ವಾಮಾಚಾರ ಬಗ್ಗೆ ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಡಿ.ಕೆ.ಶಿವಕುಮಾರ್
ದೇವಾಲಯದಲ್ಲಿಯೇ ವಾಮಾಚಾರ ನಡೆಯುತ್ತಿದೆ ಎಂದು ನಾನು ಎಲ್ಲಿಯೂ ಹೇಳಿಲ್ಲ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ' ಎಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು(ಜೂ.02): ಮುಖ್ಯಮಂತ್ರಿ ಹಾಗೂ ನನ್ನ ವಿರುದ್ಧ ಕೇರಳದ ರಾಜರಾಜೇಶ್ವರ ದೇವಸ್ಥಾನದ ಬಳಿಯ ಖಾಸಗಿ ಜಾಗದಲ್ಲಿ ಶತ್ರು ಭೈರವಿ ಯಾಗ ನಡೆಸಲಾಗಿದೆ ಎಂದು ಹೇಳಿದ್ದೇನೆಯೇ ಹೊರತು, ದೇವಸ್ಥಾನದಲ್ಲಿಯೇ ವಾಮಾಚಾರ ನಡೆಸಿದ್ದಾರೆ ಎಂದು ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೇರಳದ ದೇವಾಲಯಗಳಲ್ಲಿ ವಾಮಾಚಾರ, ಪ್ರಾಣಿ ಬಲಿ ನಡೆಯುತ್ತಿಲ್ಲ ಎಂದು ಕೇರಳ ಸರ್ಕಾರದ ಸಚಿವೆ ನೀಡಿರುವ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, 'ದೇವಾಲಯದಲ್ಲಿಯೇ ವಾಮಾಚಾರ ನಡೆಯುತ್ತಿದೆ ಎಂದು ನಾನು ಎಲ್ಲಿಯೂ ಹೇಳಿಲ್ಲ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ' ಎಂದರು.
ನನ್ನ, ಸಿಎಂ ನಾಶಕ್ಕಾಗಿ ಕೇರಳದಲ್ಲಿ ಶತ್ರುಭೈರವಿ ಯಾಗ: ಡಿಕೆಶಿ ಬಾಂಬ್
'ನಾನೂ ಕೂಡ ಇತ್ತೀಚೆಗೆ ಕೇರಳದ ರಾಜರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದೇನೆ. ಆದರೆ, ಎಲ್ಲಿ ವಾಮಾಚಾರ ನಡೆಯುತ್ತಿದೆ ಎಂಬ ಮಾಹಿತಿ ನೀಡಲಷ್ಟೇ ಆ ದೇವಾಲಯದ ಹೆಸರು ಬಳಸಿದೆ ಎಂದು ಶಿವಕುಮಾರ್ ಹೇಳಿದ್ದಾರೆ.