ಮೈಸೂರಿನ ಕೆಆರ್‌ ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯ ಮೇಲೆ ಕಿಡಿಗೇಡಿಯೊಬ್ಬ ಏರಿ ಕುಳಿತು ಅವಮಾನ ಮಾಡಿರುವ ಘಟನೆ ನಡೆದಿದೆ. ಪ್ರತಿಮೆಗೆ ಹಾನಿಯಾಗುವುದನ್ನು ಲೆಕ್ಕಿಸದೆ ಪುಂಡಾಟಿಕೆ ಮೆರೆದಿರುವ ವಿಡಿಯೋ ವೈರಲ್ ಆಗಿದೆ. 

ಮೈಸೂರು (ಮೇ.31): ಕಿಡಿಗೇಡಿಯೊಬ್ಬ ಮೈಸೂರಿನ (Mysuru) ಕೆಆರ್‌ ವೃತ್ತದಲ್ಲಿರುವ (KR Circle) ಆಧುನಿಕ ಮೈಸೂರಿನ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ (Nalwadi Krishnaraja Wadiyar) ಅವರ ಪ್ರತಿಮೆ (Statue) ಮೇಲೆ ಏರಿ ಕುಳಿತು ಅವಮಾನ ಮಾಡಿರುವ ಘಟನೆ ನಡೆದಿದೆ. ಶುಕ್ರವಾರ ಸಂಜೆ ಬೆಳಕಿನಲ್ಲಿಯೇ ಈ ಘಟನೆ ನಡೆದಿದೆ. ಪ್ರತಿಮೆಗೆ ಹಾನಿ ಆಗೋದನ್ನೂ ಲೆಕ್ಕಿಸದೇ ಪುಂಡಾಟ ಮೆರೆದಿರುವ ವಿಡಿಯೋ ವೈರಲ್‌ ಆಗಿದೆ.

ಅಂದಾಜು ಅರ್ಧಗಂಟೆಗೂ ಹೆಚ್ಚಿನ ಕಾಲ ಕಿಡಿಗೇಡಿ ಪ್ರತಿಮೆನ್ನು ಏರಿ, ಜಗ್ಗಿರುವುದು ಮಾತ್ರವಲ್ಲದೆ ನಾಲ್ವಡಿಯವರ ಬಾಯಿಗೆ ಬೀಡಿ ಇಟ್ಟು ಅದನ್ನು ಹಚ್ಚುವ ಪ್ರಯತ್ನವನ್ನೂ ಮಾಡಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನಗರದ ಹೃದಯಭಾಗದಲ್ಲಿರುವ ಪ್ರತಿಮೆಯ ಬಳಿಯೇ ಇಂಥ ಕೃತ್ಯ ನಡೆದಿದ್ದೂ, ಕರ್ತವ್ಯ ನಿರತ ಪೊಲೀಸರು ಇದನ್ನು ತಡೆಯದೇ ಇರುವುದು ವಿಪರ್ಯಾಸವೇ ಆಗಿದೆ.

ಈ ಘಟನೆಯ ಬೆನ್ನಲ್ಲಿಯೇ ನಗರ ನಿರ್ಮಾಣಕ್ಕೆ ಕಾರಣರಾದ ಮಹನೀಯರ ಪ್ರತಿಮೆಗೆ ರಕ್ಷಣೆ ಇಲ್ಲವೇ ಎನ್ನುವ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಸಾಮಾನ್ಯವಾಗಿ ಕೆಆರ್‌ ಸರ್ಕಲ್‌ ಜನ ಹಾಗೂ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಸಂಚಾರ ಪೊಲೀಸರು ದಿನದ 24 ಗಂಟೆ ಕೂಡ ಕಾರ್ಯನಿರ್ವಹಿಸುವ ಸರ್ಕಲ್‌ ಇದಾಗಿದೆ. ಇಷ್ಟೆಲ್ಲ ಇದ್ದರೂ ಯಾರ ಕಣ್ಣಿಗೂ ಬೀಳದೇ ಆತ ಪ್ರತಿಮೆ ಹತ್ತಿದ್ದು ಹೇಗೆ ಎನ್ನುವ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ. ಅಮೃತಶಿಲೆಯಿಂದ ಮಾಡಿರುವ ಪ್ರತಿಮೆ ಇದಾಗಿದ್ದು, ಈಗಾಗಲೇ ಕೆಲವು ಕಡೆ ಅದು ಬಿರುಕು ಬಿಟ್ಟಿದೆ.

ಈ ಹಿಂದೆ ಪ್ರತಿಮೆ ಹಾಗೂ ಅದರ ಗೋಪುರಕ್ಕೆ ಆಗಿದ್ದ ಸಣ್ಣಪುಟ್ಟ ಹಾನಿಯನ್ನು ಸರಿ ಮಾಡಲು ಸ್ಥಳೀಯ ಆಡಳಿತ ನಿರೀಕ್ಷೆಯೇ ಮಾಡದಷ್ಟು ದೀರ್ಘ ಸಮಯ ತೆಗೆದುಕೊಂಡಿತ್ತು. ಆದರೆ, ಈಗ ಈ ಘಟನೆಯಿಂದ ಪ್ರತಿಮೆಗೆ ಆಗಿರುವ ಹಾನಿ ಎಂಥದ್ದು ಅನ್ನೋದನ್ನ ಇನ್ನಷ್ಟೇ ಪರಾಮರ್ಶೆ ಮಾಡಬೇಕಿದೆ.

Scroll to load tweet…

ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರಿಗೆ ಮಾಹಿತಿ ನೀಡಲು ಕರೆ ಮಾಡಿದರೂ ಕೂಡ ಸುಮಾರು ಅರ್ಧಗಂಟೆ ಕಾಲ ಪೊಲೀಸ್‌ ಲೈನ್‌ ಸಿಗಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಕಿಡಿಗೇಡಿ ಪ್ರತಿಮೆಯ ಮೇಲೆ ಬೆಂಕಿ ಕಡ್ಡಿ ಗೀರುತ್ತಿದ್ದ. ನಾಲ್ವಡಿಯವರ ಬಾಯಿಗೆ ಬೀಡಿ ಇಡುವ ಪ್ರಯತ್ನ ಮಾಡುತ್ತಿದ್ದ. ಎಷ್ಟೇ ಹೇಳಿದರೂ ಪ್ರತಿಮೆಯ ಆವರಣದಿಂದ ಹೊರಬಂದಿರಲಿಲ್ಲ. ಕೊನೆಗೆ ಪೊಲೀಸ್‌ ಬರುವ ಸೂಚನೆಯ ಬೆನ್ನಲ್ಲೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ನಡುವೆ ಅರಸು ಮಂಡಳಿ ಸಂಘದ ಅಧ್ಯಕ್ಷರು ಸೂಕ್ತ ಭದ್ರತೆಯನ್ನು ಕಲ್ಪಿಸುವವರೆಗೂ ಸ್ಥಳ ಬಿಟ್ಟು ಹೋಗೋದಿಲ್ಲ ಎಂದು ಪ್ರತಿಭಟನೆ ನಡೆಸಿದರು. ಪೊಲೀಸರ ಭರವಸೆ ಸಿಕ್ಕ ಬಳಿಕ ಅಲ್ಲಿಂದ ಹೊರನಡೆದಿದ್ದಾರೆ.

'ಭೂಮಿ,ನೀರು, ಬೆಳಕು ಒದಗಿಸಿ ಪ್ರಜೆಗಳಿಗೆ ಅನ್ನದ ಮಾರ್ಗ ತೋರಿ ಅಭಿವೃದ್ಧಿಯ ನಂದನವನ ನಿರ್ಮಿಸಿದ, ಮೈಸೂರು ಸಂಸ್ಥಾನವನ್ನು ಅಕ್ಷರಶಃ ರಾಮರಾಜ್ಯದ ಕಲ್ಪನೆಯನ್ನೂ ಮೀರಿ ಕಟ್ಟಿಬೆಳಸಿದ ಇವತ್ತಿಗೂ ಜನರಪಾಲಿನ ಆರಾಧ್ಯದೈವವಾಗಿರುವ ರಾಜ ಋಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾ ಪ್ರಭುಗಳ ಪ್ರತಿಮೆಯನ್ನು ಮೈಸೂರಿನಲ್ಲಿ ಹಾಡು ಹಗಲಲ್ಲೇ ಅಪಮಾನಿಸಿರುವ ವಿಕೃತಿ ಕೇಡಿಯನ್ನು ಈ ಕೂಡಲೇ ಬಂಧಿಸಿ. ಮೈಸೂರು ಪೊಲೀಸರು ಉಪೇಕ್ಷೆ ಧೋರಣೆ ತಳದರೆ ಜನಾಕ್ರೋಶ ಉಲ್ಬಣ ವಾದೀತು? ಬಿಜೆಪಿ ಮುಖಂಡರೂ ಆದ ದೇವರಾಜ ಆರಸು ಅಭಿವೃದ್ಧಿ ನಿಗಮವ ಮಾಜಿ ಅಧ್ಯಕ್ಷ ಆರ್.ರಘಾ ಕೌಟಿಲ್ಯ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಒಡೆಯರ್ ಪ್ರತಿಮೆ ಸೇರಿದಂತೆ ಅರಮನೆ ಮುಂದಿನ ಚಾಮರಾಜ ಒಡೆಯರ್, ಹಾರ್ಡಿಂಜ್‌ ವೃತ್ತದ ಜಯಚಾಮರಾಜ ಒಡೆಯರ್ ಪ್ರತಿಮೆಗಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ಪ್ರತಿಮೆಗಳ ಅವರಣೆ ದಲ್ಲಿ ಫೋಟೋಶೂಟ್‌ ಮಾಡುವ ಮೂಲಕ ಪಾರಂಪರಿಕ ಹಿನ್ನೆಲೆ ಹೊಂದಿರುವ ಮಹನೀಯರ ಪ್ರತಿಮೆಗಳಿಗೆ ಅಪಚಾರ, ಹಾನಿ ಉಂಟು ಮಾಡುವ ಸನ್ನಿವೇಶ ನಿತ್ಯವೂ ಸೃಷ್ಟಿಯಾಗುತ್ತಿದೆ ಎಂದಿದ್ದಾರೆ.

'ಮೈಸೂರಿನಲ್ಲಿ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯ ಮೇಲೆ ನಡೆದ ಈ ಅಗೌರವದ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಅವರು ನನ್ನ ಪೂರ್ವಜರು ಎಂಬ ಕಾರಣಕ್ಕಾಗಿ ಮಾತ್ರವಲ್ಲ, ಅವರು ರಾಜ್ಯ ಮತ್ತು ರಾಷ್ಟ್ರಕ್ಕಾಗಿ ಕೈಗೊಂಡ ದೂರದೃಷ್ಟಿಯ ಅಭಿವೃದ್ಧಿ ಕಾರ್ಯಗಳಿಗೆ ಈ ನಾಡಿನ ಜನತೆ ಆಭಾರಿಯಾಗಿ ಸ್ಮರಿಸುತ್ತಿದ್ದಾರೆ. ಅವರ ಗೌರವ ಭಾವನೆಗಳಿಗೆ ಧಕ್ಕೆ ಉಂಟಾಗಿದೆ.

ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪೊಲೀಸರು ತ್ವರಿತವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ. ಆದಾಗ್ಯೂ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಸ್ಮಾರಕಗಳು ಮತ್ತು ಪ್ರತಿಮೆಗಳಿಗೆ ಹೆಚ್ಚಿನ ಜಾಗರೂಕತೆ ಮತ್ತು ರಕ್ಷಣೆಯನ್ನು ವಿಸ್ತರಿಸಬೇಕೆಂದು ನಾವು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ. ಅಂತಹ ವ್ಯಕ್ತಿಗಳ ಘನತೆ ಮತ್ತು ಗೌರವವನ್ನು ರಕ್ಷಿಸಬೇಕು, ಏಕೆಂದರೆ ಅವರು ನಮ್ಮ ಪರಂಪರೆ ಮತ್ತು ಹೆಮ್ಮೆಯನ್ನು ಸಂಕೇತಿಸುತ್ತಾರೆ ಮತ್ತು ನಮ್ಮ ರಾಷ್ಟ್ರದ ಅತ್ಯಮೂಲ್ಯ ಸಂಪತ್ತಾಗಿರುತ್ತಾರೆ' ಎಂದು ಮೈಸೂರು ಸಂಸದ ಹಾಗೂ ಮೈಸೂರು ರಾಜಕುಮಾರ ಯದುವೀರ್‌ ಒಡೆಯರ್‌ ಟ್ವೀಟ್‌ ಮಾಡಿದ್ದಾರೆ.

'ಇದು ಅನ್ನದಾತ, ವಿದ್ಯಾದಾತ ನಾಲ್ವಡಿಯವರಿಗಾದ ಅವಮಾನ ಮಾತ್ರವಲ್ಲ, ಇಡೀ ಮೈಸೂರು ಸಂಸ್ಥಾನದ ಜನರಿಗೆ ಮಾಡಿದ ಅವಹೇಳನೆ. ಕಿಡಿಗೇಡಿಯ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತೇನೆ' ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಟ್ವೀಟ್‌ ಮಾಡಿದ್ದಾರೆ.

ಮಾನಸಿಕ ಅಸ್ವಸ್ಥ ಎನ್ನುವ ಅನುಮಾನ ಎಂದ ಪೊಲೀಸ್: ಈ ಅಪರಿಚಿತ ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿರುವ ಸಾಧ್ಯತೆ ಇದೆ ಎಂದು ದೇವರಾಜ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಘು ಹೇಳಿದ್ದಾರೆ. ಸ್ಥಳಕ್ಕೆ ಹೋದಾಗ ಆತ ಅಲ್ಲಿಂದ ಪರಾರಿಯಾಗಿದ್ದು ಆತನನ್ನು ಪತ್ತೆ ಮಾಡಿ, ಕ್ರಮ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.