೇತನ ಹಿಂಬಾಕಿ ಪಾವತಿಸದೇ ಅದನ್ನು ಬಾಕಿ ಇಡಲಾಗಿತ್ತು. ಬಜೆಟ್‌ನಲ್ಲಿಯೂ ಅದಕ್ಕೆ ಅನುದಾನ ಮೀಸಲಿಡದೇ ತಪ್ಪಾದ ಸರ್ಕಾರಿ ಆದೇಶ ಹೊರಡಿಸಿದ್ದೇ ಈ ಎಲ್ಲ ತೊಡಕುಗಳಿಗೆ ಮೂಲ ಕಾರಣವಾಗಿದೆ. ಜತೆಗೆ ನಿಮ್ಮ ಅವಧಿಯಲ್ಲಿ ನಿವೃತ್ತ ನೌಕರರ ವೇತನ ಪರಿಷ್ಕರಣೆ ಉಪಧನ ಬಾಕಿ ಮೊತ್ತ 224 ಕೋಟಿ ರು. ಪಾವತಿಗೂ ಯಾವುದೇ ಅನುದಾನ ನೀಡಲಿಲ್ಲ. ಆದರೆ, ನಮ್ಮ ಸರ್ಕಾರ 2025ರಲ್ಲಿ ಹಣ ಬಿಡುಗಡೆಗೊಳಿಸಿದೆ ಎಂದು ವಿವರಿಸಿದ್ದಾರೆ.

2026ರ ಮಾ. 31ಕ್ಕೆ ಸಾರಿಗೆ ನಿಗಮಗಳ ಬಾಕಿ ಹೊಣೆಗಾರಿಕೆ 7130 ಕೋಟಿ ರು,ಗೆ ತಲುಪಿದ್ದು, ಅದಕ್ಕೆ ಬಿಜೆಪಿ ಆಡಳಿತವೇ ಕಾರಣ. ನಮ್ಮ ಸರ್ಕಾರವು ಸಾರಿಗೆ ನಿಗಮಗಳ ಹೊಣೆಗಾರಿಕೆ ಕಡಿಮೆ ಮಾಡಲು 2025ರಲ್ಲಿ ಬ್ಯಾಂಕ್‌ನಿಂದ 2 ಸಾವಿರ ಕೋಟಿ ರು. ಸಾಲ ಪಡೆಯಲು ಅನುಮತಿಸಿದ್ದು, ಅದನ್ನು ಸರ್ಕಾರವೇ ಪಾವತಿಸಲಿದೆ. ಇನ್ನು, ಪ್ರತಿವರ್ಷ ನಾಲ್ಕು ಸಾರಿಗೆ ನಿಗಮಗಳು ಗಳಿಸುವ ಒಟ್ಟು ಆದಾಯದಲ್ಲಿ ಶೇ. 49.15ರಷ್ಟು ಸಿಬ್ಬಂದಿ ವೆಚ್ಚ (6759.68 ಕೋಟಿ ರು.) ಮತ್ತು ಶೇ. 34.49 ಡೀಸೆಲ್‌ ವೆಚ್ಚ (4744.41 ಕೋಟಿ ರು.)ಕ್ಕೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ನಿಗಮಗಳಿಗೆ ವಾರ್ಷಿಕ ₹1578.18 ಕೋಟಿ ಹೊರೆ

ಕಾರ್ಮಿಕ ಸಂಘಟನೆಗಳ ಬೇಡಿಕೆಗೆ ಸ್ಪಂದಿಸಲು ನಾವು ಹಲವು ಸಭೆ ಮಾಡಿದ್ದು, ಅವರ ಬೇಡಿಕೆಯಂತೆ ಶೇ.25ರಷ್ಟು ವೇತನ ಹೆಚ್ಚಳ ಮಾಡಿದಲ್ಲಿ ಪ್ರತಿ ತಿಂಗಳು ನಾಲ್ಕೂ ನಿಗಮಗಳಿಗೆ 131.52 ಕೋಟಿ ರು., ವಾರ್ಷಿಕ 1578.18 ಕೋಟಿ ರು. ಹಾಗೂ ನಾಲ್ಕು ವರ್ಷಗಳಿಗೆ 6312.23 ಕೋಟಿ ರು. ಹೆಚ್ಚುವರಿ ಹಣ ಭರಿಸಬೇಕಾಗುತ್ತದೆ. ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಯಲ್ಲಿ ಇದು ತೀವ್ರ ಕ್ಲಿಷ್ಟಕರವಾಗಲಿದೆ. ರಾಜ್ಯದ ಉಪಮುಖ್ಯಮಂತ್ರಿ, ಸಾರಿಗೆ ಸಚಿವರಾಗಿದ್ದ ನಿಮಗೆ (ಆರ್‌.ಅಶೋಕ್‌) ಇಷ್ಟೂ ತಿಳಿಯಬಾರದೇ? ಅಲ್ಲದೆ, ಅಷ್ಟೊಂದು ದೊಡ್ಡ ಮೊತ್ತ ಭರಿಸಬೇಕಾದಾಗ ಮುಖ್ಯಮಂತ್ರಿ ಅವರ ಗಮನಕ್ಕೆ ತರದೇ, ಚರ್ಚಿಸದೇ ನಾನು ಏಕಾಏಕಿ ಘೋಷಿಸಲು ಸಾಧ್ಯವೇ? ಅದನ್ನೇ ಕಾರ್ಮಿಕ ಮುಖಂಡರಿಗೂ ತಿಳಿಸಿದ್ದೇನೆ. ಇಷ್ಟಾದರೂ ಮುಷ್ಕರ ಮಾಡುತ್ತೇವೆ ಎಂದರೆ ಅದಕ್ಕೆ ಕಾರ್ಮಿಕ ಮುಖಂಡರೇ ಹೊಣೆಯಾಗುತ್ತಾರೆ ಎಂಬುದನ್ನು ನೀವು ತಿಳಿಯಬೇಕು ಎಂದು ರೆಡ್ಡಿ ತಿಳಿಸಿದ್ದಾರೆ.