ನನ್ನ ಮಗ ಅಮಾಯಕ, ಸುಮ್ಮನೆ ಅವನನ್ನು ಬಂಧಿಸಿದ್ದಾರೆ ಎಂದ ಶಂಕಿತ ಉಗ್ರ ಅರಾಫತ್ ಅಲಿ ತಂದೆ!
ದೆಹಲಿಯಲ್ಲಿ ಶಂಕಿತ ಉಗ್ರ ಅರಾಫತ್ ಅಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಚಾರವಾಗಿ ಅರಾಫತ್ ಅಲಿಯ ತಂದೆ ಅಹಮದ್ ಬಾವಾ ಮಾತನಾಡಿದ್ದಾರೆ.
ತೀರ್ಥಹಳ್ಳಿ (ಸೆ.15): ದೆಹಲಿಯಲ್ಲಿ ಶಂಕಿತ ಉಗ್ರ ಅರಾಫತ್ ಅಲಿ ಬಂಧನ ವಿಚಾರದಲ್ಲಿ ಅವರ ತಂದೆ ಅಹಮದ್ ಬಾವಾ ತೀರ್ಥಹಳ್ಳಿಯಲ್ಲಿ ಮಾತನಾಡಿದ್ದಾರೆ. ಅರಾಫತ್ ನನ್ನು ಪೊಲೀಸರು ಬಂಧಿಸಿರುವ ಮಾಹಿತಿ ಸಿಕ್ಕಿದೆ. ಆದರೆ, ಅರಾಫತ್ ದುಬೈ ಗೆ ಹೋಗಿ ಮೂರುವರೆ ವರ್ಷ ಆಗಿದೆ. ಅಲ್ಲಿಯವರೆಗೂ ಏನು ಇರಲಿಲ್ಲ. ಅವನ ಮೇಲೆ ಯಾವ ಕೇಸ್ ಹಾಕಿದ್ದಾರೋ ಗೊತ್ತಿಲ್ಲ. ನಮಗೆ ನ್ಯಾಯ ಬೇಕು. ಅವನೇನು ಮಾಡಿಲ್ಲ. ಸುಮ್ಮನೆ ಸಿಕ್ಕಿಸಿ ಹಾಕಿದ್ದಾರೆ. ತೀರ್ಥಹಳ್ಳಿಯ ಸಹ್ಯಾದ್ರಿ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೊಮಾ ಮಾಡಿದ್ದ. ಆದರೆ, ಫೇಲ್ ಆಗಿದ್ದ. ಬೆಂಗಳೂರಿಗೇನು ಹೋಗಿಲ್ಲ. ಬಳಿಕ ದುಬೈಗೆ ಹೋಗಿದ್ದ. ದುಬೈ ನಲ್ಲಿ ಪರ್ಪ್ಯೂಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕೊನೆವರೆಗೂ ಅಲ್ಲೆ ಇದ್ದ.ಆಗಾಗ ಹಣ ಕೂಡ ಕಳಿಸುತ್ತಿದ್ದ. ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ ಪೊಲೀಸರು ಮನೆಗೆ ಬಂದಿದ್ದರು. ಅರಾಫತ್ ಬಗ್ಗೆ ಕೇಳಿದ್ದರು. ಆಗ ದುಬೈಗೆ ಹೋಗಿ 10 ತಿಂಗಳಾಗಿದೆ ಎಂದು ಹೇಳಿದ್ದೆ. ಆತನೇ ಬರೆಯೋಕೆ ಹೇಳಿದ್ದಾನೆ. ಹಾಗಾಗೀ ಕೇಸ್ ಆಗಿದೆ ಎಂದು ಪೊಲೀಸರು ಹೇಳಿದ್ದರು ಎಂದು ಅಹಮದ್ ಬಾವಾ ತಿಳಿಸಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಸಂಚುಗಾರ ದೆಹಲಿಯಲ್ಲಿ ಬಂಧನ: ಕೀನ್ಯಾದಿಂದ ಬಂದಿಳಿಯುತ್ತಿದ್ದಂತೆ ಅರೆಸ್ಟ್
ಆ ವೇಳೆ ಮಗನ 2 ನಂಬರ್ ಕೂಡ ಪೊಲೀಸರಿಗೆ ಕೊಟ್ಟಿದ್ದೆ. ಮಂಗಳೂರು ಕೇಸ್‌ನಲ್ಲಿ ಸಿಕ್ಕವರು ಆತನ ಸ್ನೇಹಿತರು. ಹಾಗಾಗೀ ಕೇಸ್ ಹಾಕಿದ್ದಾರೆ. 2019 ರಲ್ಲಿ ಹೋಗಿದ್ದು. ಮಗನನ್ನು ನೋಡಿ ಮೂರೂವರೆ ವರ್ಷವಾಗಿದೆ. ಆಗಾಗ ಕಾಲ್ ಮಾಡಿ ವಿಚಾರಿಸುತ್ತಿದ್ದ. ಕಡೆಯದಾಗಿ ಒಂದು ತಿಂಗಳ ಹಿಂದೆ ಕಾಲ್ ಮಾಡಿದ್ದ. ಚೆನ್ನಾಗಿದ್ದೇನೆ. ಕೆಲಸ ಮಾಡ್ತಿದ್ದೇನೆ ಎಂದು ಹೇಳಿದ್ದ. ಮನೆಗೆ ಹಣ ಕಳಿಸೋದನ್ನ ಒಂದು ವರ್ಷದ ಹಿಂದೆಯೇ ನಿಲ್ಲಿಸಿದ್ದಾನೆ. ನಾನು ಯಾವ ಕೇಸಲ್ಲೂ ಇಲ್ಲ. ನನಗೇನು ಗೊತ್ತಿಲ್ಲ ಎಂದಷ್ಟೆ ಹೇಳುತ್ತಿದ್ದ. ಇಲ್ಲಿ ಏನಾಗಿದೆ ಎಂದು ಗೊತ್ತಿಲ್ಲ. ನಮಗೆ ನ್ಯಾಯ ಬೇಕು. ಅವನು ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ಅವನಾದ್ರೂ ಅಷ್ಟೆ. ನಾನಾದ್ರೂ ಅಷ್ಟೇ ಎಂದ ಅರಾಫತ್ ಅಲಿ ತಂದೆ ಅಹಮ್ಮದ್ ಬಾವಾ ಮಾತನಾಡಿದ್ದಾರೆ.