Asianet Suvarna News Asianet Suvarna News

ಹಾವೇರಿ: 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಹಾವೇರಿಯಲ್ಲಿ ಜನವರಿ 6 ರಿಂದ ಮೂರು ದಿನಗಳ ಕಾಲ ನಡೆಯಲಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್‌ ಕುಮಾರ್ ಶನಿವಾರ ಬಿಡುಗಡೆಗೊಳಿಸಿದರು. 

Kannada Sahitya Sammelana Logo Launched At Haveri gvd
Author
First Published Oct 30, 2022, 1:35 AM IST

ಹಾವೇರಿ (ಅ.30): ಹಾವೇರಿಯಲ್ಲಿ ಜನವರಿ 6 ರಿಂದ ಮೂರು ದಿನಗಳ ಕಾಲ ನಡೆಯಲಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್‌ ಕುಮಾರ್ ಶನಿವಾರ ಬಿಡುಗಡೆಗೊಳಿಸಿದರು. ಇಲ್ಲಿಯ ಜಿ.ಪಂ. ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಲಾಂಛನ ಬಿಡುಗಡೆಗೊಳಿಸಲಾಯಿತು. ಜಿಲ್ಲೆಯ ಅಸ್ಮಿತೆಯನ್ನು ಬಿಂಬಿಸುವ ರೀತಿಯಲ್ಲಿ ಲಾಂಛನವನ್ನು ವಿನ್ಯಾಸಗೊಳಿಸಲಾಗಿದೆ. ತಾಯಿ ಭುವನೇಶ್ವರಿಯ ಚಿತ್ರವನ್ನು ಪ್ರಧಾನವಾಗಿ ತೋರಿಸಲಾಗಿದ್ದು, ಜಿಲ್ಲೆಯ ಕೃಷ್ಣಮೃಗ ಅಭಯಾರಣ್ಯ, ನವಿಲು ಧಾಮ ಬಿಂಬಿಸುವ ಚಿತ್ರ.

ಹಾವೇರಿಯ ಏಲಕ್ಕಿ ಹಾರ, ಬ್ಯಾಡಗಿ ಮೆಣಸು, ಜಾನಪದ ವಿವಿಯ ‘ಹೊನ್ನ ಬಿತ್ತೇವು ಹೊಲಕೆಲ್ಲ’ ಎಂಬ ಘೋಷವಾಕ್ಯ, ಕೆಳಭಾಗದಲ್ಲಿ ಹಾನಗಲ್‌ ಕುಮಾರ ಸ್ವಾಮೀಜಿ, ವಿ.ಕೃ. ಗೋಕಾಕ, ಅಂಬಿಗರ ಚೌಡಯ್ಯ, ಸರ್ವಜ್ಞ, ಕನಕದಾಸರು, ಶಿಶುನಾಳ ಶರೀಫರು, ಪುಟ್ಟರಾಜ ಗವಾಯಿಗಳು, ಹೆಳವನಕಟ್ಟೆಗಿರಿಯಮ್ಮ, ಗಳಗನಾಥರು, ಮೈಲಾರ ಮಹದೇವಪ್ಪ, ಮದಗ ಮಾಸೂರು ಕೆರೆ ಚಿತ್ರವನ್ನು ವಿನ್ಯಾಸಗೊಳಿಸಲಾಗಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹ ಕುಲಸಚಿವ ಶಹಜಹಾನ್‌ ಮುದಕವಿ ಅವರು ಸಮ್ಮೇಳನದ ಲಾಂಛನ ವಿನ್ಯಾಸಗೊಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಹಾಗೂ ಇತರರು ಈ ವೇಳೆ ಹಾಜರಿದ್ದರು.

ಮೈಸೂರು ದಸರಾ ಮೀರಿಸುವಂತೆ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡ್ತೀವಿ

ಇಂದಿನಿಂದಲೇ ಸಿದ್ಧತೆ ಆರಂಭಿಸಿ: ಹಾವೇರಿಯಲ್ಲಿ ಜ. 6ರಿಂದ ಮೂರು ದಿನಗಳ ಕಾಲ ‘86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ನಡೆಸಬೇಕು. ವಿವಿಧ ಸಮಿತಿಗಳು ಇಂದಿನಿಂದಲೇ ಸಿದ್ಧತಾ ಕಾರ್ಯ ಆರಂಭಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ. ಸುನೀಲ್‌ಕುಮಾರ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸಾಹಿತ್ಯ ಸಮ್ಮೇಳನ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿದ ಅವರು, ಅತ್ಯಂತ ಯಶಸ್ವಿಯಾಗಿ ಸಮ್ಮೇಳನ ನಡೆಸಲು ಎಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. 

ಸಂಘ-ಸಂಸ್ಥೆಗಳು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಲಹೆ ನೀಡಿದರು. ಜಿಲ್ಲಾಡಳಿತ ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಿದೆ. ಹೆಚ್ಚಿನ ಸಮಿತಿಗಳನ್ನು ರಚಿಸಿಕೊಂಡು ಕಾರ್ಯೋನ್ಮುಖವಾಗಬೇಕು. ಕೋವಿಡ್‌ ನಂತರದ ದಿನಗಳಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಇದಾಗಿದೆ. ಕೆಲ ದಿನಗಳ ಹಿಂದಷ್ಟೇ ಅದ್ಧೂರಿಯಾಗಿ ಮೈಸೂರು ದಸರಾ ನಡೆಸಲಾಗಿದೆ. ಅದಕ್ಕಿಂತ ಮಿಗಿಲಾಗಿ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂದರು.

ಜನವರಿ 6-8ರವರೆಗೆ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ!

ಆಹಾರ ವ್ಯವಸ್ಥೆ, ವಸತಿ ವ್ಯವಸ್ಥೆ, ಮೆರವಣಿಗೆ ಸೇರಿದಂತೆ ಎಲ್ಲ ಅಚ್ಚುಕಟ್ಟಾಗಿ ನಡೆಯಬೇಕು. ಜಿಲ್ಲೆಯಲ್ಲಿ ಅಂದಾಜು 25 ಸಾವಿರ ಜನರಿಗೆ ವಸತಿ ಸೌಕರ್ಯ ಕಲ್ಪಿಸಲು ಸಾಧ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಳಿದಂತೆ ದಾವಣಗೆರೆ, ಧಾರವಾಡ ಹಾಗೂ ಗದಗ ಜಿಲ್ಲೆಗಳ ಜಿಲ್ಲಾಡಳಿತದೊಂದಿಗೆ ಸಂಪರ್ಕ ಸಾಧಿಸಿ ವಸತಿ ಸೌಕರ್ಯ ಕಲ್ಪಿಸಬೇಕು. ಸ್ವಚ್ಛತೆ ಕಾರ್ಯ, ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲಿಯೂ ಲೋಪವಾಗಬಾರದು. ಇಲ್ಲಿ ನಡೆಯುವ ಚರ್ಚೆಗಳು, ಗೋಷ್ಠಿಗಳು ಕರ್ನಾಟಕಕ್ಕೆ, ಕನ್ನಡಕ್ಕೆ ಹೊಸ ಬೆಳಕು ನೀಡುವ ನಿಟ್ಟಿನಲ್ಲಿ ಆಯೋಜಿಸಬೇಕು ಎಂದು ಸಲಹೆ ನೀಡಿದರು.

Follow Us:
Download App:
  • android
  • ios