Just Clean Bengaluru" ರಾಜಧಾನಿ ಬೆಂಗಳೂರನ್ನು ಸುಂದರಗೊಳಿಸಲು ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಆ.1ರಿಂದ ಆರಂಭಿಸಲಿದ್ದು, ಆಗಸ್ಟ್ ಅಂತ್ಯದವರೆಗೂ ನಡೆಯಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಬೆಂಗಳೂರು (ಜು.31): ರಾಜಧಾನಿ ಬೆಂಗಳೂರನ್ನು ಸುಂದರಗೊಳಿಸಲು ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಆ.1ರಿಂದ ಆರಂಭಿಸಲಿದ್ದು, ಆಗಸ್ಟ್ ಅಂತ್ಯದವರೆಗೂ ನಡೆಯಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಗುರುವಾರ ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಜಸ್ಟ್ ಕ್ಲೀನ್ ಬೆಂಗಳೂರು (ಜೆಸಿಬಿ) ಅಭಿಯಾನಕ್ಕೆ ಮುಖ್ಯಮಂತ್ರಿಗಳೇ ಚಾಲನೆ ನೀಡಲಿದ್ದಾರೆ. ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಘನತ್ಯಾಜ್ಯ, ಕಟ್ಟಡ ಸಾಮಗ್ರಿಗಳನ್ನು ಸುರಿದಿದ್ದಾರೆ. ಇವು ಅನಾರೋಗ್ಯದ ಮೂಲವಾಗಿವೆ. ಈ ತ್ಯಾಜ್ಯ ನಗರದಾದ್ಯಂತ ಸುಮಾರು 1,616 ಸ್ಥಳಗಳಲ್ಲಿದ್ದು, ಸುಮಾರು 22 ಸಾವಿರ ಟನ್ ತ್ಯಾಜ್ಯ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಅಭಿಯಾನಕ್ಕಾಗಿ 50 ಗಾಡಿಗಳನ್ನು ನಿಯೋಜಿಸಲಾಗಿದೆ ಎಂದರು.
ಖಾಸಗಿಯವರ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ತೆರವು ಮಾಡಲು ಆ.15ರವರೆಗೆ ಮಾಲಿಕರಿಗೆ ಗಡುವು ನೀಡಲಾಗಿದೆ. ತೆರವು ಮಾಡದಿದ್ದರೆ, ಆ.15ರ ನಂತರ ಸರ್ಕಾರವೇ ತೆರವು ಮಾಡುತ್ತದೆ. ತೆರವು ಮಾಡುವ ವೆಚ್ಚವನ್ನು ಮಾಲಿಕರೆ ತೆರಿಗೆ ಹಣದ ಜೊತೆ ಪಾವತಿಸಬೇಕು ಎಂದು ತಿಳಿಸಿದರು.
ಆ.15ರವರೆಗೆ ಮಾಲಿಕರಿಗೆ ಅನುಕೂಲ ಮಾಡಲು ಆಯಾ ಪಾಲಿಕೆಗಳಿಂದ ಖಾಸಗಿಯಾಗಿ ತ್ಯಾಜ್ಯ ತೆರವುಗೊಳಿಸುವವರ ಪಟ್ಟಿಯನ್ನು ನೀಡಲಾಗುತ್ತದೆ. ಅಂತಹ ತಂಡಗಳನ್ನು ಸಂಪರ್ಕಿಸಿ ಅವರಿಂದ ನೀವೇ ತೆರವು ಮಾಡಿಸಿಕೊಂಡರೆ ಉತ್ತಮ ಎಂದರು.
ಡಂಪಿಂಗ್ ಲಾರಿಗಳ ನೋಂದಣಿ ಕಡ್ಡಾಯ: ಬೈರೇಗೌಡ
ಖಾಸಗಿಯಾಗಿ ತ್ಯಾಜ್ಯ ಸುರಿಯುವ ಲಾರಿಗಳ ನೋಂದಣಿ ಕಡ್ಡಾಯಗೊಳಿಸಲಾಗುವುದು. ಅಲ್ಲದೆ, ಆ ಲಾರಿಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಲಾಗುವುದು ಎಂದರು. ತ್ಯಾಜ್ಯ ತೆರವು ಮಾಡಲು ಮಾರ್ಗಸೂಚಿ ರೂಪಿಸಲಾಗುತ್ತದೆ. ಇದು ಕಸವಲ್ಲ, ಮಣ್ಣು, ಕಲ್ಲು ಮಾತ್ರ, ಕಟ್ಟಡ ನಿರ್ಮಾಣದ ಅಥವಾ ಕೆಡವುವ ಸಂದರ್ಭದಲ್ಲಿ ಬಿದ್ದಿರುವ ತ್ಯಾಜ್ಯ, ಇದು ಅತ್ಯಂತ ಬೃಹತ್ ಪ್ರಮಾಣದ ತೆರವು ಕಾರ್ಯಾಚರಣೆ, 5 ಪಾಲಿಕೆಗೆ ಐದು ಕಡೆ ಜಾಗ ಗುರುತು ಮಾಡಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
1 ಟನ್ ಕಟ್ಟಡ ತ್ಯಾಜ್ಯ ವೀಲೆಗೆ ₹750 ಶುಲ್ಕ
ಕಟ್ಟಡದ ತ್ಯಾಜ್ಯ ತೆರವಿಗೆ ಕಾರ್ಯಪಡೆ ರಚನೆ ಮಾಡಲಾಗುವುದು. ಇದರಿಂದ ಸಮಸ್ಯೆ ನಿಯಂತ್ರಣಕ್ಕೆ ಬರಲಿದೆ. ಕಸ ಎಂದರೆ ಗಾರ್ಬೇಜ್ ಅಲ್ಲ, ಮಣ್ಣು, ಕಲ್ಲು, ಇವುಗಳ ವಿಲೇಗಾಗಿ ಕೆಲವು ಕಡೆ ಕ್ವಾರಿ ಗುರುತಿಸಲಾಗಿದೆ. ಇಲ್ಲಿಗೆ ತ್ಯಾಜ್ಯ ಸಾಮಗ್ರಿ ತುಂಬಲಾಗುತ್ತದೆ ಎಂದು ಸಚಿವರು ತಿಳಿಸಿದರು. ಇನ್ನು ಮುಂದೆ ನಗರದಲ್ಲಿ ಕಟ್ಟಡ ತ್ಯಾಜ್ಯ ವಿಲೇ ಮಾಡಲು ನಾಲ್ಕು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಲಾಗಿದೆ. ಸಿ ಅಂಡ್ ಡಿ ವೇಸ್ಟ್ (ಕನ್ ಸ್ಟ್ರಕ್ಷನ್ ಮತ್ತು ಡೆಮಾಲಿಷನ್ ತ್ಯಾಜ್ಯ) ಮೂರು ಕಂಪನಿಗಳು ಈಗ ಸಿದ್ಧ ಇವೆ. ಅವರ ಮೂಲಕವೇ ವಿಲೇ ಮಾಡಬೇಕು. 1 ಟನ್ ವಿಲೇ ಮಾಡಲು ₹760 ಶುಲ್ಕ ವಿಧಿಸಲಾಗುವುದು.ಮನೆಯ ಸಿಎನ್ ಡಿ ವೇಸ್ಟ್ ಇದ್ದರೆ ಈ ಮೂಲಕವೇ ತ್ಯಾಜ್ಯ ತೆರವು ಮಾಡಬೇಕು. ಶೀಘ್ರದಲ್ಲೇ ಅವರ ಸಂಪರ್ಕದ ಸಂಖ್ಯೆಗಳನ್ನು ನೀಡಲಾಗುವುದು.ಈ ರೀತಿಯಾದರೆ ಬೆಂಗಳೂರು ಸುಧಾರಣೆ ಯಾಗುತ್ತೆ ಎಂದರು.

