ನಾನು ಮುಂದಿನ ಚುನಾವಣೆಗೆ ಕಾರ್ಕಳದಿಂದಲೇ ಸ್ಪರ್ಧಿಸುತ್ತೇನೆ. ಕಾರ್ಕಳ ವಿಧಾನಸಭಾ ಕ್ಷೇತ್ರ ನನಗೆ ರಾಜಕೀಯ ದೀಕ್ಷೆ ನೀಡಿದ ಕ್ಷೇತ್ರ. ಬೇರೆ ಕ್ಷೇತ್ರಕ್ಕೆ ಓಡಿ ಹೋಗುವುದಿಲ್ಲ ಎಂದು ಸಚಿವ ವಿ.ಸುನಿಲ್‌ ಕುಮಾರ್‌ ಹೇಳಿದರು.

ಕಾರ್ಕಳ (ಡಿ.02): ನಾನು ಮುಂದಿನ ಚುನಾವಣೆಗೆ ಕಾರ್ಕಳದಿಂದಲೇ ಸ್ಪರ್ಧಿಸುತ್ತೇನೆ. ಕಾರ್ಕಳ ವಿಧಾನಸಭಾ ಕ್ಷೇತ್ರ ನನಗೆ ರಾಜಕೀಯ ದೀಕ್ಷೆ ನೀಡಿದ ಕ್ಷೇತ್ರ. ಬೇರೆ ಕ್ಷೇತ್ರಕ್ಕೆ ಓಡಿ ಹೋಗುವುದಿಲ್ಲ ಎಂದು ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು. ಅವರು ಗುರುವಾರ ಕಾರ್ಕಳ ಬಿಜೆಪಿ ಕಾರ್ಕಳ ವತಿಯಿಂದ ಮಂಜುನಾಥ್‌ ಪೈ ಸಭಾ ಭವನದಲ್ಲಿ ನಡೆದ ಬೂತ್‌ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಸರ್ಕಾರದ ಸಾಧನೆಯನ್ನು ಬೂತ್‌ ಮಟ್ಟದ ಕಾರ್ಯಕರ್ತರು ಮನೆಮನೆಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ. ಅದಕ್ಕಾಗಿ ಬೂತ್‌ ಮಟ್ಟದ ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. 

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಲವ್‌ ಜಿಹಾದ್‌ ವಿರುದ್ಧ ಕಾನೂನು , ಗೋಹತ್ಯೆ ನಿಷೇಧ, ಟಿಪ್ಪು ಜಯಂತಿ ಆಚರಣೆ ನಿಲ್ಲಿಸಿದ್ದು, ಹಿಜಾಬ್‌ ವಿರುದ್ಧ ಗಟ್ಟಿಧ್ವನಿಯಾಗಿ ನಿಂತು ಸಮವಸ್ತ್ರ ಧರಿಸಲು ಕಾನೂನು ಜಾರಿಗೊಳಿಸಿದ್ದ ಹೀಗೆ ಅನೇಕ ಉತ್ತಮ ಕ್ರಮಗಳನ್ನು ಬಿಜೆಪಿ ಸರ್ಕಾರ ಕೈಗೊಂಡಿದೆ. ಇವುಗಳನ್ನೆಲ್ಲ ಕಾರ್ಯಕರ್ತರು ಜನರಿಗೆ ಮುಟ್ಟಿಸುವ ಕಾರ್ಯ ಮಾಡಬೇಕೆಂದು ಕಿವಿಮಾತು ಹೇಳಿದರು.

ಮಂಗಳೂರು ಸ್ಫೋಟ ಪ್ರಕರಣ: ಸಮಾಜವನ್ನು ದುರ್ಬಲಗೊಳಿಸಲು ಬಿಡುವುದಿಲ್ಲ: ಸಚಿವ ಸುನಿಲ್ ಕುಮಾರ್

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 108 ಅಡಿ ಎತ್ತರದ ಟಿಪ್ಪು ಪ್ರತಿಮೆ ಮಾಡುತ್ತೇವೆ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಜನರು ಅಭಿವೃದ್ಧಿ ಕಾರ್ಯಗಳನ್ನು ಮರೆತು ಇಂಥ ಅಪಪ್ರಚಾರಗಳನ್ನು ನಂಬುತ್ತಿದ್ದಾರೆ. ಹಾಗಾಗಿ ಬಿಜೆಪಿ ಕಾರ್ಯಕರ್ತರು ಜನರಿಗೆ ನಮ್ಮ ಸರ್ಕಾರದ ಸಾಧನೆಗಳನ್ನು ಮುಟ್ಟಿಸಬೇಕು ಎಂದರು.

ಬಿಜೆಪಿ ಕ್ಷೇತ್ರಾದ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿ ಚುನಾವಣೆಗೆ ದಿಕ್ಕನ್ನು ತೋರಿಸುವ ಸಲುವಾಗಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕಾರ್ಯವಾಗುತ್ತಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿ ಮಾದರಿಯಾದ ಕ್ಷೇತ್ರವಾಗಿದೆ. ಇಲ್ಲಿನ ಅಭಿವೃದ್ಧಿಯನ್ನು ಸಹಿಸದೆ ಕಾಂಗ್ರೆಸ್‌ ಅಪಚಾರ ಮಾಡುತ್ತದೆ ಎಂದರು. ಬಿಜೆಪಿ ಮುಖಂಡ ರವೀಂದ್ರ ಶೆಟ್ಟಿಬಜಗೋಳಿ ಮಾತನಾಡಿ ಕಾರ್ಕಳ ಕ್ಷೇತ್ರ ಧಾರ್ಮಿಕ ಸಾಂಸ್ಕೃತಿಕ ಹೊಸ ಕಲ್ಪನೆಯಾಗಿ ಮೂಡಿಬರಲು ಬಿಜೆಪಿ ಕಾರಣವಾಗಿದೆ. ಕಾರ್ಕಳ ಬಿಜೆಪಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಅಭಿವೃದ್ಧಿಗೊಳಿಸಿದ ಕ್ಷೇತ್ರವಾಗಿದೆ ಎಂದರು.

ಹಾವೇರಿ: 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಬಿಜೆಪಿ ಮುಖಂಡರಾದ ಬೋಳ ಪ್ರಭಾಕರ್‌ ಕಾಮತ್‌, ಎಂ.ಕೆ. ವಿಜಯಕುಮಾರ್‌ ಮಾತನಾಡಿದರು. ಹೆಬ್ರಿ ಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ್‌ ಶಿವಪುರ, ಸಾಣೂರು ಶಕ್ತಿ ಕೆಂದ್ರದ ಕರುಣಾಕರ್‌ ಕೋಟ್ಯಾನ್‌, ಪುರುಷೋತ್ತಮ್‌ ಮುಲ್ಲಡ್ಕ, ರವೀಂದ್ರ ಮೂಳೂರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಮಾಳ ಗ್ರಾಮ ಪಂಚಾಯಿತಿ ಸದಸ್ಯ ಸಂಜೀವ ಮಾಳ ಸೇರಿದಂತೆ ವಿವಿಧ ಸದಸ್ಯರು ಬಿಜೆಪಿ ಪಕ್ಷ ಸೇರಿದರು. ಬಿಜೆಪಿ ನಗರ ಶಕ್ತಿ ಕೇಂದ್ರ ಅಧ್ಯಕ್ಷ ರವೀಂದ್ರ ಮೊಯಿಲಿ ಸ್ವಾಗತಿಸಿದರು. ಸಾಣೂರು ನರಸಿಂಹ ಕಾಮತ್‌ ನಿರೂಪಿಸಿದರು.