ಮುಸ್ಲಿಂ ಮುಖಂಡ ಸಾದಿಕ್, ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಮುಸ್ಲಿಂ ಸಮುದಾಯ ಡಿಕೆಶಿ ಮುಖ ನೋಡಿ ಮತ ಹಾಕಿದ್ದು, ಅಧಿಕಾರ ಹಸ್ತಾಂತರ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು(ನ.29): ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಗುಪ್ತ ಚರ್ಚೆಗಳ ನಡುವೆಯೇ, ಮುಸ್ಲಿಂ ಸಮುದಾಯದ ಮುಖಂಡರೊಬ್ಬರು ನೇರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ಮುಸ್ಲಿಂ ಮುಖಂಡ ಸಾದಿಕ್ ಅವರು ನೀಡಿರುವ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಡಿಕೆಶಿಗೆ ಅಧಿಕಾರ ಹಸ್ತಾಂತರ ಮಾಡದಿದ್ದರೆ ಮುಸ್ಲಿಂ ಸಮುದಾಯ ಮುಂದಿನ ಚುನಾವಣೆಯಲ್ಲಿ ಯೋಚನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮುಸ್ಲಿಮರ ವೋಟ್ ಡಿಕೆಶಿಗೆ, ಸಿದ್ದರಾಮಯ್ಯಗೆ ಅಲ್ಲ!
ಸಾದಿಕ್ ಅವರು ತಮ್ಮ ವಿಡಿಯೋ ಹೇಳಿಕೆಯಲ್ಲಿ ಮುಸ್ಲಿಂ ಸಮುದಾಯದ ವೋಟ್ ಬ್ಯಾಂಕ್ ಕುರಿತು ಸ್ಪಷ್ಟ ಮಾತುಗಳನ್ನಾಡಿದ್ದಾರೆ. ಸಿದ್ದರಾಮಯ್ಯ ಅವರ ಮುಖ ನೋಡಿ ಮುಸ್ಲಿಮರು 2023ರ ವಿಧಾನಸಭಾ ಚುನಾವಣೆಯಲ್ಲಿ ವೋಟ್ ಮಾಡಿಲ್ಲ. ಬದಲಾಗಿ, ನಾವು ಡಿಕೆ ಶಿವಕುಮಾರ್ ಅವರ ಮುಖ ನೋಡಿ ವೋಟ್ ಮಾಡಿದ್ದೇವೆ. ಮುಸ್ಲಿಮರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಡಿಕೆಶಿ ಅವರು ನಮಗೆ ಮಾತು ಕೊಟ್ಟಿದ್ದರು ಎಂದು ಸಾದಿಕ್ ಹೇಳಿದ್ದಾರೆ.
ಸಿದ್ದರಾಮಯ್ಯ ರೆಡಿಮೇಡ್ ಸಿಎಂ:
ಮುಸ್ಲಿಮರು ವೋಟು ಹಾಕಿದ್ದು ಡಿಕೆ ಶಿವಕುಮಾರ್ ಅವರ ಮುಖ ನೋಡಿ ಆದರೆ, ರೆಡಿಮೇಡ್ ಆಗಿ ಸಿಕ್ಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ ಎಂದು ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಸಾದಿಕ್ ಅವರು, ಡಿಕೆ ಶಿವಕುಮಾರ್ ಅವರನ್ನ ಉಳಿದ ಅವಧಿಗೆ ಮುಖ್ಯಮಂತ್ರಿ ಮಾಡದಿದ್ರೆ ನಾವು ಯೋಚಿಸಬೇಕಾಗುತ್ತೆ ಎಂದು ನೇರವಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಗಡುವು ನೀಡಿದಂತಿದೆ. ಇದರ ಜೊತೆಗೆ, ಮುಸ್ಲಿಂ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿರುವ ಅವರು, 'ಮುಸ್ಲಿಂ ಎಂಎಲ್‌ಎಗಳಲ್ಲಿ ಒಬ್ಬರನ್ನು ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನಕ್ಕೆ ನೇಮಕ ಮಾಡಬೇಕು' ಎಂದು ಆಗ್ರಹಿಸಿದ್ದಾರೆ.


