Asianet Suvarna News Asianet Suvarna News

ನಾಡಹಬ್ಬ ದಸರಾ ಜೀವಂತ ಮಹಾಕಾವ್ಯ: ನಾದ ಬ್ರಹ್ಮ ಹಂಸಲೇಖ ಮಾತು

ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ, ವಿಶ್ವಪ್ರಸಿದ್ಧ ಮೈಸೂರು ದಸರಾ ಹಬ್ಬಕ್ಕೆ ಸಂಗೀತ ನಿರ್ದೇಶಕ ನಾದ ಬ್ರಹ್ಮ ಹಂಸಲೇಖ ಚಾಲನೆ ನೀಡಿದರು. 

Music director hamsalekha inauguration mysuru dasara today rav
Author
First Published Oct 15, 2023, 11:52 AM IST

ಮೈಸೂರು (ಅ.15): ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ, ವಿಶ್ವಪ್ರಸಿದ್ಧ ಮೈಸೂರು ದಸರಾ ಹಬ್ಬಕ್ಕೆ ಸಂಗೀತ ನಿರ್ದೇಶಕ ನಾದ ಬ್ರಹ್ಮ ಹಂಸಲೇಖ ಚಾಲನೆ ನೀಡಿದರು. 

ದಸರಾ ಉದ್ಘಾಟಕ ನಾದಬ್ರಹ್ಮ  ಹಂಸಲೇಖ ಅವರಿಗೆ ವೀಣಾಧಾರಿಯಾದ ಸರಸ್ವತಿಯ ಗಂಧದ ವಿಗ್ರಹ ನೀಡಿ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ, ಸಚಿವ ಎಚ್‌ಸಿ ಮಹದೇವಪ್ಪ, ಕೆಜೆ ಜಾರ್ಜ್, ಸಂಸದ ಪ್ರತಾಪ ಸಿಂಹ, ಶಾಸಕ ಶ್ರೀವತ್ಸ ಇತರರು ಉಪಸ್ಥಿತರಿದ್ದರು.

ದಸರಾ ಅಂಗವಾಗಿ ಯದುವೀರ್ ದರ್ಬಾರ್: ಪ್ರವಾಸಿಗರ ಅರಮನೆ ಪ್ರವೇಶ ನಿರ್ಬಂಧ

ಯಾರನ್ನ ನೆನೆಯಲಿ ಎಂದ ಹಂಸಲೇಖ

ನಾಡಹಬ್ಬ ದಸರಾಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಹಂಸಲೇಖ. ಮೈಸೂರು ದಸರಾಗೆ ಚಾಲನೆ ನೀಡುವ ಅವಕಾಶ ಸಿಕ್ಕಿದ್ದಕ್ಕೆ ಮೊದಲು ಯಾರನ್ನು ನೆನೆಯಲಿ? ಅಪ್ಪ ಗೋವಿಂದರಾಜ ಮಾನೆ, ಅಮ್ಮ ರಾಜಮ್ಮ, ಗುರು ನೀಲಕಂಠ ಅಥವಾ ನಾದ, ನಾಟಕರಂಗ, ಸರ್ಕಾರ ಅಥವಾ ಸಂವಿಧಾನವನ್ನೇ. ಸಂವಿಧಾನದ ದನಿ ಸಿದ್ದರಾಮಯ್ಯ ಅವರನ್ನೇ ? ಡಿಸಿಎಂ ಪ್ರಬಲ ಶಕ್ತಿ ಸಂಘಟಕ ಡಿ ಕೆ ಶಿವಕುಮಾರ್. ನನ್ನ ಹೆಸರು ಸೂಚಿಸಿದ ಡಾ ಎಚ್ ಸಿ ಮಹದೇವಪ್ಪ ಅವರನ್ನೇ. ನನ್ನ ಹೆಂಡತಿ ಮಕ್ಕಳು ಅಭಿಮಾನಿಗಳನ್ನೇ? ಅಥವಾ ಭೂಮಿ ತಾಯಿಯನ್ನೇ ಯಾರು ಯಾರು ಅಂತಾ ಹೇಳಿ ಎಂದು ತಮ್ಮದೇ ಮಾತಿನ ಶೈಲಿಯಲ್ಲಿ ಮಾತು ಪ್ರಾರಂಭಿಸಿದರು.

ನಾವು ಸಿನಿಮಾದವರು, ಕೊಂಕಣ ಸುತ್ತಿರ ಮೈಲಾರಕ್ಕೆ ಬಂದು ಮಾತನಾಡುತ್ತೇವೆ. ಅವಕಾಶ ನೀಡಿದ್ದಕ್ಕೆ  ಒಂದು ಥ್ಯಾಂಕ್ಸ್ ಹೇಳಿ ಮುಗಿಸಬಹುದಿತ್ತು. ಆದರೆ ಎಲ್ಲರನ್ನೂ ನೆನೆಯುವ ನಿಟ್ಟಿನಲ್ಲಿ‌ ಹೀಗೆ ಮಾತನಾಡಿದೆ. ಡಿಸಿಎಂ ಡಿಕೆ.ಶಿವಕುಮಾರ್ ಸಾಮಾನ್ಯ ವ್ಯಕ್ತಿಯಿಂದ ದಸರಾ ಉದ್ಘಾಟನೆ ಆಗಬೇಕು ಎಂದಿದ್ದರು. ಅದಕ್ಕಾಗಿ ಸಿಎಂ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರು.

ದಸರಾ ಜೀವಂತ ಮಹಾಕಾವ್ಯ:

ಕನ್ನಡಿಗರ ಆಶಯದಂತೆ ನಾನೀಗ ಕನ್ನಡ ದೀಪ ಹಚ್ಚಿದ್ದೇನೆ. ದಸರಾ ಎನ್ನುವುದು ಜೀವಂತ ಮಹಾಕಾವ್ಯ. ದಕ್ಷಿಣ ಭಾರತದ ವೀರರ ಕಥೆಯೆ ಈ ಮಹಾಕಾವ್ಯ. ವಿಜಯನಗರದ ಮಹಾ ಸಾಮ್ರಾಜ್ಯ ಆರಂಭಿಸಿದ ಮಹಾಕಾವ್ಯವಿದು. ದಸರಾ ಒಂದು ರೀತಿ ಕಥಾ ಕಣಜ. ಇದು ಮಹಾಕಾವ್ಯವಾಗಿ ಬೆಳಗಬೇಕು. ಕನ್ನಡ ನಮ್ಮ ಶೃತಿ ಆಗಬೇಕು. ಅಭಿವೃದ್ಧಿ ನಮ್ಮ ಕೃತಿ ಆಗಬೇಕು. ಕನ್ನಡದ ಭಾಷೆಗೆ ಮಿತಿ ಇದೆ. ಆದರೆ ಭಾವಕ್ಕೆ ಮಿತಿ ಎಲ್ಲಿದೆ. ನಮಗೆ ದೆಹಲಿ ಬೇಕು ದೆಹಲಿಗೂ ನಾವು ಬೇಕು. ಆದರೆ ದೆಹಲಿಗೆ ಕನ್ನಡವೇ ಬೇಕಾಗುತ್ತಿಲ್ಲ. ಇದಕ್ಕೆ ತಲೆ ಕೆಡಿಸಿಕೊಳ್ಳೋದು ಬೇಡ. ನಾವು ಕನ್ನಡವನ್ನು ಜಗತ್ತಿನಲ್ಲಿ ಮೆರೆಸಬೇಕಿದೆ. ಕರ್ನಾಟಕದ ಶಾಂತಿ ಸಮೃದ್ಧಿ ಕನ್ನಡಿಗರ ಮಂತ್ರ ಆಗಬೇಕು ಎಂದರು.

ದಸರಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ವಂಚನೆ

ಕನ್ನಡ ಓದಲು, ಬರೆಯಲು ಬಾರದವರ ಸಮೀಕ್ಷೆ ಆಗಬೇಕು:

 ಕರ್ನಾಟಕದಲ್ಲಿ ವಾಸ ಮಾಡುವವರೆಲ್ಲಾ ಕನ್ನಡಿಗರು ಇವರಲ್ಲಿ ಯಾರಿಗೆ ಕನ್ನಡ ಮಾತಾಡಲು ಬರಲ್ಲ. ಯಾರಿಗೆ ಅರ್ಥವಾಗಲ್ಲ ಈ ಬಗ್ಗೆ  ಒಂದು ಸಮೀಕ್ಷೆ ಆಗಬೇಕು. ಕಾರ್ಪೊರೇಟ್ ಕನ್ನಡಿಗರ ತಂಡ ನನಗೆ ಸಲಹೆ ನೀಡಿದೆ. ಕನ್ನಡ ಅರ್ಥ ಆಗುತ್ತೆ, ಆದರೆ ಓದಲು- ಬರೆಯಲು ಬರಲ್ಲ ಎನ್ನುವವರ ಸಮೀಕ್ಷೆ ಆಗಬೇಕು. ಕನ್ನಡ ಗೊತ್ತಿಲ್ಲದವರಿಗೆ 30 ದಿನಗಳಲ್ಲಿ ಭಾಷೆ ಕಲಿಸಬೇಕು.  ಕನ್ನಡ ಕಲಿತವರಿಗೆ ಜಮೀನು ಆರ್‌ಟಿಸಿ ಮಾದರಿಯಲ್ಲಿ ಕನ್ನಡ ಪಟ್ಟ ಕೊಡಬೇಕು. ಅದು ಬಿಪಿಎಲ್, ಎಪಿಎಲ್ ಮಾದರಿಯ ದಾಖಲೆ ಆಗಬೇಕು. ಮತ್ತೊಂದು ಸಲಹೆ ಪ್ರತಿಭೆ, ಉದ್ಯಮ ವಿನಿಮಯ ಆಗಬೇಕು. ಹುಬ್ಬಳ್ಳಿ- ಬೆಳಗಾವಿ ಪ್ರತಿಭೆ ಉದ್ಯಮಗಳು ಬೆರೆಯುತ್ತಿವೆ.  ಮಂಗಳೂರು- ಮೈಸೂರು ನಡುವೆ ಸಾಂಸ್ಕೃತಿಕ ವಿನಿಮಯ ಆಗಬೇಕು. ರಫ್ತುದಾರರು ಪಕ್ಕದ ರಾಜ್ಯಗಳ ಮೇಲೆ ಅವಲಂಬನೆ ಆಗದೆ.  29 ಜಿಲ್ಲೆಗಳನ್ನು ಜೋಡಿಸಿ ಪ್ರತಿಭೆ, ಉದ್ಯಮ ಹಂಚಿಕೊಳ್ಳಬೇಕು.  ಕೃಷಿಕ- ಕಾರ್ಪೋರೇಟ್ ವಿನಿಮಯ ಆಗಬೇಕು ಎಂದರು.

ಕರ್ನಾಟಕ ಏಕೀಕರಣಕ್ಕೆ ಈಗ ಐದಶ:

ಕರ್ನಾಟಕದ ಏಕೀಕರಣಕ್ಕೆ ಈಗ ಐದಶವಾಗಿದೆ. ಐದಶ ಎಂದರೆ ಐವತ್ತು ವರ್ಷ. ಕರ್ನಾಟಕ ಐದಶ ಅಂತಾ ಕರೆಯೋಣ. ಏಕೀಕರಣಕ್ಕೆ ಐವತ್ತು ವರ್ಷ ತುಂಬಿದೆ. ಕರ್ನಾಟಕದ ಐದಶದ ಜೊತೆಗೆ ನನ್ನ ಕಲಾ ಕಾಯಕಲ್ಪಕ್ಕೂ 50 ವರ್ಷ ತುಂಬಿದೆ. ಈ ನನ್ನ ಐದಶದಲ್ಲಿ ಸಿಕ್ಕಿದ ಈ ಅವಕಾಶ ಇದು ಬಹಳ ಬೆಲೆ ಬಾಳುವಂತಹದ್ದು.
ಈ ಅವಕಾಶ ನಿರಾಯಾಸವಾಗಿ ಬಂದಿಲ್ಲ. ಇದಕ್ಕಾಗಿ ಸಾವಿರ ಮೆಟ್ಟಿಲು ಹತ್ತಿ ಬಂದಿದ್ದೇನೆ. ಈ ಅವಕಾಶಕ್ಕೆ ಸಿಕ್ಕಿದ್ದಕ್ಕೆ ಯಾರನ್ನು ನೆನೆಯಬೇಕು?  ಕನ್ನಡ ದೀಪ, ಸಮೃದ್ದಿ, ಅಭಿವೃದ್ಧಿ, ಶಾಂತಿ, ಸಮೃದ್ದಿಯ ನನ್ನ ಮಾತಿನ ಪರಿವಿಧಿ. ಪೂಜ್ಯ ಕನ್ನಡಿಗರಿಗೆ ಪೂಜ್ಯ ಕನ್ನಡಕ್ಕೆ ಈ ದೇವಾಲಯ ಪ್ರೇಮಾಲಯಕ್ಕೆ ಸಾವಿರದ ಶರಣುಗಳು ಎಂದರು.

 

Follow Us:
Download App:
  • android
  • ios