PM Modi In Karnataka: ಕೇಸರಿ ಹೂವಿನಲ್ಲೇ ಮುಳುಗಿದ ಮೋದಿ ಕಾರು, ಮಂಡ್ಯ ಪ್ರೀತಿಗೆ ನಮೋ ಎಂದ ಪಿಎಂ!
ಮಂಡ್ಯದ ಐ.ಬಿ. ಸರ್ಕಲ್‌ನಿಂದ ನಂದಾ ವೃತ್ತದವರೆಗೆ ಈ ರೋಡ್ ಶೋ ನಡೆಯುತ್ತಿದ್ದು, ರಸ್ತೆಯ ಇಕ್ಕೆಲಗಳಲ್ಲೂ ಜನಸಾಗರ ಸೇರಿದೆ. ಪ್ರಧಾನಿ ಮೋದಿ ಕಾರಿನ ಹೊರಗೆ ನಿಂತುಕೊಂಡು ಜನರತ್ತ ಕೈಬೀಸಿದ್ದು, ಜನರು ಮೋದಿ ಮೋದಿ ಘೋಷಣೆ ಮಾಡಿದ್ದಾರೆ.
ಮಂಡ್ಯ (ಮಾರ್ಚ್ 12, 2023): ಪ್ರಧಾನಿ ಮೋದಿ ಮಂಡ್ಯಕ್ಕೆ ಆಗಮಿಸಿದ್ದು, ಈ ಮೂಲಕ ಸಕ್ಕರೆ ನಾಡಲ್ಲಿ ಕಮಲ ಪರ ಮತಬೇಟೆ ನಡೆಸಲು ಸಜ್ಜಾಗಿದ್ದಾರೆ. ದೆಹಲಿ ಏರ್‌ಪೋರ್ಟ್‌ನಿಂದ ಮೈಸೂರಿನ ಏರ್‌ಪೋರ್ಟ್‌ಗೆ ಪ್ರಧಾನಿ ಮೋದಿ ಆಗಮಿಸಿ, ನಂತರ ವಿಶೇಷ ಹೆಲಿಕಾಪ್ಟರ್ ಮೂಲಕ ಮಂಡ್ಯದ ಪಿಇಎಸ್ ಕಾಲೇಜಿಗೆ ಲ್ಯಾಂಡ್ ಆಗಿದ್ದಾರೆ. ನಂತರ, ಮಂಡ್ಯದಲ್ಲಿ ಪ್ರಧಾನಿ ಮೋದಿ 1.8. ಕಿ.ಮೀ ದೂರದ ರೋಡ್ ಶೋ ಅನ್ನು ಸಹ ಪ್ರಧಾನಿ ಮೋದಿ ನಡೆಸುತ್ತಿದ್ದಾರೆ.
ಮಂಡ್ಯದ ಐ.ಬಿ. ಸರ್ಕಲ್‌ನಿಂದ ನಂದಾ ವೃತ್ತದವರೆಗೆ ಈ ರೋಡ್ ಶೋ ನಡೆಯುತ್ತಿದ್ದು, ರಸ್ತೆಯ ಇಕ್ಕೆಲಗಳಲ್ಲೂ ಜನಸಾಗರ ಸೇರಿದೆ. ಪ್ರಧಾನಿ ಮೋದಿ ಕಾರಿನ ಹೊರಗೆ ನಿಂತುಕೊಂಡು ಜನರತ್ತ ಕೈಬೀಸಿದ್ದು, ಜನರು ಮೋದಿ ಮೋದಿ ಘೋಷಣೆ ಮಾಡಿದ್ದಾರೆ. ಜತೆಗೆ ಜೈ ಶ್ರೀರಾಮ್ ಹಾಗೂ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನೂ ಮೊಳಗಿದ್ದಾರೆ. ಮೋದಿಯತ್ತ ಜನರು ಹೂಗಳನ್ನು ಎರಚುತ್ತಿದ್ದು, ಪ್ರಧಾನಿಯ ತಲೆ ಮೇಲೆ ಹಾಗೂ ಕಾರಿನ ತುಂಬಾ ಹೂ ಮಳೆ ಬೀಳುತ್ತಿತ್ತು. ನಂತರ, ನೂತನ ದಶಪಥ ಹೆದ್ದಾರಿ ಪ್ರವೇಶಿಸಿದ ಪ್ರಧಾನಿ ಹನಕೆರೆ ಸೇತುವೆ ಬಳಿ ಕಾರಿನಿಂದ ಕೆಳಗಿಳಿದು ಅಭಿಮಾನಿಗಳತ್ತ ಕೈ ಬೀಸಿದ್ದರು ಹಾಗೂ ಜಾನಪದ ಕಲಾ ತಂಡಗಳತ್ತ ತೆರಳಿದ್ದರು. ಈ ಮೂಲಕ ಬೆಂಗಳೂರು - ಮೈಸೂರು ಹೆದ್ದಾರಿಗೆ ಚಾಲನೆಯನ್ನೂ ಕೊಟ್ರು.
ಇದನ್ನು ಓದಿ: PM Modi In Karnataka: ಮೈಸೂರಿಗೆ ಆಗಮಿಸಿದ ಮೋದಿ, ಮಂಡ್ಯದತ್ತ ಪ್ರಯಾಣ!
ದಳಪತಿಗಳ ಭದ್ರಕೋಟೆ ಎಂದೇ ಹೆಸರಾದ ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯ ಜಿಲ್ಲೆಯಲ್ಲಿ ಮೋದಿ ಭೇಟಿ ಕೊಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕಮಲ ಅರಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಕೆ.ಆರ್. ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಮೂಲಕ ಈ ಹೆಜ್ಜೆ ಇಟ್ಟಿದೆ. ಜತೆಗೆ, ಮಂಡ್ಯ ಸಂಸದೆ ಸುಮಲತಾ ಬಿಜೆಪಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದು, ಈ ಹಿನ್ನೆಲೆ ಬಿಜೆಪಿಗೆ ಮತ್ತಷ್ಟು ಬಲ ಸಿಗುವ ವಿಶ್ವಾಸದಲ್ಲಿದೆ ಬಿಜೆಪಿ. ಇದಕ್ಕೆ ತಕ್ಕಂತೆ ಮೋದಿ ರೋಡ್‌ಶೋದಲ್ಲಿ ಜನಸಾಗರವೂ ಸೇರಿದ್ದು, ಹೆಚ್ಚಿನ ಜನರು ಮೋದಿ ಪರ ಘೋಷಣೆ ಮಾಡುತ್ತಿದ್ದಾರೆ.
ಈ ನಡುವೆ ಗಮನಿಸಬೇಕಾದ ಮಾಹಿತಿ ಏನೆಂದರೆ, ಮಂಡ್ಯಕ್ಕೆ ದೇಶದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು 44 ವರ್ಷಗಳ ಬಳಿಕ ಎನ್ನುವುದು. ಹೌದು, ಮಂಡ್ಯಕ್ಕೆ ದೇಶದ ಪ್ರಧಾನಿ ಭೇಟಿ ನೀಡುತ್ತಿರುವುದು ಇದು ನಾಲ್ಕನೇ ಬಾರಿ. 1979ರ ಬಳಿಕ ಮೊದಲ ಬಾರಿಗೆ ದೇಶದ ಪ್ರಧಾನಿಯೊಬ್ಬರು ಸಕ್ಕರೆ ನಾಡಿನಲ್ಲಿ ಕಾಲಿಡುತ್ತಿದ್ದಾರೆ. ಅದಕ್ಕಾಗಿಯೇ ಮಂಡ್ಯದಲ್ಲಿ ವಿವಿಧ ಕಲಾತಂಡಗಳು ಮೋದಿ ಅವರ ಸ್ವಾಗತಕ್ಕೆ ಸಿದ್ಧವಾಗಿದೆ.
ಇದನ್ನೂ ಓದಿ: PM Modi In Karnataka: 44 ವರ್ಷಗಳ ಬಳಿಕ ಮಂಡ್ಯಕ್ಕೆ ಪ್ರಧಾನಿ ಭೇಟಿ!
ಮಂಡ್ಯಕ್ಕೆ ಭೇಟಿ ಕೊಟ್ಟ ಮೊದಲ ಪ್ರಧಾನಿ ಜವಹರಲಾಲ್ ನೆಹರು. 1962ರಲ್ಲಿ ಮಂಡ್ಯ ಜಿಲ್ಲಾ ಕ್ರೀಡಾಂಗಣಕ್ಕೆ ನೆಹರು ಆಗಮಿಸಿದ್ದರು. ಅಂದು ಲೋಕಸಭೆಗೆ ಸ್ಪರ್ಧೆ ಮಾಡಿದ್ದ ಎಂಕೆ ಶಿವನಂಜಪ್ಪ ಅವರ ಪರವಾಗಿ ಮತ ಕೇಳಲು ನೆಹರು ಆಗಮಿಸಿದ್ದರು. ಅದಾದ ಬಳಿಕ 1979ರಲ್ಲಿ ಮತ್ತೊಮ್ಮೆ ಪ್ರಧಾನಿ ಮಂಡ್ಯಕ್ಕೆ ಭೇಟಿ ನೀಡಿದ್ದರು. ದೇವರಾಜು ಅರಸು ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮಕ್ಕಾಗಿ ಪ್ರಧಾನಿ ಚರಣ್ ಸಿಂಗ್ ಅವರು ಮಂಡ್ಯಕ್ಕೆ ಭೇಟಿ ನೀಡಿದ್ದರು. ಇದರ ನಡುವೆ 1977ರಲ್ಲಿ ಇಂದಿರಾ ಗಾಂಧಿ ಕೂಡ ಮಂಡ್ಯಕ್ಕೆ ಆಗಮಿಸಿದ್ದರು. ಅಂದು ಲೋಕಸಭೆಗೆ ಸ್ಪರ್ಧಿಸಿದ್ದ ಚಿಕ್ಕಲಿಂಗಯ್ಯ ಪರ ಪ್ರಚಾರಕ್ಕಾಗಿ ಇಂದಿರಾ ಗಾಂಧಿ ಬಂದಿದ್ದರು. ಮಂಡ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಈಗ ಮೋದಿ ಆಗಮನದ ಮೂಲಕ 44 ವರ್ಷಗಳ ಬಳಿಕ ಪ್ರಧಾನಿಯೊಬ್ಬರು ಭೇಟಿ ನೀಡಿದ್ದು, ಜನ ಅದ್ಧೂರಿ ಸ್ವಾಗತ ಕೋರಿದ್ದಾರೆ.
ಇನ್ನು ನರೇಂದ್ರ ಮೋದಿ ಮಮಡ್ಯಕ್ಕೆ ಭೇಟಿ ನೀಡುತ್ತಿರುವುದು ಇದು 2ನೇ ಬಾರಿಯಾಗಿದೆ. ಈ ಹಿಂದೆ 2004ರಲ್ಲಿ ಗುಜರಾತ್ ಸಿಎಂ ಆಗಿದ್ದಾಗ ಮಂಡ್ಯಕ್ಕೆ ಭೇಟಿ ನೀಡಿದ್ದರು. ಮದ್ದೂರು ಕ್ರೀಡಾಂಗಣಕ್ಕೆ ಬಿಜೆಪಿ ಅಭ್ಯರ್ಥಿ ಮಹೇಶ್ ಚಂದ್ ಪರ ಪ್ರಚಾರಕ್ಕೆ ಮೋದಿ ಆಗಮಿಸಿದ್ದರು.ಇನ್ನು ಪ್ರಧಾನಿಯಾಗಿ ಮೊದಲ ಬಾರಿ ಮಂಡ್ಯಕ್ಕೆ ಮೋದಿ ಭೇಟಿ ನೀಡಿದ್ದಾರೆ.