PM Modi In Karnataka: 44 ವರ್ಷಗಳ ಬಳಿಕ ಮಂಡ್ಯಕ್ಕೆ ಪ್ರಧಾನಿ ಭೇಟಿ!
ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಮಂಡ್ಯ ಭರ್ಜರಿಯಾಗಿ ಸಿದ್ಧವಾಗಿದೆ, ಗಜ್ಜಲಗೆರೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೂ ಮುನ್ನ ಅಂದಾಜು 2 ಕಿಲೋಮೀಟರ್ ರೋಡ್‌ಶೋಅನ್ನು ನರೇಂದ್ರ ಮೋದಿ ಮಾಡಲಿದ್ದಾರೆ. ವಿಶೇಷ ಮಾಹಿತಿ ಎಂದರೆ ಅಂದಾಜು 44 ವರ್ಷಗಳ ಬಳಿಕ ದೇಶದ ಪ್ರಧಾನಿಯೊಬ್ಬರು ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ.
ಮಂಡ್ಯ (ಮಾ.12): ಬೆಂಗಳೂರು ಮೈಸೂರು ಐತಿಹಾಸಿಕ ರಾಷ್ಟ್ರೀಯ ಹೆದ್ದಾರಿಯ ಲೋಕಾರ್ಪಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಮೈಸೂರು ಏರ್‌ಪೋರ್ಟ್‌ಗೆ ಆಗಮಿಸಿದ್ದಾರೆ. ಅಲ್ಲಿಂದ ಮಂಡ್ಯಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮಾಡಲಿದ್ದು, ಗಜ್ಜಲಗೆರೆಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನ ಅಂದಾಜು 2 ಕಿಲೋಮೀಟರ್ ರೋಡ್‌ಶೋನಲ್ಲಿ ಭಾಗಿಯಾಗಲಿದ್ದಾರೆ. ಚುನಾವಣೆಯ ದೃಷ್ಟಿಯಿಂದ ನೋಡುವುದಾದರೆ, ಜೆಡಿಎಸ್‌ನ ಭದ್ರಕೋಟೆಯಾಗಿರುವ ಹಳೆ ಮೈಸೂರು ಭಾಗದಲ್ಲಿ ಮಂಡ್ಯ ಪ್ರಮುಖವಾದದ್ದು. ಜೆಡಿಎಸ್‌ನ ಭದ್ರಕೋಟೆಯನ್ನು ಒಡೆಯುವ ನಿಟ್ಟಿನಲ್ಲಿ ಮೋದಿ ಭೇಟಿಯನ್ನು ರಾಜಕೀಯ ವಿಶ್ಲೇಷಕರು ಮಹತ್ವದ ಕಾರ್ಯಕ್ರಮ ಎಂದು ಬಿಂಬಿಸಿದ್ದಾರೆ. ಈ ನಡುವೆ ಗಮನಿಸಬೇಕಾದ ಮಾಹಿತಿ ಏನೆಂದರೆ, ಮಂಡ್ಯಕ್ಕೆ ದೇಶದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು 44 ವರ್ಷಗಳ ಬಳಿಕ ಎನ್ನುವುದು. ಹೌದು, ಮಂಡ್ಯಕ್ಕೆ ದೇಶದ ಪ್ರಧಾನಿ ಭೇಟಿ ನೀಡುತ್ತಿರುವುದು ಇದು ನಾಲ್ಕನೇ ಬಾರಿ. 1979ರ ಬಳಿಕ ಮೊದಲ ಬಾರಿಗೆ ದೇಶದ ಪ್ರಧಾನಿಯೊಬ್ಬರು ಸಕ್ಕರೆ ನಾಡಿನಲ್ಲಿ ಕಾಲಿಡುತ್ತಿದ್ದಾರೆ. ಅದಕ್ಕಾಗಿಯೇ ಮಂಡ್ಯದಲ್ಲಿ ವಿವಿಧ ಕಲಾತಂಡಗಳು ಮೋದಿ ಅವರ ಸ್ವಾಗತಕ್ಕೆ ಸಿದ್ಧವಾಗಿದೆ.
ಮಂಡ್ಯಕ್ಕೆ ಭೇಟಿ ಕೊಟ್ಟ ಮೊದಲ ಪ್ರಧಾನಿ ಜವಹರಲಾಲ್ ನೆಹರು. 1962ರಲ್ಲಿ ಮಂಡ್ಯ ಜಿಲ್ಲಾ ಕ್ರೀಡಾಂಗಣಕ್ಕೆ ನೆಹರು ಆಗಮಿಸಿದ್ದರು. ಅಂದು ಲೋಕಸಭೆಗೆ ಸ್ಪರ್ಧೆ ಮಾಡಿದ್ದ ಎಂಕೆ ಶಿವನಂಜಪ್ಪ ಅವರ ಪರವಾಗಿ ಮತ ಕೇಳಲು ನೆಹರು ಆಗಮಿಸಿದ್ದರು. ಅದಾದ ಬಳಿಕ 1979ರಲ್ಲಿ ಮತ್ತೊಮ್ಮೆ ಪ್ರಧಾನಿ ಮಂಡ್ಯಕ್ಕೆ ಭೇಟಿ ನೀಡಿದ್ದರು. ದೇವರಾಜು ಅರಸು ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮಕ್ಕಾಗಿ ಪ್ರಧಾನಿ ಚರಣ್ ಸಿಂಗ್ ಅವರು ಮಂಡ್ಯಕ್ಕೆ ಭೇಟಿ ನೀಡಿದ್ದರು. ಇದರ ನಡುವೆ 1977ರಲ್ಲಿ ಇಂದಿರಾ ಗಾಂಧಿ ಕೂಡ ಮಂಡ್ಯಕ್ಕೆ ಆಗಮಿಸಿದ್ದರು. ಅಂದು ಲೋಕಸಭೆಗೆ ಸ್ಪರ್ಧಿಸಿದ್ದ ಚಿಕ್ಕಲಿಂಗಯ್ಯ ಪರ ಪ್ರಚಾರಕ್ಕಾಗಿ ಇಂದಿರಾ ಗಾಂಧಿ ಬಂದಿದ್ದರು. ಮಂಡ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಈಗ ಮೋದಿ ಆಗಮನದ ಮೂಲಕ 44 ವರ್ಷಗಳ ಬಳಿಕ ಪ್ರಧಾನಿ ಸ್ವಾಗತಕ್ಕೆ ಮಂಡ್ಯ ಸಜ್ಜಾಗಿದೆ.
ಇನ್ನು ನರೇಂದ್ರ ಮೋದಿ ಮಮಡ್ಯಕ್ಕೆ ಭೇಟಿ ನೀಡುತ್ತಿರುವುದು ಇದು 2ನೇ ಬಾರಿಯಾಗಿದೆ. ಈ ಹಿಂದೆ 2004ರಲ್ಲಿ ಗುಜರಾತ್ ಸಿಎಂ ಆಗಿದ್ದಾಗ ಮಂಡ್ಯಕ್ಕೆ ಭೇಟಿ ನೀಡಿದ್ದರು. ಮದ್ದೂರು ಕ್ರೀಡಾಂಗಣಕ್ಕೆ ಬಿಜೆಪಿ ಅಭ್ಯರ್ಥಿ ಮಹೇಶ್ ಚಂದ್ ಪರ ಪ್ರಚಾರಕ್ಕೆ ಮೋದಿ ಆಗಮಿಸಿದ್ದರು.ಇನ್ನು ಪ್ರಧಾನಿಯಾಗಿ ಮೊದಲ ಬಾರಿ ಮಂಡ್ಯಕ್ಕೆ ಮೋದಿ ಭೇಟಿ ನೀಡುತ್ತಿದ್ದಾರೆ.
ಇನ್ನು ಮೋದಿ ಅವರನ್ನು ಸ್ವಾಗತಿಸಲು ಮಂಡ್ಯ ಬಿಜೆಪಿ ಭರ್ಜರಿಯಾಗಿ ಸಿದ್ಧವಾಗಿದೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಪ್ರಧಾನಿ ಅವರನ್ನು ಸ್ವಾಗತಿಸಲಿದ್ದಾರೆ. ಪಂಚೆ, ಶರ್ಟು ಧರಿಸಿ ನಾಯಕರು ಮಿಂಚುತಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಸಿಪಿ ಉಮೇಶ್ ನೇತೃತ್ವದಲ್ಲಿ ರೋಡ್ ಶೋ ಸ್ಥಳ ಪರಿಶೀಲನೆಯನ್ನೂ ಮಾಡಲಾಗಿದೆ. ಸಂಜಯ ವೃತ್ತದಲ್ಲಿ ಬಿಜೆಪಿ ನಿಯೋಗ ಕೂಡ ಪರಿಶೀಲನೆ ನಡೆಸಿದೆ ಈ ತಂಡದಲ್ಲಿ ನಿರ್ಮಲ್ ಕುಮಾರ್ ಸುರಾನ, ಅಶೋಕ್ ಜಯರಾಂ ಸೇರಿದಂತೆ ಹಲವರು ಭಾಗಯಾಗಿದ್ದರು.