ಬೆಂಗಳೂರು(ಆ.28): ಬಿಬಿಎಂಪಿ ವ್ಯಾಪ್ತಿಯ ಶಿವಾಜಿನಗರ ವಿಭಾಗದಲ್ಲಿ ಭಾರತದ ಪೌರತ್ವ ತೊರೆದು ಪಾಕಿಸ್ತಾನ ಪೌರತ್ವ ಪಡೆದುಕೊಂಡಿರುವ ಕುಟುಂಬದ ಸ್ಥಿರಾಸ್ತಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿರುವ 100 ಕೋಟಿ ರು. ಮೌಲ್ಯದ ಆಸ್ತಿಯನ್ನು ವಾಪಸ್‌ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಒತ್ತಾಯಿಸಿದ್ದಾರೆ.

ಈ ಸಂಬಂಧ ಬಿಬಿಎಂಪಿ ವಿಶೇಷ ಆಯುಕ್ತರಿಗೆ ಮತ್ತು ಬಿಎಂಟಿಎಫ್‌ಗೆ ದೂರು ನೀಡಿದ್ದಾರೆ. ನಗರದ ಶಿವಾಜಿನಗರ ವಿಭಾಗದ ವಸಂತನಗರ ಉಪವಿಭಾಗದ ವ್ಯಾಪ್ತಿಯ ಇನ್‌ಫೆಂಟ್ರಿ ರಸ್ತೆಯ ಸ್ವತ್ತಿನ ಸಂಖ್ಯೆ 14 (ಹೊಸ ಸಂಖ್ಯೆ 29)ರ ವಿಸ್ತೀರ್ಣ ಸುಮಾರು 25,408 ಚ.ಅಡಿಗಳಷ್ಟು ಇದೆ. ಈ ಸ್ವತ್ತಿನ ಮಾಲೀಕತ್ವ ಮಲ್ಲಿಕಾ ಬೇಗಂ ಎಂಬುವವರಾಗಿದ್ದು, 1947ರ ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಮಲ್ಲಿಕಾ ಬೇಗಂ ಅವರು ಭಾರತ ದೇಶದ ಪೌರತ್ವವನ್ನು ತೊರೆದು ಕುಟುಂಬ ಸಮೇತ ಪಾಕಿಸ್ತಾನಕ್ಕೆ ತೆರಳಿ ನೆಲೆಸಿದ್ದಾರೆ. ಅವರಿಗೆ ಸಂಬಂಧಿಸಿದ ಸ್ಥಿರಾಸ್ತಿಗಳು ಸರ್ಕಾರಿ ಸ್ವತ್ತುಗಳಾಗುತ್ತವೆ. ಆದರೂ ಪಾಲಿಕೆಯ ವಸಂತನಗರ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳು ಮತ್ತು ಕೆಲವು ಭ್ರಷ್ಟಅಧಿಕಾರಿಗಳು ಸರ್ಕಾರಿ ಸ್ವತ್ತನ್ನು ಪ್ರಭಾವಿ ಖಾಸಗಿ ಸಂಸ್ಥೆಯ ಹೆಸರಿಗೆ ಕಾನೂನು ಬಾಹಿರವಾಗಿ ಖಾತಾವನ್ನು ಮಾಡಿಕೊಟ್ಟಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಮೂರು ವರ್ಷದೊಳಗೆ ಶ್ರೀರಾಮಮಂದಿರ ನಿರ್ಮಾಣ: ವಿಎಚ್‌ಪಿ

ಸ್ವತ್ತಿನಲ್ಲಿ ಎಂಬೆಸಿ ಕ್ಲಾಸಿಕ್‌ ಪ್ರೈ ಲಿ. ಎಂಬ ಸಂಸ್ಥೆ ಬೃಹತ್‌ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿದೆ. ಪ್ರಸುತ್ತ ಈ ಸ್ವತ್ತು ಮತ್ತು ಇದರ ಪಕ್ಕದಲ್ಲಿರುವ ಮತ್ತೊಂದು ಸರ್ಕಾರಿ ಸ್ವತ್ತನ್ನು ಸೇರಿಸಿಕೊಂಡು ಖಾತಾ ಮಾಡಿಕೊಡಬೇಕೆಂಬ ಅರ್ಜಿಯನ್ನು ಸಲ್ಲಿಸಿರುವುದು ಗೊತ್ತಾಗಿದೆ. ಈ ಸಂಬಂಧ ಎಸಿಬಿ ಮತ್ತು ಬಿಎಂಟಿಎಫ್‌ನಲ್ಲಿ ಈಗಾಗಲೇ ದಾಖಲೆಗಳ ಸಹಿತ ದೂರುಗಳನ್ನು ನೀಡಲಾಗಿದೆ. 100 ಕೊಟಿ ರು.ಗಿಂತ ಹೆಚ್ಚು ಮೌಲ್ಯದ ಈ ಸ್ವತ್ತನ್ನು ಪಾಲಿಕೆಯ ವಶಕ್ಕೆ ಪಡೆದುಕೊಳ್ಳಲು ತಕ್ಷಣ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನೂ ಇವೆ 100ಕ್ಕೂ ಅಧಿಕ ಸ್ವತ್ತು:

ಅಲ್ಲದೇ, ಕೇವಲ ಶಿವಾಜಿನಗರ ವಿಭಾಗ ಒಂದರಲ್ಲಿ 1947ರ ದೇಶ ವಿಭಜನೆಯ ಸಮಯದಲ್ಲಿ ಭಾರತ ತೊರೆದು ಪಾಕಿಸ್ತಾನ ದೇಶದ ಪೌರತ್ವವನ್ನು ಪಡೆದುಕೊಂಡಿರುವ 100ಕ್ಕೂ ಹೆಚ್ಚು ಕುಟುಂಬಗಳ ಸಾವಿರಾರು ಕೋಟಿ ರು. ಮೌಲ್ಯದ ಸ್ಥಿರಾಸ್ತಿಗಳಿವೆ. ಬೆರಳೆಣಿಕೆಯಷ್ಟು ಸ್ವತ್ತುಗಳು ಮಾತ್ರವೇ ಹಾಗೆಯೇ ಉಳಿದುಕೊಂಡಿವೆ. ಉಳಿದೆಲ್ಲವುಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಲಾಗಿದೆ. ಈ ಸಂಬಂಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಕಬಳಿಸಲ್ಪಟ್ಟ ಎಲ್ಲ ಸರ್ಕಾರಿ ಸ್ವತ್ತುಗಳನ್ನು ಪಾಲಿಕೆಯ ವಶಕ್ಕೆ ಪಡೆದುಕೊಳ್ಳುವ ಸಂಬಂಧ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ.