ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯ ಸಂಭಾವ್ಯ ಪಟ್ಟಿಯೊಂದು ಲಭ್ಯವಾಗಿದ್ದು, ಇದರಲ್ಲಿ ಪ್ರಾದೇಶಿಕ ಸಮತೋಲನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ವಿಸ್ತರಣೆಯಲ್ಲಿ ದಕ್ಷಿಣದ ಬೆಂಗಳೂರು ಹಾಗೂ ಉತ್ತರದ ಬೆಳಗಾವಿ ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವ ಸಾಧ್ಯತೆಗಳಿವೆ.

ರಾಜ್ಯ ರಾಜಕಾರಣದಲ್ಲಿ ಸದಾ ಸಂಚಲನ ಮೂಡಿಸುವ ಸಚಿವ ಸಂಪುಟ ವಿಸ್ತರಣೆಯ 2ನೇ ಹಂತದ ಸಂಭಾವ್ಯ ಪಟ್ಟಿಯ ವಿವರಗಳು ಕೆಲ ಪ್ರಮುಖ ಮೂಲಗಳಿಂದ 'ಸುವರ್ಣ ನ್ಯೂಸ್‌'ಗೆ ಲಭ್ಯವಾಗಿವೆ. ಹಲವು ದಿನಗಳಿಂದ ಕಾಯುತ್ತಿದ್ದ ಶಾಸಕರು ಹಾಗೂ ಬೆಂಬಲಿಗರಲ್ಲಿ ಈ ಪಟ್ಟಿ ತೀವ್ರ ಕುತೂಹಲ ಮೂಡಿಸಿದ್ದು, ಹೈಕಮಾಂಡ್ ಹಾಗೂ ರಾಜ್ಯ ನಾಯಕರ ನಡುವೆ ನಡೆದ ಹಲವು ಸುತ್ತಿನ ಚರ್ಚೆಯ ನಂತರ ಈ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ಈ ಬಾರಿಯ ವಿಸ್ತರಣೆಯಲ್ಲಿ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ವಿಶೇಷ ಮುತುವರ್ಜಿ ವಹಿಸಲಾಗಿದ್ದು, ಮುಖ್ಯವಾಗಿ ದಕ್ಷಿಣ ಕರ್ನಾಟಕದ ಹೆಬ್ಬಾಗಿಲಾದ ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ರಾಜಕೀಯ ಶಕ್ತಿಕೇಂದ್ರವಾದ ಬೆಳಗಾವಿ ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಮತ್ತು 'ಸಿಂಹಪಾಲು' ಲಭ್ಯವಾಗಲಿದೆ ಎನ್ನುವ ಸುದ್ದಿಗಳು ಬಲವಾಗಿ ಕೇಳಿಬರುತ್ತಿವೆ.

ಸಂಭಾವ್ಯ ಸಚಿವರ ರೇಸ್‌ನಲ್ಲಿರುವ ಪ್ರಮುಖ ನಾಯಕರು!

ಮೂಲಗಳ ಪ್ರಕಾರ ಸಂಪುಟ ವಿಸ್ತರಣೆಯ ರೇಸ್‌ನಲ್ಲಿರುವ ಪ್ರಮುಖ ನಾಯಕರ ಪಟ್ಟಿ ಹೀಗಿದೆ. ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ನೋಡುವುದಾದರೆ, ಲಕ್ಷ್ಮಣ ಸವದಿ, ಲಕ್ಷ್ಮೀ ಹೆಬ್ಬಾಳ್ಕರ್, ರುದ್ರಪ್ಪ ಲಮಾಣಿ, ಸಂತೋಷ್ ಲಾಡ್, ಬಸವರಾಜ ರಾಯರೆಡ್ಡಿ, ಶಿವರಾಜ್‌ ತಂಗಡಗಿ, ಹೆಚ್.ಕೆ. ಪಾಟೀಲ್‌, ಅಜಯ್‌ ಸಿಂಗ್ ಹಾಗೂ ಶ್ರೀನಿವಾಸ ಮಾನೆ ಇದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಾಗ ನೋಡುವುದಾದರೆ, ಜಮೀರ್‌ ಅಹ್ಮದ್, ದಿನೇಶ್‌ ಗುಂಡೂರಾವ್, ಎಂ. ಕೃಷ್ಣಪ್ಪ, ಶರತ್‌ ಬಚ್ಚೇಗೌಡ ಇದ್ದರೆ, ದಕ್ಷಿಣ ಹಾಗೂ ಹಳೆಯ ಮೈಸೂರು ಭಾಗದಲ್ಲಿ ಪುಟ್ಟರಂಗಶೆಟ್ಟಿ, ತನ್ವೀರ್‌ ಶೇಟ್, ಚೆಲುವರಾಯಸ್ವಾಮಿ, ಟಿ.ಬಿ. ಜಯಚಂದ್ರ ಇದ್ದಾರೆ. ಇದಲ್ಲದೇ ಸಲೀಂ ಅಹ್ಮದ್, ರಘುಮೂರ್ತಿ, ಮಧು ಬಂಗಾರಪ್ಪ, ಬಿ. ನಾಗೇಂದ್ರ ಹಾಗೂ ಸುವರ್ಣಾ ತುಕಾರಂ ಅವರು ಸಚಿವ ಸ್ಥಾನದ ರೇಸ್‌ನಲ್ಲಿದ್ದಾರೆ.

ಬೆಂಗಳೂರು & ಬೆಳಗಾವಿಗೆ ಜಾಕ್‌ಪಾಟ್ ಏಕೆ?

ರಾಜಕೀಯ ಲೆಕ್ಕಾಚಾರದ ಪ್ರಕಾರ, ರಾಜಧಾನಿ ಬೆಂಗಳೂರಿನಲ್ಲಿ ಪಕ್ಷದ ಹಿಡಿತವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಮತ್ತು ಮುಂಬರುವ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರದ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಇನ್ನೊಂದೆಡೆ, ಉತ್ತರ ಕರ್ನಾಟಕದ ದೊಡ್ಡ ಜಿಲ್ಲೆಯಾದ ಬೆಳಗಾವಿಯಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಮತ್ತು ಆ ಭಾಗದ ಲಿಂಗಾಯತ ಹಾಗೂ ಇತರ ಸಮುದಾಯಗಳ ಮತಬ್ಯಾಂಕ್ ಕಾಯ್ದುಕೊಳ್ಳಲು ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡಲಾಗುತ್ತಿದೆ. ಲಕ್ಷ್ಮಣ ಸವದಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರಂತಹ ಪ್ರಭಾವಿ ನಾಯಕರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಯಾರಿಗೆ ಒಲಿಯಲಿದೆ ಅದೃಷ್ಟ?

ಸಂಪುಟ ವಿಸ್ತರಣೆಯ ಈ ಪ್ರಕ್ರಿಯೆಯಲ್ಲಿ ಹಿರಿಯ ಅನುಭವ ಮತ್ತು ಯುವ ಉತ್ಸಾಹ ಎರಡನ್ನೂ ಸರಿದೂಗಿಸುವ ಸವಾಲು ಹೈಕಮಾಂಡ್ ಮುಂದಿದೆ. ಟಿ.ಬಿ. ಜಯಚಂದ್ರ, ಹೆಚ್.ಕೆ. ಪಾಟೀಲ್ ಹಾಗೂ ಬಸವರಾಜ ರಾಯರೆಡ್ಡಿಯವರಂತಹ ಹಿರಿಯ ನಾಯಕರು ತಮ್ಮ ಅನುಭವದ ಆಧಾರದ ಮೇಲೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಅದೇ ಸಮಯದಲ್ಲಿ ಶರತ್ ಬಚ್ಚೇಗೌಡ ಅವರಂತಹ ಯುವ ನಾಯಕರಿಗೂ ಅವಕಾಶ ಒಲಿಯುವ ಸಾಧ್ಯತೆಯಿದೆ.

ಇರಲಿದೆ ಜಾತಿ ಸಮೀಕರಣದ ಆಟ!

ಆದರೆ, ಕೇವಲ ಲೆಕ್ಕಾಚಾರಗಳು ಮಾತ್ರವಲ್ಲದೆ ಜಾತಿ ಸಮೀಕರಣ ಮತ್ತು ಹೈಕಮಾಂಡ್‌ನ ಅಂತಿಮ ನಿರ್ಧಾರಗಳ ಮೇಲೆಯೇ ಎಲ್ಲರ ಭವಿಷ್ಯ ನಿರ್ಧಾರವಾಗಲಿದೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಸಚಿವ ಸ್ಥಾನದ ರೇಸ್‌ನಲ್ಲಿ ಕೊನೆಗಳಿಗೆಯಲ್ಲಿ ಯಾರಿಗೆ ಮಂತ್ರಿಗಿರಿ ಒಲಿಯಲಿದೆ ಮತ್ತು ಯಾರಿಗೆ ಶಾಕ್ (ಕೋಕ್) ಕಾದಿದೆ ಎಂಬುದು ಇನ್ನಷ್ಟೇ ಅಧಿಕೃತವಾಗಿ ಹೊರಬೀಳಬೇಕಿದೆ. ದೆಹಲಿ ಅಂಗಳದಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಈ ಸಂಭಾವ್ಯ ಪಟ್ಟಿಗೆ ಅಂತಿಮ ಮುದ್ರೆ ಬೀಳಲಿದ್ದು, ರಾಜ್ಯ ರಾಜಕಾರಣದ ಈ ಬಿಗ್ ಗೇಮ್‌ನಲ್ಲಿ ಯಾರು ಗೆದ್ದು ಬರಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.