ಪ್ರವೀಣ್ ಹತ್ಯೆ ಕೇಸ್, ಪೊಲೀಸ್ರಿಗೆ ಪ್ರಮುಖ ಆರೋಪಿ ಸುಳಿವು, ಆಸ್ತಿ ಮುಟ್ಟುಗೋಲಿಗೆ ಸಜ್ಜು
ರಾಜ್ಯಾದ್ಯಂತ ಭಾರೀ ಸುದ್ದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಅವರ ಆಸ್ತಿ ಮುಟ್ಟುಗೊಳಿಗೆ ಮುಂದಾಗಿದೆ.
ಮಂಗಳೂರು, (ಆಗಸ್ಟ್.10): ಬಿಜೆಪಿ ಯುವ ಮುಖಂಡ ಬೆಳ್ಳಾರೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಆಸ್ತಿ ಮುಟ್ಟುಗೋಲಿ ಮುಂದಾಗಿದೆ.
ಹೌದು.....ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳ ಆಸ್ತಿ ಮುಟ್ಟು ಹಾಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸ್ವತಃ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಕೇಸ್, ಮತ್ತೋರ್ವ ಆರೋಪಿ ಅರೆಸ್ಟ್
ಆರು ಜಿಲ್ಲೆಯ ಎಸ್ಪಿ ಹಾಗೂ ಎನ್‌ಐಎ ಅಧಿಕಾರಿಗಳೊಂದಿಗೆ ಸಭೆ ಮಾಡಲು ಇಂದು(ಬುಧವಾರ) ಮಂಗಳೂರಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್ ಕುಮಾರ್, ಬೆಳ್ಳಾರೆ ಪ್ರವೀಣ್ ಕೊಲೆ ಕೇಸ್ ನಲ್ಲಿ ಮುಖ್ಯ ಆರೋಪಿಗಳ ಬಂಧನ ಆಗಬೇಕಿದ್ದು, ಆರೋಪಿಗಳ ದಸ್ತಗಿರಿಗೆ ಬೇರೆ ಬೇರೆ ಜಿಲ್ಲೆಯ ಅಧಿಕಾರಿಗಳ ಸಭೆ ಮಾಡುತ್ತೇವೆ. ಪ್ರಮುಖ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಸಭೆ ಮಾಡಲಿದ್ದೇವೆ ಎಂದರು.
ಮುಖ್ಯ ಆರೋಪಿಗಳಿಗೆ ಪತ್ಯಕ್ಷ ಪರೋಕ್ಷವಾಗಿ ಸಹಕಾರ ಮಾಡಿದವರಿಗೂ ಕ್ರಮ ಆಗಲಿದೆ. ಎನ್ ಐ ಎ ಅಧಿಕಾರಿಗಳ ಜೊತೆ ಸೇರಿ ಕ್ರಮ ಜರುಗಿಸುತ್ತೇವೆ. ಕೋರ್ಟ್ ಮೂಲಕ ವಾರೆಂಟ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಎನ್ ಐ ಎ ಅಧಿಕಾರಿಗಳ ಜೊತೆ ಕರ್ನಾಟಕ ತಂಡ ಈ ಕೆಲಸ ಮಾಡಲಿದೆ. ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳ ಸಂಪೂರ್ಣ ಮಾಹಿತಿ ಇದೆ. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ಪ್ರಮುಖ ಆರೋಪಿ ಮಾಹಿತಿ ಲಭ್ಯ
ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳ ಸಂಪೂರ್ಣ ಮಾಹಿತಿ ಇದೆ. ಅವರ ಫೋಟೋ,ಮನೆ ವಿಳಾಸ,ತಂದೆ-ತಾಯಿ,ಹೆಂಡತಿ ಮಾಹಿತಿ ಎಲ್ಲವೂ ಲಭ್ಯವಿದೆ. ಪ್ರಮುಖ ಆರೋಪಿಗಳನ್ನು ಬಚ್ಚಿಡುವ ಕೆಲಸ ನಡೆಯುತ್ತಿದೆ. ಆವಾಗವಾಗ ಅವರ ಸ್ಥಳ ಬದಲಾವಣೆ ಮಾಡಲಾಗುತ್ತಿದೆ. ಪೊಲೀಸರ ದಾಳಿ ವೇಳೆ ಪ್ರಮುಖ ಆರೋಪಿಗಳು ಪರಾರಿಯಾಗುತ್ತಿದ್ದಾರೆ. ಎಂದು ಹೇಳಿದರು.
ಆರೋಪಿಗಳಿಗೆ ಪಿಎಫ್ಐ ಲಿಂಕ್ ವಿಚಾರ, ನಾವು ಯಾವುದೇ ದಾಖಲೆ ಇಲ್ಲದೇ ಮಾತನಾಡೋದಿಲ್ಲ. ದಾಖಲೆ ಜೊತೆಗೆ ಮಾತನಾಡುತ್ತೇವೆ. ಸುಮ್ಮನೆ ಏನನ್ನೂ ಹೇಳೋದಿಲ್ಲ. ಕೆಲವು ಆರೋಪಿಗಳಿಗೆ ಪಿಎಫ್ ಐ ಲಿಂಕ್ ಇದೆ. ಈ ಬಗ್ಗೆ ತನಿಖೆಯನ್ನು ಮಾಡುತ್ತಿದ್ದೇವೆ. ತನಿಖೆಯ ಬಳಿಕ ಯಾರಿಗೆಲ್ಲಾ ಪಿಎಫ್ಐ ಲಿಂಕ್ ಇದೆ ಎಂಬುವುದರ ಬಗ್ಗೆ ಹೇಳುತ್ತೇವೆ ಎಂದು ತಿಳಿಸಿದರು.
ಈಗಾಗಲೇ ಪ್ರಕರಣ ತನಿಖೆಯ ಹಂತದಲ್ಲಿದೆ. ಈ ಸಂದರ್ಭದಲ್ಲಿ ಪ್ರಕರಣಕ್ಕೆ ಕೇರಳ ಲಿಂಕ್ ಇರುವ ಬಗ್ಗೆ ಹೇಳಲು ಸಾಧ್ಯವಿಲ್ಲ. ಈಗ ಬಂಧನವಾಗಿರುವ ಏಳು ಮಂದಿಯೂ ಸ್ಥಳೀಯರೇ ಆಗಿದ್ದಾರೆ. ಅವರಿಗೆ ನಿರ್ದೇಶನ ಕೊಟ್ಟಿರೋದು ಯಾರು ಎಂಬುವುದರ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡುತ್ತೇವೆ. ಬೆಳ್ಳಾರೆಯಲ್ಲಿ ಈ ಎಲ್ಲಾ ವಿಚಾರದ ಬಗ್ಗೆ ಸಭೆಯನ್ನು ಮಾಡುತ್ತೇವೆ. ಎನ್ ಐ ಎ ಅಧಿಕಾರಿಗಳು,ಮಂಡ್ಯ, ಚಾಮರಾಜನಗರ ಹಾಸನ, ಚಿಕ್ಕಮಗಳೂರು, ಉಡುಪಿ,ದಕ್ಷಿಣ ಕನ್ನಡ ಎಸ್ಪಿಗಳ ಜೊತೆ ಸಭೆ ಮಾಡುತ್ತೇವೆ ಎಂದರು.
ಪ್ರಕರಣ
ಪ್ರವೀಣ್ ನೆಟ್ಟಾರ್ ಅವರು ಬೆಳ್ಳಾರೆಯಲ್ಲಿ ಅಕ್ಷಯ ಪ್ರೆಶ್ ಚಿಕನ್ ಫಾರ್ಮ್ ಎಂಬ ಕೋಳಿ ಅಂಗಡಿಯನ್ನು ನಡೆಸುತ್ತಿದ್ದರು. ಜು 26 ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಪ್ರವೀಣ್ ತನ್ನ ಬೈಕ್ ನಲ್ಲಿ ಮನೆಗೆ ಹೊರಡಲು ಸಿದ್ದರಾಗಿದ್ದಾಗ ಬೈಕ್ ವೊಂದರಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅವರ ಮೇಲೆ ದಾಳಿ ಮಾಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಬದುಕಿ ಉಳಿಯಲಿಲ್ಲ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪ್ರವೀಣ್ ಅವರ ಅಂಗಡಿಯಲ್ಲಿ ಕೋಳಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಮಧು ಕುಮಾರ್ ರಾಯನ್ ಎಂಬವರು ದೂರು ನೀಡಿದ್ದರು.