Mysuru Bus Shelter: ಗುಂಬಜ್ ಬಸ್ ಶೆಲ್ಟರ್ ತೆರವಿಗೆ ನೋಟಿಸ್, ಪೊಲೀಸ್ ಭದ್ರತೆ
ಮೈಸೂರು- ಊಟಿ ರಸ್ತೆಯಲ್ಲಿನ ಜೆಎಸ್‌ಎಸ್ ಕಾಲೇಜು ಬಳಿ ನಿರ್ಮಿಸಲಾಗಿರುವ ಗುಮ್ಮಟ ಮಾದರಿಯ ಬಸ್ ತಂಗುದಾಣದ ವಿವಾದ ಮತ್ತಷ್ಟು ತಾರಕಕ್ಕೇರಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಮೈಸೂರು (ನ.17): ಮೈಸೂರು- ಊಟಿ ರಸ್ತೆಯಲ್ಲಿನ ಜೆಎಸ್‌ಎಸ್ ಕಾಲೇಜು ಬಳಿ ನಿರ್ಮಿಸಲಾಗಿರುವ ಗುಮ್ಮಟ ಮಾದರಿಯ ಬಸ್ ತಂಗುದಾಣದ ವಿವಾದ ಮತ್ತಷ್ಟು ತಾರಕಕ್ಕೇರಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಪರ, ವಿರೋಧ ಚರ್ಚೆ ಆಗುತ್ತಿರುವಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು (ಎನ್‌ಎಚ್‌ಎಐ) ಬಸ್ ತಂಗುದಾಣವನ್ನು ತೆರವುಗೊಳಿಸುವಂತೆ ಮೈಸೂರು ನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅನುಮತಿ ಇಲ್ಲದೇ ಬಸ್ ತಂಗುದಾಣ ನಿರ್ಮಿಸಿದ್ದೀರಿ. ಈ ಬಸ್ ತಂಗುದಾಣವನ್ನು ತೆರವುಗೊಳಿಸಿ ಎಂದು ಪಾಲಿಕೆ ಆಯುಕ್ತರಿಗೆ ನೀಡಲಾದ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್: ಈ ಮಧ್ಯೆ, ವಿವಾದಿತ ಬಸ್ ಶೆಲ್ಟರ್‌ಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಹಾಗೂ ಡಿಸಿಪಿ ಪ್ರದೀಪ್ ಗುಂಟಿ ಬುಧವಾರ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಈ ವೇಳೆ ರಾಷ್ಟಿ್ರೕಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೂ ಆಗಮಿಸಿ, ಬಸ್ ತಂಗುದಾಣ ತೆರವುಗೊಳಿಸುವ ಕುರಿತು ಚರ್ಚೆ ನಡೆಸಿದರು. ವಿವಾದ ತೀವ್ರ ಸ್ವರೂಪ ಪಡೆದಿರುವಾಗಲೇ ಓರ್ವ ಕೆಲಸಗಾರ ಕಮಾನು ನಿರ್ಮಾಣದಲ್ಲಿ ನಿರತನಾಗಿದ್ದ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಯಾವುದೇ ಕಾಮಗಾರಿ ನಡೆಸದಂತೆ ಸೂಚಿಸಿ, ಆ ಕಾರ್ಮಿಕನನ್ನು ಹಿಂದಕ್ಕೆ ಕಳುಹಿಸಲಾಯಿತು.
2 ದಿನದಲ್ಲಿ ಬಸ್ ಶೆಲ್ಟರ್(ಗುಂಬಜ್) ನಾನೇ ತೆರವು ಮಾಡ್ತೇನೆ: ಪ್ರತಾಪ್ ಸಿಂಹ
ಶೆಲ್ಟರ್‌ಗೆ ರಾತ್ರೋರಾತ್ರಿ ಸುತ್ತೂರು ಶ್ರೀ, ಪ್ರಧಾನಿ, ಸಿಎಂ ಭಾವಚಿತ್ರ: ಮತ್ತೊಂದು ನಾಟಕೀಯ ಬೆಳವಣೆಗೆಯಲ್ಲಿ ಶೆಲ್ಟರ್‌ಗೆ ರಾತ್ರೋರಾತ್ರಿ ಸುತ್ತೂರಿನ ಹಿಂದಿನ ಶ್ರೀಗಳಾದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿಯವರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಈಗ ವಿವಾದಿತ ಬಸ್ ತಂಗುದಾಣ ಒಡೆದರೆ ಸುತ್ತೂರು ಶ್ರೀಗಳಿಗೇ ಅವಮಾನ ಮಾಡಿದಂತಾಗುತ್ತದೆ ಎಂಬ ಚರ್ಚೆ ಆರಂಭವಾಗಿದೆ.
ಪ್ರತಾಪ್‌ಗೆ ಬುದ್ಧಿ ಹೇಳಿ: ಒಂದು ಧರ್ಮದ ವಿರುದ್ಧ ಅನಗತ್ಯವಾಗಿ ಪ್ರಚೋದನೆ ನೀಡುತ್ತಿರುವುದು ಮತ್ತು ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಿರುವ ಪಕ್ಷದ ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಕರೆಸಿ ಬುದ್ಧಿ ಹೇಳಬೇಕು ಎಂದು ಆಡಳಿತಾರೂಢ ಬಿಜೆಪಿಯ ಶಾಸಕ ಎಸ್.ಎ.ರಾಮದಾಸ್ ಅವರು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ. ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಅವರು, ಪ್ರತಾಪ್ ಸಿಂಹ ಅವರಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಮಾರಕ ಆಗಲಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
‘ಗುಂಬಜ್ ಮಾದರಿಯ ಬಸ್ ನಿಲ್ದಾಣಗಳನ್ನು ತೆರವುಗೊಳಿಸದಿದ್ದರೆ ನಾನೇ ಒಡೆದು ಹಾಕುತ್ತೇನೆ ಎಂದು ಅವರು ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಮೈಸೂರು ಮಹಾರಾಜರು ಕಟ್ಟಿಸಿದ ಅರಮನೆ ತುದಿಯಲ್ಲಿ ಗುಂಬಜ್ ಮಾದರಿಯಿದೆ. ಸಾರ್ವಜನಿಕರು ಅದನ್ನೂ ತೆರವುಗೊಳಿಸುತ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ. ನಾವು ಇದಕ್ಕೆ ಉತ್ತರ ಕೊಡುವುದು ಕಷ್ಟವಾಗಿದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಶೀಘ್ರ ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಮಾತನಾಡುವೆ ಎಂದು ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಗುಂಬಜ್ ಬಸ್ ಶೆಲ್ಟರ್ ವಿವಾದಕ್ಕೆ ಟ್ವಿಸ್ಟ್: ಕಿಡಿಗೇಡಿಗಳಿಂದ ಸುಳ್ಳು ಸುದ್ದಿ ಎಂದ ಶಾಸಕ ರಾಮದಾಸ್!
ಈ ಹಿಂದೆಯೂ ಅವರು ಸಾಕಷ್ಟು ವಿವಾದದ ಹೇಳಿಕೆ ನೀಡಿದಾಗ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕಾಗಿ ಮೌನವಾಗಿದ್ದೆ. ಈಗ ಗುಂಬಜ್ ಮಾದರಿಯ ಬಸ್ ನಿಲ್ದಾಣವನ್ನು ಒಡೆದು ಹಾಕುತ್ತೇನೆ ಎಂದು ಹೇಳಿರುವುದು ಒಬ್ಬ ಜನಪ್ರತಿನಿಧಿಯಾಗಿ ಮಾಡುವ ಕೆಲಸ ಇದೇನಾ’ ಎಂದು ರಾಮದಾಸ್ ಅಸಮಧಾನ ಹೊರಹಾಕಿದ್ದಾರೆ. ‘ಮೈಸೂರಿನ ಜನತೆ ಶಾಂತಿಪ್ರಿಯರು. ಕೋಮುಗಲಭೆಯಂಥ ಘಟನೆಗಳಿಗೆ ಅವಕಾಶ ನೀಡುವುದಿಲ್ಲ. ಸಂಸದರಾಗಿ ಅವರು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ತಕ್ಷಣವೇ ಅವರನ್ನು ಕರೆಸಿ ಮಾತನಾಡಬೇಕು’ ಎಂದು ರಾಮದಾಸ್ ಮನವಿ ಮಾಡಿದರು.