ಮಸೂದ್, ಫಾಝಿಲ್ ಕುಟುಂಬಕ್ಕೆ 30 ಲಕ್ಷ, ಪ್ರವೀಣ್ ಫ್ಯಾಮಿಲಿಗೂ ನೀಡಲು ಮುಸ್ಲಿಂ ಕಮಿಟಿ ತೀರ್ಮಾನ
ಮಂಗಳೂರು, (ಆಗಸ್ಟ್.12): ದಕ್ಷಿಣ ಕನ್ನಡದಲ್ಲಿ ಒಂದೇ ತಿಂಗಳಲ್ಲಿ ಮೂರು ಕೊಲೆಯಾಗಿದ್ದು, ಇಡೀ ರಾಜ್ಯವೇ ಬೆಚ್ಚಿಬೀಳಿಸಿದೆ. ಇನ್ನು ಮಸೂದ್ ಹಾಗೂ ಫಾಝಿಲ್ ಕುಟುಂಬಕ್ಕೆ ಮುಸ್ಲಿಂ ಕಮಿಟಿ ಪರಿಹಾರ ನೀಡಿದೆ.
ಮಂಗಳೂರು, (ಆಗಸ್ಟ್.11): ಇತ್ತೀಚೆಗೆ ಕೊಲೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಸೂದ್, ಫಾಝಿಲ್ ಕುಟುಂಬಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ 30 ಲಕ್ಷ ರೂ ಪರಿಹಾರ ನೀಡಲಾಇ ಚೆಕ್ ವಿತರಿಸಲಾಯಿತು.
ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರತೀ ಕುಟುಂಬಕ್ಕೂ 30 ಲಕ್ಷ ರೂಪಾಯಿಯಂತೆ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ ಎಸ್. ಮುಹಮ್ಮದ್ ಮಸೂದ್ ನೇತೃತ್ವದಲ್ಲಿ ಚೆಕ್ ವಿತರಿಸಲಾಯಿತು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ. ಎಸ್. ಮುಹಮ್ಮದ್ ಮಸೂದ್, ಪ್ರವೀಣ್ ಕುಟುಂಬಕ್ಕೂ ಪರಿಹಾರ ನೀಡಲು ನಿರ್ಧರಿಸಲಾಗಿದ್ದು, ಕುಟುಂಬಸ್ಥರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಸದ್ಯದ ಪರಿಸ್ಥಿತಿ ಹಿನ್ನೆಲೆ ಕುಟುಂಬಸ್ಥರು ಭೇಟಿ ನಿರಾಕರಿಸಿದ್ದರಿಂದ ಮುಂದಿನ ದಿನಗಳಲ್ಲಿ ಪ್ರವೀಣ್ ಕುಟುಂಬಕ್ಕೂ ಪರಿಹಾರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರವೀಣ್ ಹತ್ಯೆ ಕೇಸ್, ಪೊಲೀಸ್ರಿಗೆ ಪ್ರಮುಖ ಆರೋಪಿ ಸುಳಿವು, ಆಸ್ತಿ ಮುಟ್ಟುಗೋಲಿಗೆ ಸಜ್ಜು
ನಾವು ಪ್ರವೀಣ್ ಕುಟುಂಬಕ್ಕೂ ಪರಿಹಾರ ಕೊಡಲು ನಿರ್ಧಾರ ಮಾಡಿದ್ದೆವು. ಅವರು ತೆಗೆದುಕೊಂಡರೇ 100% ಅವರಿಗೂ ಪರಿಹಾರ ಕೊಡ್ತೇವೆ. ಅದರೆ ಅವರ ಮನೆಗೆ ಹೋದ್ರೆ ಗಲಾಟೆ ಆಗುತ್ತೆ ಅಂತ ಹೇಳಿದ್ದಾರೆ. ಸ್ಥಳೀಯರು ಹೇಳಿದ ಕಾರಣ ನಾವು ಅಲ್ಲಿಗೆ ಹೋಗ್ತಾ ಇಲ್ಲ. ಅವರ ಸಾವಿನ ಬಗ್ಗೆ ನಮಗೆ ದುಃಖವಿದೆ, ಆ ಕುಟುಂಬಕ್ಕೂ ಸಾಂತ್ವನ ಬೇಕು. ಅವರು ತೆಗೆದುಕೊಂಡರೆ 5 ರಿಂದ 10 ಲಕ್ಷ ಕೊಡ್ತೇವೆ. ಅವರು ಒಪ್ಪಿಕೊಂಡರೆ ನಾವೇ ಬಂದು ಹಣ ಕೊಡ್ತೇವೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜು.19ರಂದು ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು.ಆದ್ರೆ ಚಿಕಿತ್ಸೆ ಫಲಿಸದೆ ಜು.21ರಂದು ಮಸೂದ್ ಸಾವನ್ನಪ್ಪಿದ್ದ.
ಮಸೂದ್ ಹತ್ಯೆ ಬೆನ್ನಲ್ಲೇ ಅದೇ ಊರಿನಲ್ಲಿ ಅಂದ್ರೆ ಬೆಳ್ಳಾತೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯಾಗಿತ್ತು. ಇದಾದ ಬಳಿಕ ಸುರತ್ಕಲ್‌ನಲ್ಲಿ ಫಾಝಿಲ್ ಎನ್ನುವಾತನನ್ನು ಕೊಲೆ ಮಾಡಲಾಗಿತ್ತು. ಈ ಮೂರು ಕೊಲೆ ಹಿನ್ನೆಯೆಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.
ಸರ್ಕಾರದಿಂದ ಪರಿಹಾರ
ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಇತ್ತೀಚೆಗೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಈ ವೇಳೆ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಿದ್ದರು.
ಆದ್ರೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಇನ್ನುಳಿದ ಮಸೂದ್ ಹಾಗೂ ಫಾಝಿಲ್ ನಿವಾಸಕ್ಕೆ ಭೇಟಿ ನೀಡಿಲ್ಲ. ಹಾಗೇ ಪರಿಹಾರವನ್ನೂ ಸಹ ಕೊಟ್ಟಿಲ್ಲ.ಇದರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.
ಒಂದು ಧರ್ಮಕ್ಕೆ ಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಅಲ್ಲ. ಅವರು ಇಡೀ ಕರ್ನಾಟಕಕ್ಕೆ ಎಲ್ಲಾ ಧರ್ಮದ ಸಿಎಂ ಅಂತೆಲ್ಲಾ ಆಕ್ರೋಶಗಳು ವ್ಯಕ್ತವಾಗಿದ್ದವು.
ಪ್ರವೀಣ್ ನೆಟ್ಟಾರ್ ಅವರು ಬೆಳ್ಳಾರೆಯಲ್ಲಿ ಅಕ್ಷಯ ಪ್ರೆಶ್ ಚಿಕನ್ ಫಾರ್ಮ್ ಎಂಬ ಕೋಳಿ ಅಂಗಡಿಯನ್ನು ನಡೆಸುತ್ತಿದ್ದರು. ಜು 26 ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಪ್ರವೀಣ್ ತನ್ನ ಬೈಕ್ ನಲ್ಲಿ ಮನೆಗೆ ಹೊರಡಲು ಸಿದ್ದರಾಗಿದ್ದಾಗ ಬೈಕ್ ವೊಂದರಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅವರ ಮೇಲೆ ದಾಳಿ ಮಾಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಬದುಕಿ ಉಳಿಯಲಿಲ್ಲ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪ್ರವೀಣ್ ಅವರ ಅಂಗಡಿಯಲ್ಲಿ ಕೋಳಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಮಧು ಕುಮಾರ್ ರಾಯನ್ ಎಂಬವರು ದೂರು ನೀಡಿದ್ದರು.