ಮೈಸೂರು ದಸರಾದಲ್ಲಿ ಆನೆ ಲದ್ದಿ ತುಳಿಯುವ ವಿಡಿಯೋ ವೈರಲ್ ಆಗಿದ್ದು, ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಈ ಲೇಖನವು ಕಾಲು ನೋವು ನಿವಾರಣೆ, ದೇಹದ ಉಷ್ಣಾಂಶ ಕಡಿಮೆ ಮಾಡುವಂತಹ ಜಾನಪದ ನಂಬಿಕೆಗಳನ್ನು ಮತ್ತು ಇದರ ಹಿಂದಿನ ವೈಜ್ಞಾನಿಕ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತದೆ.

ಬೆಂಗಳೂರು/ಮೈಸೂರು (ಸೆ.21): ಮೈಸೂರು ದಸರಾ ಮಹೋತ್ಸವಕ್ಕೆ ಬಂದಿರುವ ಆನೆಗಳ ಪೈಕಿ ಒಂದು ಆನೆ ಲದ್ದಿ ಹಾಕಿದಾಕ್ಷಣ ಒಬ್ಬ ವ್ಯಕ್ತಿ ಆನೆ ಲದ್ದಿಯ ಮೇಲೆ ಬರಿಗಾಲಿನಲ್ಲಿ ನಿಂತುಕೊಂಡು ಅದನ್ನು ತುಳಿದಿದ್ದಾನೆ. ಜೊತೆಗೆ, ಈ ಸಂಬಂಧಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಆನೆ ಲದ್ದಿಯನ್ನು ಬರಿಗಾಲಿನಲ್ಲಿ ತುಳಿಯುವುದರಿಂದ ಏನಾದರೂ ಉಪಯೋಗವಿದೆಯೇ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಹಲವು ನೆಟ್ಟಿಗರು ಅನೇಕ ಸಲಹೆಗಳನ್ನು ನೀಡಿದ್ದಾರೆ.

ಪ್ರಕೃತಿ ಚಿಕಿತ್ಸೆ ಮತ್ತು ಜಾನಪದ ವೈದ್ಯಕೀಯ ಪದ್ಧತಿಗಳು ನಮ್ಮ ದೇಶದ ಸಂಸ್ಕೃತಿಯಲ್ಲಿ ಹಾಸುಹೊಕ್ಕಿವೆ. ಇವುಗಳಲ್ಲಿ ಹಲವು ನಂಬಿಕೆಗಳು ಮತ್ತು ಆಚರಣೆಗಳು ಇಂದಿಗೂ ಚಾಲ್ತಿಯಲ್ಲಿವೆ. ಅಂತಹ ವಿಶಿಷ್ಟ ನಂಬಿಕೆಗಳಲ್ಲಿ ಆನೆ ಲದ್ದಿಯನ್ನು ಬರಿಗಾಲಿನಲ್ಲಿ ತುಳಿಯುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ಒಂದು. ಈ ವಿಚಿತ್ರ ಆಚರಣೆಯ ಕುರಿತು ಹಲವು ಜನರಲ್ಲಿ ಕುತೂಹಲ ಮತ್ತು ಭಿನ್ನಾಭಿಪ್ರಾಯಗಳಿವೆ. ಈ ಬಗ್ಗೆ ಮೈಸೂರಿನ ಯುವಕ ಹಂಚಿಕೊಂಡಿರುವ ವಿಡಿಯೋ ಭಾರೀ ವೈರಲ್ ಆಗಿದ್ದು, ಆನೆ ಲದ್ದಿಯ ಉಪಯೋಗಗಳ ಬಗ್ಗೆ ಭಾರೀ ಚರ್ಚೆ ಮಾಡಿದ್ದಾರೆ.

ಆನೆ ಲದ್ದಿ ಬರಿಗಾಲಲ್ಲಿ ತುಳಿಯೋದರಿಂದ ಆಗುವ ಉಪಯೋಗ ಏನು? ಎಂಬ ಪ್ರಶ್ನೆಗೆ ನೆಟ್ಟಿಗರ ಕಾಮೆಂಟ್‌ಗಳು:

  • 1. ದೇಹದ ಉಷ್ಣಾಂಶ ಕಡಿಮೆ ಆಗುತ್ತೆ..
  • 2. ಅದರ ಮೇಲೆ ನಿಂತುಕೊಂಡು ನೋಡಿ ತುಂಬಾ ಒಳ್ಳೆದು.
  • 3. ಕಾಲು ನೋವು ಇದ್ರೆ ಅದ್ರ ಮೇಲೆ ಸ್ಪಲ್ಪ ಹೊತ್ತು ನಿಂತ್ರೆ ಕಮ್ಮಿ ಆಗುತ್ತೆ ಅಂತಾ ಹಿರಿಯರು ಹೇಳ್ತಾರೆ.
  • 4. ಆನೆ ಲದ್ದಿ ತುಳಿದರೆ ಆನೆಯ ಬಲ ಬರುತ್ತದೆ ಎನ್ನುವುದು ಒಂದು ನಂಬಿಕೆ.
  • 5. ಕಾಲಿನಲ್ಲಿ ಒಪ್ಪೆ ಇದ್ದಿದ್ದರೆ ಅದನ್ನು ತುಳಿದರೆ ವಾಸಿಯಾಗುತ್ತದೆ.
  • 6. ಪ್ಲೈವುಡ್ (Plywood) ಮಾಡತಾರೆ.
  • 7. ಕಾಲ್ಗಳಲ್ಲಿ ಸೀಳುವಿಕೇ. ಇರುತ್ತೆ ಅದು ಕಡಿಮೆ ಆಗುತ್ತೆ.
  • 8. ಕಾಲಿನ ಬಿರುಕುಗಳು ಕಲ್ಲು ಒತ್ತುಗಳು ಇದ್ದರೆ ವಾಸಿಯಾಗುತ್ತದೆ.
  • 9. ತುಂಬಾ ತೆಳ್ಳಗೆ ಇರೋರು ದಪ್ಪ ಆಗ್ತೀವಿ ಅಂತೆ. ಅದಿಕ್ಕೆ ಆನೆಯ ಲದ್ದಿಯನ್ನು ತುಳುತಿವಿ ಅಮ್ಮ ಹೇಳಿದು.
  • 10. ಆನೆ ಸಗಣಿ ಒಣಗಿಸಿ ಅದನ್ನು ಸಂಜೆ ವೇಳೆ ಸುಟ್ಟಲ್ಲಿ ಸೊಳ್ಳೆ ಕಾಟ ತಪ್ಪುತ್ತದೆ.
  • 11. ಪ್ರಕೃತಿ ಮತ್ತು ವನ್ಯಜೀವಿಗಳ ಬಗ್ಗೆ ಆಳವಾದ ಜ್ಞಾನ ಮತ್ತು ಗೌರವ ಹೊಂದಿರುವವರಿಗೆ ಮಾತ್ರ ಆನೆ ಸಗಣಿಯ ಈ ವಿಶಿಷ್ಟ ಚಿಕಿತ್ಸಾ ವಿಧಾನ ಅರ್ಥವಾಗುತ್ತದೆ. ನಮ್ಮ ಪೂರ್ವಿಕರು ಕಾಡು ಪ್ರಾಣಿಗಳ ಜೊತೆ ನಿಕಟ ಸಂಬಂಧ ಹೊಂದಿದ್ದರು. ಅವರು ಪ್ರಾಣಿಗಳ ನಡವಳಿಕೆ, ಆಹಾರ ಪದ್ಧತಿ ಮತ್ತು ಅವುಗಳ ದೇಹದಿಂದ ಹೊರಬರುವ ವಸ್ತುಗಳ ಗುಣಲಕ್ಷಣಗಳನ್ನು ಗಮನಿಸಿ ಅವುಗಳ ಔಷಧೀಯ ಉಪಯೋಗಗಳನ್ನು ಕಂಡುಕೊಂಡರು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
View post on Instagram

ಏನಿದು ನಂಬಿಕೆಯ ಹಿಂದಿನ ರಹಸ್ಯ?

ಆನೆಗಳು ಕಾಡಿನಲ್ಲಿ ಸಿಗುವ ಹಲವು ಬಗೆಯ ಔಷಧೀಯ ಗುಣಗಳಿರುವ ಸೊಪ್ಪುಗಳನ್ನು ಮತ್ತು ಗಿಡಮೂಲಿಕೆಗಳನ್ನು ತಿನ್ನುತ್ತವೆ. ಅವು ಜೀರ್ಣವಾದ ನಂತರ ಹೊರಬರುವ ಲದ್ದಿಯಲ್ಲೂ ಈ ಗಿಡಮೂಲಿಕೆಗಳ ಗುಣಗಳು ಉಳಿದಿರುತ್ತವೆ ಎಂಬುದು ಈ ನಂಬಿಕೆಯ ಮೂಲ. ಹಾಗಾಗಿ, ಈ ಲದ್ದಿಯನ್ನು ತುಳಿಯುವುದು ಅಥವಾ ಅದರ ವಾಸನೆಯನ್ನು ತೆಗೆದುಕೊಳ್ಳುವುದರಿಂದ ಹಲವು ರೋಗಗಳು ಗುಣವಾಗುತ್ತವೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ತಲೆನೋವು, ಹಲ್ಲುನೋವು, ಸೈನಸ್ ಮತ್ತು ಮೂಗಿನಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳೂ ನಿಯಂತ್ರಣಕ್ಕೆ ಬರುತ್ತವೆ ಎಂದು ಕೆಲವು ಜನ ಹೇಳುತ್ತಾರೆ.

ವೈಜ್ಞಾನಿಕವಾಗಿ ಇದು ಎಷ್ಟರಮಟ್ಟಿಗೆ ಸತ್ಯ?

ವೈಜ್ಞಾನಿಕವಾಗಿ ಈ ನಂಬಿಕೆಗಳಿಗೆ ಯಾವುದೇ ಪುರಾವೆಗಳಿಲ್ಲ. ಯಾವುದೇ ವೈದ್ಯಕೀಯ ಅಥವಾ ವೈಜ್ಞಾನಿಕ ಅಧ್ಯಯನಗಳು ಆನೆ ಲದ್ದಿ ತುಳಿಯುವುದರಿಂದ ಮಾನವನ ಆರೋಗ್ಯಕ್ಕೆ ಪ್ರಯೋಜನಗಳಿವೆ ಎಂದು ದೃಢಪಡಿಸಿಲ್ಲ. ಈ ರೀತಿಯ ಆಚರಣೆಗಳನ್ನು ಅನುಸರಿಸುವಾಗ ಎಚ್ಚರಿಕೆ ವಹಿಸುವುದು ಮುಖ್ಯ, ಏಕೆಂದರೆ ಪ್ರಾಣಿಗಳ ಲದ್ದಿಯು ಸೋಂಕು ಮತ್ತು ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. ಇದು ರೋಗಗಳಿಗೆ ಕಾರಣವಾಗಬಹುದು.