ಮೆಟ್ರೋ 3ನೇ ಹಂತಕ್ಕೆ ಒಪ್ಪಿಗೆ ನೀಡಿ: ಪ್ರಧಾನಿಗೆ ಸಿದ್ದರಾಮಯ್ಯ ಮನವಿ
ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ನಮ್ಮ ಮೆಟ್ರೋದ 3ನೇ ಹಂತದಲ್ಲಿ ₹15,611 ಕೋಟಿ ವೆಚ್ಚದಲ್ಲಿ 45 ಕಿ.ಮೀ. ಮಾರ್ಗವನ್ನು ನಿರ್ಮಿಸಲು ಸಮಗ್ರ ಯೋಜನಾ ವರದಿ ರೂಪಿಸಿ ಅನುಮೋದನೆಗೆ ಸಲ್ಲಿಸಲಾಗಿದ್ದು, ಕೇಂದ್ರವು ಇದಕ್ಕೆ ಶೀಘ್ರವೇ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದರು.

ಬೆಂಗಳೂರು (ಅ.21): ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ನಮ್ಮ ಮೆಟ್ರೋದ 3ನೇ ಹಂತದಲ್ಲಿ ₹15,611 ಕೋಟಿ ವೆಚ್ಚದಲ್ಲಿ 45 ಕಿ.ಮೀ. ಮಾರ್ಗವನ್ನು ನಿರ್ಮಿಸಲು ಸಮಗ್ರ ಯೋಜನಾ ವರದಿ ರೂಪಿಸಿ ಅನುಮೋದನೆಗೆ ಸಲ್ಲಿಸಲಾಗಿದ್ದು, ಕೇಂದ್ರವು ಇದಕ್ಕೆ ಶೀಘ್ರವೇ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದರು.
ಶುಕ್ರವಾರ ಆನ್‌ಲೈನ್ ಮೂಲಕ ನಡೆದ ನಮ್ಮ ಮೆಟ್ರೋದ ಬೈಯಪ್ಪನಹಳ್ಳಿ-ಕೆ.ಆರ್.ಪುರ, ಕೆಂಗೇರಿ-ಚಲ್ಲಘಟ್ಟ ನಡುವಿನ ಮೆಟ್ರೋ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯ ಸರ್ಕಾರ 2031ರ ವೇಳೆಗೆ 317 ಕಿ.ಮೀ. ಮೆಟ್ರೋ ಮಾರ್ಗವನ್ನು ನಿರ್ಮಿಸಲು ಸಮಗ್ರ ಚಲನಶೀಲತೆ ಯೋಜನೆ (ಸಿಎಂಪಿ) ಅಡಿ ಅನುಮೋದಿಸಿದೆ. ಈಗಾಗಲೇ 257 ಕಿ.ಮೀ. ಮಾರ್ಗವು ಕಾರ್ಯಾಚರಣೆ, ನಿರ್ಮಾಣ ಮತ್ತು ಯೋಜನಾ ಹಂತದಲ್ಲಿದೆ. ಇನ್ನುಳಿದ 60 ಕಿ.ಮೀ. ಮೆಟ್ರೋ ಮಾರ್ಗದ ಕಾರ್ಯಸಾಧ್ಯತೆಯ ಸಮೀಕ್ಷೆಯನ್ನು ಶೀಘ್ರವೇ ಕೈಗೊಳ್ಳಲಾಗುವುದು ಎಂದರು.
2.5 ವರ್ಷ ಬಳಿಕ ಸಂಪುಟದಲ್ಲಿ ಬದಲಾವಣೆ:ಕಾಂಗ್ರೆಸ್ ಶಾಸಕ ಹೊಸ ಬಾಂಬ್!
ಮೆಟ್ರೊ ರೈಲು ಯೋಜನೆಯ 3ನೇ ಹಂತದ ರೂಪುರೇಷೆ ತಯಾರಿಸಿ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಸರ್ಜಾಪುರದಿಂದ ಹೆಬ್ಬಾಳದವರೆಗೆ 37 ಕಿ.ಮೀ. ಉದ್ದದ ಮೆಟ್ರೋ ರೈಲು ಹಂತ-3ಎಗೆ ಸಮಗ್ರ ವರದಿ ಯೋಜನಾ ವರದಿ ತಯಾರಿಸಲಾಗುತ್ತಿದೆ. ಈ ಯೋಜನೆಗೆ ಶೀಘ್ರ ಅನುಮೋದನೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದರು.
ಮೆಟ್ರೋ ಯೋಜನೆಯ 2ನೇ ಹಂತದಲ್ಲಿ 75.06 ಕಿ.ಮೀ. ಮಾರ್ಗಕ್ಕೆ ₹30,695 ಕೋಟಿ ವೆಚ್ಚವಾಗಲಿದೆ. ರಾಜ್ಯ ಸರ್ಕಾರ ₹11583.08 ಕೋಟಿ ಬಿಡುಗಡೆ ಮಾಡಿದೆ. ಈ ಕಾಮಗಾರಿ ಭರದಿಂದ ಸಾಗಿದ್ದು, 32 ಕಿ.ಮೀ. ಉದ್ದದ ಮಾರ್ಗ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.
2024ಕ್ಕೆ ಹಸಿರು ವಿಸ್ತರಿತ, ಹಳದಿ ಮಾರ್ಗ ಸೇವೆಗೆ
ಹಸಿರು ಮಾರ್ಗದ ಉತ್ತರ ಭಾಗ ವಿಸ್ತರಣೆಯಾದ ನಾಗಸಂದ್ರದಿಂದ ಮಾದವಾರದವರೆಗಿನ 3.14 ಕಿ.ಮೀ. ಉದ್ದದ ಮಾರ್ಗವು ಮತ್ತು ಆರ್.ವಿ.ರಸ್ತೆ-ಬೊಮ್ಮಸಂದ್ರದವರೆಗೆ 19.15 ಕಿ.ಮೀ. ಉದ್ದದ ಹೊಸ ಮಾರ್ಗಗಳು ಮುಕ್ತಾಯದ ಹಂತದಲ್ಲಿದ್ದು, ಇವೆರಡೂ ಮುಂದಿನ ವರ್ಷದ ಏಪ್ರಿಲ್ ವೇಳೆಗೆ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲು ಯೋಜಿಸಲಾಗಿದೆ. ಹೊಸದಾದ ಗುಲಾಬಿ ಮಾರ್ಗ ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 21.26 ಕಿ.ಮೀ. ಉದ್ದದ ಮಾರ್ಗವನ್ನು 2025ರ ಮಾರ್ಚ್‌ಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಮೂಲಕ ಮೆಟ್ರೋ ಒಟ್ಟಾರೆ 117 ಕಿ.ಮೀ.ಗೆ ವಿಸ್ತಾರವಾದಂತಾಗಲಿದೆ. ಅಲ್ಲದೆ, ನಿತ್ಯ 12 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
2026ಕ್ಕೆ ನೀಲಿ ಮಾರ್ಗ
ನೀಲಿ ಮಾರ್ಗವಾದ ಓಆರ್‌ಆರ್-ಏರ್‌ಪೋರ್ಟ್ ಮೆಟ್ರೋ 58 ಕಿ.ಮೀ. ಉದ್ದದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹೆಬ್ಬಾಳ ಜಂಕ್ಷನ್ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (2ಎ, 2ಬಿ) ಯೋಜನೆಯನ್ನು ₹14788.1 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 2026ಕ್ಕೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಈವರೆಗೆ ₹4775.36 ಕೋಟಿ ಬಿಡುಗಡೆ ಮಾಡಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಮೆಟ್ರೋ 176 ಕಿ.ಮೀ.ಗೆ ವಿಸ್ತರಣೆ ಆಗಲಿದ್ದು, ನಿತ್ಯ 20 ಲಕ್ಷ ಪ್ರಯಾಣಿಕರು ಸಂಚರಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಸರ್ ನಿಮ್ಮ ಫೋಟೋ ಇದೆ!
ಗಾಜಿಯಾಬಾದ್ ಕಾರ್ಯಕ್ರಮದ ವೇದಿಕೆಯ ಪೋಸ್ಟರ್‌ನಲ್ಲಿ ಯೋಗಿ ಆದಿತ್ಯನಾಥ್ ಜೊತೆ ಸಿದ್ದರಾಮಯ್ಯ ಭಾವಚಿತ್ರ ಅಳವಡಿಸಲಾಗಿತ್ತು. ಪ್ರಧಾನಿ ಜೊತೆ ಇಬ್ಬರು ಮುಖ್ಯಮಂತ್ರಿಗಳ ಫೋಟೋ ಹಾಕಿದ್ದನ್ನು ನೋಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಸರ್ ನಿಮ್ಮದೂ ಫೋಟೋ ಇದೆ’ ಎಂದು ಹೇಳಿದರು.
ಅದಕ್ಕೆ ಸಿದ್ದರಾಮಯ್ಯ ಅವರು ‘ಹೇ.. ಇಲ್ಲ ಅನ್ನಿಸುತ್ತೆ’ ಎಂದು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕಣ್ಣಿಟ್ಟು ನೋಡಿದರು. ಆಗ ‘ಇದೆ, ಇದೆ ನಾನು ನೋಡಿದ್ದೇನೆ’ ಎಂದರು. ‘ನಿಮ್ ಫೋಟೋ ಹಾಕಿದ್ದಾರೆ ಸರ್’ ಎಂದು ಅಧಿಕಾರಿಗಳು ಕೂಡ ಹೇಳಿದರು. ‘ಹೌದಾ’ ಎಂದು ಸಿದ್ದರಾಮಯ್ಯ ಸುಮ್ಮನಾದರು.
ಬಿಎಸ್‌ವೈ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆಯಾ? ಬಿವೈ ವಿಜಯೇಂದ್ರ ಏನು ಹೇಳಿದ್ರು?
ಕನ್ನಡದಲ್ಲೇ ಮಾತಾಡ್ತಿನಿ
ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನೌಪಚಾರಿಕವಾಗಿ ಡಿ.ಕೆ.ಶಿವಕುಮಾರ್ ಜೊತೆಗೆ ಮಾತನಾಡುತ್ತ, ‘ನಾನು ಕನ್ನಡದಲ್ಲೇ ಮಾತನಾಡುತ್ತೇನೆ, ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ, ನಮಗೆ ಅರ್ಥವಾಗಲ್ಲ, ನಾನು ಮಾತನಾಡಲ್ಲ’ ಎಂದರು. ವಿಡಿಯೋ ಕಾನ್ಪರೆನ್ಸ್‌ನಲ್ಲಿ ಅವರು ಕನ್ನಡದಲ್ಲೇ ಭಾಷಣ ಮಾಡಿದರು.