ಭಾರತೀಯ ಮತ್ತು ಸನಾತನ ಪರಂಪರೆ ಉಳಿಯುತ್ತಿರುವುದು ನಮ್ಮ ಮಠ ಮಾನ್ಯಗಳಿಂದ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮೈಸೂರು (ಆ.29): ಭಾರತೀಯ ಮತ್ತು ಸನಾತನ ಪರಂಪರೆ ಉಳಿಯುತ್ತಿರುವುದು ನಮ್ಮ ಮಠ ಮಾನ್ಯಗಳಿಂದ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ನಗರದ ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ನಡೆದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಶತೋತ್ತರ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಪ್ರಸಾದ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅನ್ನ, ಅಕ್ಷರ ಆರೋಗ್ಯಕ್ಕೆ ಹೆಸರಾದ ಸುತ್ತೂರು ಸಂಸ್ಥೆಗೂ ಜಯಚಾಮರಾಜ ಒಡೆಯರ್ ಅವರಿಗೆ ಅವಿನಾಭಾವ ಸಂಬಂಧ. ಅಂದಿನಿಂದಲೂ ಅರಮನೆಗೂ, ಶ್ರೀಮಠಕ್ಕೂ ಉತ್ತಮ ಸಂಬಂಧ ಮುಂದುವರೆದುಕೊಂಡಿದೆ. ಇದು ಹೆಮ್ಮೆ ವಿಷಯ. ಇಡೀ ಕರ್ನಾಟಕದಲ್ಲಿ ಸಂಸ್ಥೆಗೆ ಒಳ್ಳೆಯ ಹೆಸರಿದ್ದು, ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದೆ. ಅನೇಕರಿಗೆ ಶ್ರೀಮಠವು ಆಶ್ರಯವಾಗಿದೆ ಎಂದು ಅವರು ಹೇಳಿದರು. ವಿಕಸಿತ ಭಾರತ ಆರ್ಥಿಕವಾಗಿ ಉತ್ತಮವಾಗಿ ಇರಬೇಕು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಯಂತೆ ಸಬ್ ಕಾ ವಿರಾಸತ್ ಕೂಡ ಮುಖ್ಯ. ಅಂತಹ ಪರಂಪರೆಯ ರಕ್ಷಣೆ ಮಠಗಳಲ್ಲಿ ಮಾತ್ರ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಧರ್ಮದ ವಿಷಯದಲ್ಲಿ ಏನೆಲ್ಲ ಬೆಳವಣಿಗೆ ಆಗುತ್ತಿದೆ ಎಂಬುದನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಸೂಚ್ಯವಾಗಿ ನುಡಿದ ಅವರು, ರೈತರ ಸಬಲೀಕರಣಕ್ಕೂ ಕೂಡ ಶ್ರೀಮಠ ಒಳ್ಳೆಯ ಕೆಲಸ ಮಾಡುತ್ತಿದೆ ಎಂದರು. ಈ ಹಿಂದೆ ಕೃಷಿಗೆ 27,663 ಕೋಟಿ ರೂ. ಬಜೆಟ್ ನಲ್ಲಿ ಮೀಸಲಿತ್ತು. ಆದರೆ ಪ್ರಧಾನಿ ಮೋದಿ ಅವರು ಬಂದ ಮೇಲೆ 1,08,664 ಕೋಟಿ ಮೀಸಲಿಟ್ಟಿದೆ. ದೇಶದ ಅಭಿವೃದ್ಧಿಯ ಯಂತ್ರ ಕೃಷಿ ಮಾತ್ರ ಎಂಬುದು ಪ್ರಧಾನಿಗಳಿಗೆ ಗೊತ್ತಿದೆ ಎಂದು ಅವರು ಹೇಳಿದರು.
ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಮೈಸೂರಿಗೆ ಅರಮನೆ ಗರಿಮೆಯಾದರೆ, ಸುತ್ತೂರು ಶ್ರೀಮಠ ಹಿರಿಮೆಯಾಗಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದ ನೆಲಸಲು ಸ್ಥಾಪನೆಯಾದ ಮಠವಿದು. ವಚನಕಾರರಾದ ಘನಲಿಂಗ ಶಿವಯೋಗಿಗಳು, ಮಂತ್ರಮಹರ್ಷಿಗಳಂತಹ ಪೂಜ್ಯರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಅಕ್ಷರ ಕ್ರಾಂತಿಯನ್ನು ಮಾಡಿದ ರಾಜೇಂದ್ರ ಶ್ರೀಗಳು ನಾಡಿನ ಉದ್ದಗಲಕ್ಕೂ ಮಠದ ಸೇವಾ ಕಾರ್ಯಗಳನ್ನು ಎಲ್ಲಾ ಕ್ಷೇತ್ರಕ್ಕೂ ವಿಸ್ತರಿಸಿದ್ದಾಗಿ ಹೇಳಿದರು.
ಅವರು ಮಾತ್ರ ಉದ್ಧಾರವಾಗದೇ, ಎಲ್ಲರ ಬದುಕನ್ನು ಉದ್ಧಾರವಾಗಿಸಿದರು. ಭವಸಾಗರದಿಂದ ಎಲ್ಲರನ್ನೂ ದಾಟಿಸುವ ಕೆಲಸವನ್ನು ಮಾಡಿದರು. ಬಹಳ ಕಷ್ಟ ಕಾಲದಲ್ಲಿ ಪ್ರಸಾದ ನಿಲಯಗಳನ್ನು ತೆರೆದರು. ಅನೇಕ ಕಷ್ಟದ ಸಂದರ್ಭಗಳಲ್ಲಿಯೂ ತ್ಯಾಗದಿಂದ ಪ್ರಸಾದ ನಿಲಯಗಳನ್ನು ಮುನ್ನಡೆಸಿದ್ದಾರೆ. ರಾಜೇಂದ್ರ ಶ್ರೀಗಳು ಈ ಭಾಗದ ಜನರಿಗೆ ದಾರಿ ದೀಪವಾದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಬಹಳ ದೊಡ್ಡಜ್ಯೋತಿಯಾಗಿ ಎಲ್ಲರನ್ನೂ ಕೈ ಹಿಡಿದು ಮುನ್ನಡೆಸುತ್ತಿದ್ದಾರೆ ಎಂದರು.
ಸುತ್ತೂರು ಮತ್ತು ಸಿದ್ಧಗಂಗಾ ಶ್ರೀಮಠಗಳ ಮಧ್ಯೆ ಅವಿನಾಭಾವ ಸಂಬಂಧವಿದೆ. ಶಿವಕುಮಾರ ಶ್ರೀಗಳು ಮತ್ತು ರಾಜೇಂದ್ರ ಶ್ರೀಗಳು ಸಮಾಜ ಎರಡು ಕಣ್ಣುಗಳಿದ್ದಂತೆ ಎಂದು ಗವಿಮಠದಶ್ರೀ ಗೌರಿಶಂಕರಸ್ವಾಮೀಜಿ ಹೇಳುತ್ತಿದ್ದರೆಂದು ಸ್ಮರಿಸಿದರು. ಈ ವೇಳೆ ಸರ್ವದರ್ಶನ ಸಂಗ್ರಹ ಮತ್ತು ಕಾಯಕ ತಪಸ್ವಿ ಕೃತಿಗಳ ನಾಲ್ಕನೇ ಆವೃತ್ತಿಗಳು ಹಾಗೂ ಪ್ರಸಾದ ಮತ್ತು ಜೆಎಸ್‌ಎಸ್ ವಾರ್ತಾಪತ್ರಗಳ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಶಾಸಕರಾದ ಟಿ.ಎಸ್. ಶ್ರೀವತ್ಸ, ಎ.ಆರ್. ಕೃಷ್ಣಮೂರ್ತಿ, ಗಣೇಶ್ ಪ್ರಸಾದ್ ಮಾತನಾಡಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೇಂದ್ರ ಸಚಿವ ಶಿವರಾಜ್‌ಸಿಂಗ್ ಚೌವ್ಹಾಣ್, ಶಾಸಕರಾದ ಜಿ.ಟಿ. ದೇವೇಗೌಡ, ದರ್ಶನ್ ಧ್ರುವನಾರಾಯಣ್, ಅನಿಲ್‌ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ, ಮಾಜಿ ಶಾಸಕರಾದ ಸಿ.ಎಸ್. ನಿರಂಜನ ಕುಮಾರ್, ಎಸ್. ಬಾಲರಾಜ್, ತೋಂಟದಾರ್ಯ, ಕಾಡಾ ಅಧ್ಯಕ್ಷ ಮರಿಸ್ವಾಮಿ ಇದ್ದರು.
