ನಾಡಹಬ್ಬ ಮೈಸೂರು ದಸರಾ 2026 ಮಹೋತ್ಸವವು ಅಕ್ಟೋಬರ್ 11 ರಿಂದ 21ರವರೆಗೆ ನಡೆಯಲಿದ್ದು, ಜುಲೈ 26ರಿಂದ ಗಜಪಯಣ ಆರಂಭವಾಗಲಿದೆ. ಈ ಬಾರಿಯ ದಸರಾ ಇತಿಹಾಸದಲ್ಲಿ ಮೊದಲ ಬಾರಿಗೆ ಕರಾವಳಿಯ ಜಾನಪದ ಕ್ರೀಡೆ 'ಕಂಬಳ'ವನ್ನು ಆಯೋಜಿಸಲು ಸರ್ಕಾರ ಚಿಂತನೆ ನಡೆಸಿದೆ.

ಬೆಂಗಳೂರು/ಮೈಸೂರು (ಜು.10): ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಲು ಸರ್ಕಾರ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ರಾಜ್ಯ ಸರ್ಕಾರ ಕಾರ್ಯಕ್ರಮಗಳ ಅಧಿಕೃತ ದಿನಾಂಕಗಳನ್ನು ಘೋಷಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಿನಾಂಕಗಳ ವಿವರ:

  • ಈ ವರ್ಷದ ದಸರಾ ಮಹೋತ್ಸವವು ಅಕ್ಟೋಬರ್ 11 ರಿಂದ ಅಕ್ಟೋಬರ್ 21 ರವರೆಗೆ ಜರುಗಲಿದೆ.
  • ಅಕ್ಟೋಬರ್ 11: ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಉದ್ಘಾಟಕರನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
  • ಅಕ್ಟೋಬರ್ 18: ಮಹಾ ನವಮಿ / ದುರ್ಗಾಷ್ಟಮಿ ಪೂಜೆಗಳು ನಡೆಯಲಿವೆ.
  • ಅಕ್ಟೋಬರ್ 19: ಆಯುಧ ಪೂಜೆ ಸಂಭ್ರಮ.
  • ಅಕ್ಟೋಬರ್ 21: ದಸರಾದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಅಥವಾ ಜಂಬೂ ಸವಾರಿ ನಡೆಯಲಿದೆ. ಅಂದು ಮಧ್ಯಾಹ್ನ 4:10ಕ್ಕೆ ಶುಭ 'ಮೀನಾ ಲಗ್ನ'ದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ನಂತರ ಚಿನ್ನದ ಅಂಬಾರಿಯಲ್ಲಿ ವಿರಾಜಮಾನನಾಗಲಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಾಗುವುದು.

ಜುಲೈ 26ರಿಂದಲೇ ಗಜಪಯಣ ಆರಂಭ:

ದಸರಾ ಆನೆಗಳ ಆಗಮನ ಅಥವಾ 'ಗಜಪಯಣ'ಕ್ಕೆ ಜುಲೈ 26 ರಂದು ಚಾಲನೆ ನೀಡಲು ನಿರ್ಧರಿಸಲಾಗಿದೆ. ಕಾಡಿನಿಂದ ನಾಡಿಗೆ ಬರುವ ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರುವ ಮೂಲಕ ದಸರಾ ಚಟುವಟಿಕೆಗಳು ಅಧಿಕೃತವಾಗಿ ಮೈಸೂರಿನಲ್ಲಿ ಕಳೆಗಟ್ಟಲಿವೆ.

ಮೈಸೂರು ದಸರಾದಲ್ಲಿ ಮೊದಲ ಬಾರಿಗೆ 'ಕಂಬಳ':

ಈ ಬಾರಿಯ ದಸರಾ ಮಹೋತ್ಸವಕ್ಕೆ ಕರಾವಳಿಯ ಸೊಗಡು ಸೇರ್ಪಡೆಯಾಗಲಿದೆ. ಮೈಸೂರು ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಜಾನಪದ ಕ್ರೀಡೆಯಾದ 'ಕಂಬಳ'ವನ್ನು ಆಯೋಜಿಸಲು ಸರ್ಕಾರ ಚಿಂತನೆ ನಡೆಸಿದೆ. ಇದು ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಹೊಸ ಅನುಭವ ನೀಡಲಿದೆ.

ಉನ್ನತ ಮಟ್ಟದ ಸಭೆ:

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮೈಸೂರು ಭಾಗದ ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ದಸರಾ ಸಂದರ್ಭದಲ್ಲಿ ನಗರದ ಭದ್ರತೆ, ಸ್ವಚ್ಛತೆ, ಮತ್ತು ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲು ಈ ಬಾರಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ವಿದ್ಯುತ್ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಫಲಪುಷ್ಪ ಪ್ರದರ್ಶನ ಸೇರಿದಂತೆ ದಸರಾದ ಎಲ್ಲಾ ಅಂಗಗಳು ಈ ಬಾರಿ ಸಾರ್ವಜನಿಕರನ್ನು ಸಮ್ಮೋಹಗೊಳಿಸಲಿವೆ. ವಿಶ್ವದ ವಿವಿಧ ಮೂಲೆಗಳಿಂದ ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಸಕಲ ವ್ಯವಸ್ಥೆ ಮಾಡಲು ಸರ್ಕಾರ ಬದ್ಧವಾಗಿದೆ.