‘ನಮ್ಮ ಮೆಟ್ರೋ’ ಹೆಸರು ಬದಲಾವಣೆ: ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಜೋರು!
‘ಸಂಪೂರ್ಣ ಮೆಟ್ರೋ ರೈಲು ಜಾಲಕ್ಕೆ ಬಸವಣ್ಣನವರ ಹೆಸರಿಡುವ ಬಗ್ಗೆ ಸಲಹೆಗಳು ಬಂದಿವೆ’ ಎಂಬ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು (ಅ.30): ‘ಸಂಪೂರ್ಣ ಮೆಟ್ರೋ ರೈಲು ಜಾಲಕ್ಕೆ ಬಸವಣ್ಣನವರ ಹೆಸರಿಡುವ ಬಗ್ಗೆ ಸಲಹೆಗಳು ಬಂದಿವೆ’ ಎಂಬ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
ಹಲವರು ಹೆಸರು ಬದಲಾವಣೆ ವಿರೋಧಿಸಿ ‘ನಮ್ಮ ಮೆಟ್ರೋ’ ಹೆಸರೇ ಇರಲಿ ಎಂದಿದ್ದರೆ, ಇನ್ನು ಹಲವರು ಬದಲಾವಣೆಗೆ ವಿವಿಧ ಹೆಸರುಗಳನ್ನೂ ಪ್ರಸ್ತಾಪಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ ಕಾರ್ಪ್‌ನಲ್ಲಿ ಈ ಸಂಬಂಧ ನಗರದ ಮೆಟ್ರೋ ಪ್ರಯಾಣಿಕರು ಹಲವಾರು ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುರಂಗದಿಂದ ಹೊರಬಂದ ರುದ್ರ, ನಮ್ಮ ಮೆಟ್ರೋಗೆ ಮತ್ತೊಂದು ಯಶಸ್ಸು!
ಸಾಮಾಜಿಕ ಬದಲಾವಣೆ, ಸಮಾನತೆಯ ಹರಿಕಾರ ಬಸವಣ್ಣನವರ ಹೆಸರನ್ನು ಮೆಟ್ರೋಕ್ಕೆ ‘ನಮ್ಮ ಬಸವ’, ‘ಬಸವ ಮೆಟ್ರೋ’ ಎಂದಿಡಬೇಕು ಎಂಬ ಸಲಹೆ ನೀಡಿದ್ದಾರೆ. ಇನ್ನೂ ಕೆಲವರು ನಾಡಪ್ರಭು ಕೆಂಪೇಗೌಡ ಮೆಟ್ರೋ ಎಂದು ಹೆಸರಿಸಬೇಕು, ಮೊದಲು ಮೆಟ್ರೋ ಕನಸು ಕಂಡ ನಟ ಶಂಕರ್‌ನಾಗ್ ಅವರ ಹೆಸರನ್ನೇ ಇಡಬೇಕು. ಅಣ್ಣಾವ್ರು ಡಾ। ರಾಜ್‌ಕುಮಾರ್ ಹೆಸರಿಡಬೇಕು ಎಂಬ ಅಭಿಪ್ರಾಯಗಳೂ ‘ಎಕ್ಸ್’ ಕಾರ್ಪ್‌ನಲ್ಲಿ ವ್ಯಕ್ತವಾಗಿವೆ.
ಇದೇ ವೇಳೆ ಅನೇಕರು ಈಗಿರುವ ನಮ್ಮ ಮೆಟ್ರೋ ಎಂಬ ಹೆಸರೇ ಉಳಿಬೇಕು. ಯಾವುದೇ ಐತಿಹಾಸಿಕ, ಸಾಮಾಜಿಕ ಹರಿಕಾರರು, ರಾಜಕಾರಣಿಯ, ಸಿನಿಮಾ ನಟರ ಹೆಸರಿಡುವುದು ಬೇಡ. ಈಗಿನ ಪೀಳಿಗೆಗೆ ಮೆಟ್ರೋದ ಶ್ರೇಯಸ್ಸು ಸಲ್ಲಬೇಕು. ಹೀಗಾಗಿ ಈಗಿನ ಹೆಸರೂ ನಮಗೆ ಸೇರಿದ್ದು. ಕಳೆದ ಹನ್ನೆರಡು ವರ್ಷಗಳಿಂದ ‘ನಮ್ಮ ಮೆಟ್ರೋ’ ಹೆಸರಿದ್ದು, ಭಾವನಾತ್ಮಕವಾಗಿಯೂ ಜನರ ಮನಸ್ಸಲ್ಲಿ ಹಾಸುಹೊಕ್ಕಾಗಿದೆ. ಪ್ರತಿದಿನ ಲಕ್ಷಾಂತರ ಜನ ಇದನ್ನೇ ಬಳಸುತ್ತಿದ್ದಾರೆ. ಹೀಗಾಗಿ ಅನಗತ್ಯವಾಗಿ ಬದಲಿಸುವುದು ಬೇಡ ಎಂದು ಹಲವರು ಪೋಸ್ಟ್ ಮಾಡಿದ್ದಾರೆ.
ಪ್ರಮುಖ ನಿಲ್ದಾಣಕ್ಕೆ ಅಥವಾ ಚೇಂಜ್ ಓವರ್ ಜಂಕ್ಷನ್‌ಗೆ ಬಸವೇಶ್ವರರ ಅವರ ಹೆಸರನ್ನು ಇಡುವುದು ಸೂಕ್ತ. ನಮ್ಮ ಮೆಟ್ರೋ ಯಾವಾಗಲು ನಮ್ಮ ಮೆಟ್ರೋ ಆಗಿರಲಿ. ರಾಜಕೀಯ ಕಾರಣಕ್ಕೆ ಹೆಸರು ಬದಲಾವಣೆ ಬೇಡ ಎಂದು ಹೇಳಿದ್ದಾರೆ.
ಮೆಟ್ರೋ 3ನೇ ಹಂತಕ್ಕೆ ಒಪ್ಪಿಗೆ ನೀಡಿ: ಪ್ರಧಾನಿಗೆ ಸಿದ್ದರಾಮಯ್ಯ ಮನವಿ
ಕಾರಿಡಾರ್‌ಗಳ ಹೆಸರು ಬದಲಿಸಲೂ ಒತ್ತಾಯ
ನಮ್ಮ ಮೆಟ್ರೋದಲ್ಲಿರುವ ಮಾರ್ಗಗಳಿಗೆ ಈಗ ಬಣ್ಣಗಳ ಹೆಸರಿದೆ. ಆ ಬಣ್ಣಗಳ ಬದಲು ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ಗಂಗರು, ಕದಂಬರು ಮತ್ತಿತರ ಕನ್ನಡ ರಾಜಮನೆತನಗಳ ಹೆಸರನ್ನು ಇರಿಸಬೇಕು ಎಂದು ಕೋರಲಾಗಿದೆ. ಈಗಿನ ಹೆಸರೇ ಉತ್ತಮವಾಗಿದ್ದು, ಮೆಟ್ರೋ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಬೇಕು ಎಂದು ಜನರು ಆಗ್ರಹಿಸಿದ್ದಾರೆ.