ನನ್ನ, ಸಿಎಂ ನಾಶಕ್ಕಾಗಿ ಕೇರಳದಲ್ಲಿ ಶತ್ರುಭೈರವಿ ಯಾಗ: ಡಿಕೆಶಿ ಬಾಂಬ್
ತನ್ಮೂಲಕ ಈವರೆಗೆ ಆರೋಪ, ಪ್ರತ್ಯಾರೋಪಗಳಿಗೆ ಮಾತ್ರ ಸೀಮಿತವಾಗಿದ್ದ ರಾಜಕೀಯ ಕಿತ್ತಾಟ, ಇದೀಗ ಮಾಟ-ಮಂತ್ರ, ಎದುರಾಳಿಯ ನಾಶಕ್ಕೆ ಕ್ಷುದ್ರ ಪ್ರಯೋಗ ಮಾಡುವ ಮಟ್ಟಕ್ಕೆ ಹೋಗಿದೆಯೇ ಎಂಬ ಚರ್ಚೆ ಹುಟ್ಟಿಕೊಂಡಿದೆ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು(ಮೇ.31): ‘ನನ್ನ ಹಾಗೂ ಮುಖ್ಯಮಂತ್ರಿಗಳ ನಾಶಕ್ಕಾಗಿ ಕೆಲವರು ಕೇರಳದಲ್ಲಿ ತಾಂತ್ರಿಕರನ್ನು ಬಳಸಿಕೊಂಡು ‘ಶತ್ರು ಭೈರವಿ ಯಾಗ’ ಪ್ರಯೋಗ ನಡೆಸುತ್ತಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ತನ್ಮೂಲಕ ಈವರೆಗೆ ಆರೋಪ, ಪ್ರತ್ಯಾರೋಪಗಳಿಗೆ ಮಾತ್ರ ಸೀಮಿತವಾಗಿದ್ದ ರಾಜಕೀಯ ಕಿತ್ತಾಟ, ಇದೀಗ ಮಾಟ-ಮಂತ್ರ, ಎದುರಾಳಿಯ ನಾಶಕ್ಕೆ ಕ್ಷುದ್ರ ಪ್ರಯೋಗ ಮಾಡುವ ಮಟ್ಟಕ್ಕೆ ಹೋಗಿದೆಯೇ ಎಂಬ ಚರ್ಚೆ ಹುಟ್ಟಿಕೊಂಡಿದೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ‘ನನ್ನ, ಮುಖ್ಯಮಂತ್ರಿಗಳ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾಗ ಮಾಡಲಾಗುತ್ತಿದೆ. ಕೇರಳದ ರಾಜರಾಜೇಶ್ವರಿ ದೇವಾಲಯದ ಆಸುಪಾಸಿನ ನಿರ್ಜನ ಪ್ರದೇಶದಲ್ಲಿ ಶತ್ರು ಸಂಹಾರಕ್ಕಾಗಿ ‘ಶತ್ರು ಭೈರವಿ ಯಾಗ’, ‘ರಾಜಕಂಟಕ’, ‘ಮಾರಣ ಮೋಹನ ಸ್ತಂಭನ ಯಾಗ’ ಪ್ರಯೋಗ ನಡೆಸಲಾಗುತ್ತಿದೆ. ಈ ಯಾಗವನ್ನು ಯಾರು ಮಾಡಿಸುತ್ತಿದ್ದಾರೆ ಎಂಬ ಎಲ್ಲ ಮಾಹಿತಿಯೂ ನನಗಿದೆ. ಆದರೆ ದೇವರು, ರಾಜ್ಯದ ಜನರ ಆಶೀರ್ವಾದ ನಮ್ಮನ್ನು ಕಾಪಾಡಲಿದೆ’ ಎಂದು ಹೇಳಿದರು.
ಇಡೀ ಸರ್ಕಾರಕ್ಕೆ ಕಾಂಗ್ರೆಸ್ ಅಧ್ಯಕ್ಷರ ಫರ್ಮಾನು..ಏನಿದರ ಗುಟ್ಟು..? ಏನಿದು ಬಂಡೆ ಮಾಡಿದ ಶಪಥ..?
ಅಘೋರಿಗಳ ಮೂಲಕ ಈ ಯಾಗ ಮಾಡಿಸಲಾಗುತ್ತಿದ್ದು, ಅದಕ್ಕಾಗಿ ಪಂಚ ಬಲಿ ನೀಡಲಾಗುತ್ತಿದೆ. ಕೆಂಪು ಬಣ್ಣದ 21 ಮೇಕೆ, 3 ಎಮ್ಮೆ, ಕಪ್ಪು ಬಣ್ಣದ 21 ಕುರಿ ಹಾಗೂ 5 ಹಂದಿಗಳನ್ನು ಬಲಿ ನೀಡುವ ಮೂಲಕ ಮಾಂತ್ರಿಕ ಯಾಗ ಮಾಡಲಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿಯಿದ್ದು, ಯಾರು ಮಾಡುತ್ತಿದ್ದಾರೆ ಎಂಬುದೂ ಸಹ ತಿಳಿದಿದೆ. ಅವರ ಪ್ರಯತ್ನ ಮಾಡಲಿ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ನಂಬಿಕೆ ಅವರದ್ದು. ನಾನು ನಂಬಿರುವ ಶಕ್ತಿ ನಮ್ಮನ್ನು ಕಾಪಾಡಲಿದೆ ಎಂದರು.
ಶತ್ರು ಭೈರವಿ ಯಾಗ ಅಂದರೆ
ಶತ್ರುವಿನ ತಲೆ ಕೆಡಿಸಲು ಮತ್ತು ಮರಣ ಹೊಂದುವಂತೆ ಮಾಡಲು ಈ ಯಾಗ ಮಾಡಿಸಲಾಗುತ್ತದೆ. 9 ದಿನಗಳ ಕಾಲ ರಾತ್ರಿಯಿಂದ ಬೆಳಗಿನ ಜಾವದವರೆಗೆ ಅಘೋರಿಗಳು ಈ ಯಾಗ ಮಾಡುತ್ತಾರೆ. ಇದು ಮಾಟ, ಮಂತ್ರದಂತಹ ಕ್ಷುದ್ರ ಶಕ್ತಿಗಳ ಪ್ರಯೋಗದ ಯಾಗ. ಹೆಚ್ಚುಕಮ್ಮಿ ಆದರೆ ಇದನ್ನು ಮಾಡಿಸುವವರೂ ಕಷ್ಟಕ್ಕೆ ಸಿಲುಕುತ್ತಾರೆ ಎಂಬ ನಂಬಿಕೆಯಿದೆ.
ವಿಧಾನ ಪರಿಷತ್ ಚುನಾವಣೆ 2024: 7 ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ 300 ಆಕಾಂಕ್ಷಿ..!
‘ಶತ್ರುಭೈರವಿ ಯಾಗ’ ಎಂದರೇನು?
ಶತ್ರು ಭೈರವಿ ಯಾಗವನ್ನು ಶತ್ರು ಮರ್ದನ ಯಾಗ ಅಥವಾ ವಿಷ ಯಾಗ ಎಂದೂ ಕರೆಯಲಾಗುತ್ತದೆ. ಶತ್ರುವಿನ ಬುದ್ಧಿಯ ಮೇಲೆ ಪರಿಣಾಮ ಬೀರುವುದು ಮತ್ತು ಶತ್ರು ಮರಣ ಹೊಂದುವಂತೆ ಮಾಡಲು ಈ ಯಾಗವನ್ನು ಮಾಡಿಸಲಾಗುತ್ತದೆ. ಸ್ಮಶಾನ ಕಾಳಿಯನ್ನು ಪ್ರಧಾನವಾಗಿಟ್ಟು ಅಷ್ಟ ಭೈರವಿಯರನ್ನು ಆಹ್ವಾನ ಮಾಡಿ ಯಾಗ ಮಾಡಿಸಲಾಗುತ್ತದೆ. ಈ ಯಾಗದ ಪ್ರಯೋಗ ಮೊದಲು ಪ್ರಾಣಿಗಳ ಮೇಲೆ ನಡೆಯುತ್ತದೆ.
ಅನಂತರ ಅದನ್ನು ಶತ್ರುವಿನ ಮೇಲೆ ಪ್ರಯೋಗಿಸಲಾಗುತ್ತದೆ. ಈ ಯಾಗದ ಹೋಮಕ್ಕೆ ವಿಷಯುಕ್ತ ಕಸರಕ ಮರದ ಚಕ್ಕೆ, ಹಂದಿ, ಎಮ್ಮೆಯ ತುಪ್ಪ ಸೇರಿ ಕ್ಷುದ್ರ ಪ್ರಯೋಗಕ್ಕೆ ಬಳಸುವ ಇನ್ನಿತರ ವಸ್ತುಗಳನ್ನು ಬಳಸಲಾಗುತ್ತದೆ.
ಈ ಯಾಗವನ್ನು 9 ದಿನಗಳ ಕಾಲ ರಾತ್ರಿ 11ರಿಂದ ಬೆಳಗಿನ ಜಾವದವರೆಗೆ ನಡೆಸಲಾಗುತ್ತದೆ. ಈ ಯಾಗವನ್ನು ಸಾಮಾನ್ಯ ಪುರೋಹಿತರು, ತಾಂತ್ರಿಕರು ಮಾಡದೆ ಕಪಾಲಿಕರು, ಮಾಂತ್ರಿಕರು ಸೇರಿದಂತೆ ಅಘೋರಿಗಳು ಮಾತ್ರ ಮಾಡುತ್ತಾರೆ. ಈ ಯಾಗದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮಾಡಿಸುವವರು, ಮಾಡುವ ಮಾಂತ್ರಿಕರಿಗೂ ಹಾನಿ ಸಂಭವಿಸುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ, ಈ ಪ್ರಯೋಗವನ್ನು ಸರಿಯಾದ ಕ್ರಮದಲ್ಲಿ ಮಾಡಿದರೆ 6 ತಿಂಗಳಿನಿಂದ 1 ವರ್ಷದಲ್ಲಿ ಅದರ ಪರಿಣಾಮ ಉಂಟಾಗಲಿದೆ ಎಂಬ ನಂಬಿಕೆಯಿದೆ.