ಅಮೇರಿಕಾದಿಂದ ಅಕ್ರಮವಾಗಿ ಜೀವಂತ ಗುಂಡುಗಳು ಮತ್ತು ಗನ್ ಮ್ಯಾಗಝೀನ್ ತಂದಿದ್ದ ಅಮೇರಿಕಾ ಸೇನೆಯ ಮಾಜಿ ಸೈನಿಕ ಮುತ್ತಾರ್ ಅರ್ಮಾನ್‌ನನ್ನು ಬೆಂಗಳೂರಿನ ಜೆ.ಸಿ. ನಗರ ಪೊಲೀಸರು ಬಂಧಿಸಿದ್ದಾರೆ. ಜಯಮಹಲ್ ಪ್ಯಾಲೇಸ್ ಲಾಡ್ಜ್‌ನಲ್ಲಿ ತಂಗಿದ್ದ ಈತ, ರೂಂ ಖಾಲಿ ಮಾಡಿದ ನಂತರ ಬುಲೆಟ್‌ಗಳನ್ನು ಮರೆತು ಹೋಗಿದ್ದನು.

ಬೆಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಕಠಿಣ ಸುರಕ್ಷತಾ ತಪಾಸಣೆ ಹಾಗೂ ಉಭಯ ದೇಶಗಳ ಕಸ್ಟಮ್ಸ್ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ, ಅಮೇರಿಕಾದಿಂದ ಅತ್ಯಂತ ಅಪಾಯಕಾರಿ ಜೀವಂತ ಗುಂಡುಗಳು ಮತ್ತು ಗನ್ ಮ್ಯಾಗಝೀನ್ ಅನ್ನು ಸಿಲಿಕಾನ್ ಸಿಟಿಗೆ ತಂದಿದ್ದ ಅಮೇರಿಕಾ ಆರ್ಮಿಯ ಮಾಜಿ ಸೈನಿಕನನ್ನು ಜೆ.ಸಿ. ನಗರ ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಬಂಧಿತ ಆರೋಪಿಯನ್ನು ಮುತ್ತಾರ್ ಅರ್ಮಾನ್ (ಮುತ್ತಾರ್ ರೆಹಮಾನ್) ಎಂದು ಗುರುತಿಸಲಾಗಿದೆ. ಈತ ಜೆ.ಸಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಸಿದ್ಧ 'ಜಯಮಹಲ್ ಪ್ಯಾಲೇಸ್' ಲಾಡ್ಜ್‌ನಲ್ಲಿ ತಂಗಿದ್ದಾಗ ಈ ಇಡೀ ಹೈಡ್ರಾಮಾ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ತಳ್ಳಲಾಗಿದೆ.

ಮೂಲತಃ ಭಾರತದವನು, ಈಗ ಅಮೇರಿಕಾ ಸಿಟಿಜನ್!

ಬಂಧಿತ ಮುತ್ತಾರ್ ಅರ್ಮಾನ್ ಕುರಿತು ಪೊಲೀಸರು ತನಿಖೆ ನಡೆಸಿದಾಗ ಹಲವು ರೋಚಕ ಸಂಗತಿಗಳು ಹೊರಬಿದ್ದಿವೆ. ಈತ ಮೂಲತಃ ಭಾರತದವನೇ ಆಗಿದ್ದು, ವರ್ಷಗಳ ಹಿಂದೆ ಅಮೇರಿಕಾಕ್ಕೆ ವಲಸೆ ಹೋಗಿ ಅಲ್ಲಿನ ಪೌರತ್ವ (US Citizenship) ಪಡೆದುಕೊಂಡಿದ್ದನು. ಅಮೇರಿಕಾದಲ್ಲಿ ನೆಲೆಸಿದ ಬಳಿಕ ಅಲ್ಲಿನ ಪ್ರತಿಷ್ಠಿತ ಅಮೇರಿಕಾ ಆರ್ಮಿಯಲ್ಲೂ (US Army) ಸೈನಿಕನಾಗಿ ಕೆಲಸ ನಿರ್ವಹಿಸಿದ್ದನು. ಆದರೆ, ಸದ್ಯ ಈತ ಆರ್ಮಿ ಕೆಲಸದಲ್ಲಿ ಮುಂದುವರಿದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಲಾಡ್ಜ್ ರೂಂನಲ್ಲಿ ಮರೆತುಹೋಗಿದ್ದ ಮ್ಯಾಗಝೀನ್ ಮತ್ತು ಬುಲೆಟ್!

ಕೆಲ ದಿನಗಳ ಹಿಂದೆ ಮುತ್ತಾರ್ ಅರ್ಮಾನ್ ಯುವತಿಯೊಬ್ಬಳ ಜೊತೆ ಜಯಮಹಲ್ ಪ್ಯಾಲೇಸ್ ಲಾಡ್ಜ್‌ಗೆ ಬಂದು ರೂಮ್ ಬುಕ್ ಮಾಡಿದ್ದನು. ರೂಮ್ ಪಡೆಯಲು ತನ್ನ ಅಮೇರಿಕಾ ಪಾಸ್‌ಪೋರ್ಟ್ ಹಾಗೂ ಇತರೆ ದಾಖಲೆಗಳನ್ನು ನೀಡಿದ್ದನು. ಕೆಲವು ದಿನಗಳ ವಾಸ್ತವ್ಯದ ನಂತರ ಈತ ಯುವತಿಯೊಂದಿಗೆ ರೂಮ್ ಖಾಲಿ ಮಾಡಿ (ಚೆಕ್ ಔಟ್) ಹೊರಟು ಹೋಗಿದ್ದನು.

ಆದರೆ, ಲಾಡ್ಜ್‌ನಿಂದ ಹೊರಟ ಸ್ವಲ್ಪ ಸಮಯದ ಬಳಿಕ ಲಾಡ್ಜ್ ಮ್ಯಾನೇಜರ್‌ಗೆ ಸ್ವತಃ ಮುತ್ತಾರ್ ಅರ್ಮಾನ್ ಕರೆ ಮಾಡಿದ್ದಾನೆ. "ನನ್ನ ರೂಂನಲ್ಲಿ ಕೆಲವು ಬುಲೆಟ್‌ಗಳನ್ನು ಮರೆತು ಇಟ್ಟಿದ್ದೇನೆ, ದಯವಿಟ್ಟು ಅದನ್ನು ಸುರಕ್ಷಿತವಾಗಿ ಎತ್ತಿಡಿ. ಎರಡು ದಿನಗಳ ಬಳಿಕ ಬಂದು ನಾನೇ ಅದನ್ನು ತೆಗೆದುಕೊಂಡು ಹೋಗುತ್ತೇನೆ," ಎಂದು ಮ್ಯಾನೇಜರ್ ಬಳಿ ಹೇಳಿದ್ದಾನೆ.

ಸರ್ಚ್ ಮಾಡಿದಾಗ ಬೆಚ್ಚಿಬಿದ್ದ ಲಾಡ್ಜ್ ಸಿಬ್ಬಂದಿ!

ಗ್ರಾಹಕನ ಕರೆಯಿಂದ ಅನುಮಾನಗೊಂಡ ಲಾಡ್ಜ್ ಮ್ಯಾನೇಜರ್ ತಕ್ಷಣವೇ ಸಿಬ್ಬಂದಿಯೊಂದಿಗೆ ಆತ ತಂಗಿದ್ದ ರೂಮ್‌ಗೆ ತೆರಳಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಲ್ಲಿ ಅಮೇರಿಕಾ ನಿರ್ಮಿತ ಅತ್ಯಾಧುನಿಕ ಗನ್ ಮ್ಯಾಗಝೀನ್ ಹಾಗೂ ಅದರಲ್ಲಿದ್ದ ಜೀವಂತ ಗುಂಡುಗಳು (Live Bullets) ಪತ್ತೆಯಾಗಿವೆ. ಎರಡು ದಿನ ಕಳೆದರೂ ಆರೋಪಿ ಮುತ್ತಾರ್ ಬುಲೆಟ್ ಪಡೆಯಲು ವಾಪಸ್ ಬಾರದಿದ್ದಾಗ ಆತಂಕಗೊಂಡ ಲಾಡ್ಜ್ ಮ್ಯಾನೇಜರ್ ತಕ್ಷಣವೇ ಜೆ.ಸಿ. ನಗರ ಪೊಲೀಸ್ ಠಾಣೆಗೆ ತೆರಳಿ ಮ್ಯಾಗಝೀನ್ ಒಪ್ಪಿಸಿ ದೂರು ದಾಖಲಿಸಿದ್ದಾರೆ.

ವಿಚಾರಣೆ ವೇಳೆ ಕಸ್ಟಮ್ಸ್ ಭದ್ರತಾ ಲೋಪ ಬಯಲು!

ಪ್ರಕರಣ ದಾಖಲಿಸಿಕೊಂಡ ಜೆ.ಸಿ. ನಗರ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿ ಮುತ್ತಾರ್ ಅರ್ಮಾನ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ವಶಪಡಿಸಿಕೊಳ್ಳಲಾದ ಗುಂಡುಗಳು ಸಂಪೂರ್ಣವಾಗಿ 'ಅಮೇರಿಕಾ ಮೇಡ್' (US Made Bullets) ಆಗಿರುವುದು ದೃಢಪಟ್ಟಿದೆ.

ಆದರೆ, ಯಾವುದೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತೀವ್ರ ಭದ್ರತಾ ತಪಾಸಣೆ ಹಾಗೂ ಸ್ಕ್ಯಾನಿಂಗ್ ಇರುತ್ತದೆ. ಇಷ್ಟಿದ್ದರೂ ಅಮೇರಿಕಾದಿಂದ ಭಾರತಕ್ಕೆ ಬರುವಾಗ ಮುತ್ತಾರ್ ಅರ್ಮಾನ್ ಎರಡು ದೇಶಗಳ ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳನ್ನು ಯಾಮಾರಿಸಿ ಈ ಜೀವಂತ ಗುಂಡುಗಳನ್ನು ತಂದಿದ್ದು ಹೇಗೆ? ಎಂಬುದು ಪೊಲೀಸರಿಗೂ ದೊಡ್ಡ ಆಶ್ಚರ್ಯ ಮೂಡಿಸಿದೆ. ಏರ್‌ಪೋರ್ಟ್ ಸುರಕ್ಷತಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿರುವ ಈ ತಾಂತ್ರಿಕ ಲೋಪದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸದ್ಯ ಕಾನೂನುಬಾಹಿರವಾಗಿ ಯುದ್ಧ ಸಾಮಗ್ರಿಗಳನ್ನು ಹೊಂದಿದ್ದ ಆರೋಪದಡಿ ಮುತ್ತಾರ್ ಅರ್ಮಾನ್‌ನನ್ನು ಜೆ.ಸಿ. ನಗರ ಪೊಲೀಸರು ಬಂಧಿಸಿದ್ದಾರೆ. ಈತ ಈ ಬುಲೆಟ್‌ಗಳನ್ನು ಬೆಂಗಳೂರಿಗೆ ತಂದಿದ್ದರ ಹಿಂದೆ ಬೇರೆನಾದರೂ ಕರಾಳ ಸಂಚಿತ್ತೇ ಅಥವಾ ಕೇವಲ ನಿರ್ಲಕ್ಷ್ಯವೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.