Asianet Suvarna News Asianet Suvarna News

ದಸರಾ ಅಂಗವಾಗಿ ಯದುವೀರ್ ದರ್ಬಾರ್: ಪ್ರವಾಸಿಗರ ಅರಮನೆ ಪ್ರವೇಶ ನಿರ್ಬಂಧ

ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯಲ್ಲಿ ಸಂಪ್ರದಾಯದಂತೆ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಲಿದ್ದು, ಇದಕ್ಕಾಗಿ ರತ್ನಖಚಿತ ಸಿಂಹಾಸನವನ್ನು ಜೋಡಣೆ ಕಾರ್ಯವು ಅ.9 ರಂದು ಸಂಪ್ರದಾಯದಂತೆ ಜರುಗಲಿದೆ.

gemmy throne preparation in mysuru palace for private darbar gvd
Author
First Published Oct 9, 2023, 10:08 AM IST

ಮೈಸೂರು (ಅ.09): ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯಲ್ಲಿ ಸಂಪ್ರದಾಯದಂತೆ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಲಿದ್ದು, ಇದಕ್ಕಾಗಿ ರತ್ನಖಚಿತ ಸಿಂಹಾಸನವನ್ನು ಜೋಡಣೆ ಕಾರ್ಯವು ಅ.9 ರಂದು ಸಂಪ್ರದಾಯದಂತೆ ಜರುಗಲಿದೆ. ಮೊದಲು ಸಿಂಹಾಸನದ ಬಿಡಿ ಭಾಗಗಳನ್ನು ಖಜಾನೆಯಿಂದ ಹೊರ ತೆಗೆದು ಪೂಜೆ ಸಲ್ಲಿಸಿ, ನಂತರ ಅಧಿಕಾರಿಗಳ ಸಮ್ಮುಖದಲ್ಲಿ ಪೊಲೀಸರ ಬಿಗಿ ಭದ್ರತೆಯಲ್ಲಿ ಮರದ ಕಾಲಾವಧಿ ಕಟ್ಟಿ ಅದರ ಆಧಾರದ ಮೇಲೆ ನಿಂತು ಸಿಂಹಾಸನವನ್ನು ಖಾಸಗಿ ದರ್ಬಾರ್ ಹಾಲ್‌ ನಲ್ಲಿ ಜೋಡಿಸಲಾಗುತ್ತದೆ.

ಸಂಪ್ರದಾಯದಂತೆ ಮೈಸೂರು ತಾಲೂಕಿನ ಗೆಜ್ಜಗಳ್ಳಿ ಗ್ರಾಮದ ವೀರಶೈವರು ಮಡಿ ಬಟ್ಟೆ ತೊಟ್ಟು ದೇವರಿಗೆ ಕೈಮುಗಿದು, ಸಿಂಹಾಸನದ 6 ಭಾಗಗಳನ್ನು ತಂದು ಅಂಬಾವಿಲಾಸ ರತ್ನಗಂಬಳಿಯ ಮೇಲೆ 15 ಅಡಿ ಅಗಲ ಮತ್ತು ಉದ್ದವಿರುವ ಜಾಗದಲ್ಲಿ ಕೂರ್ಮಾವತಾರ ಆಸನವನ್ನು ಜೋಡಿಸಿ, ಕಾಲುಗಳನ್ನು ಅಳವಡಿಸುವರು. ನಂತರ ಪುರೋಹಿತರು ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಬಿಳಿ ಬಟ್ಟೆಯಿಂದ ಮುಚ್ಚುತ್ತಾರೆ. ಈ ವೇಳೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರ ಖುದ್ದು ಮಾರ್ಗದರ್ಶನದಲ್ಲಿ ಸಿಂಹಾಸನದ ಜೋಡಣೆ ಕಾರ್ಯವು ನಡೆಯುತ್ತದೆ.

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಕ್ಷಣಗಣನೆ: ಅರಮನೆಯಲ್ಲಿ ಯಾವ ದಿನ ಏನೇನು ಕಾರ್ಯಕ್ರಮ ಗೊತ್ತಾ?

ಯದುವೀರ ಖಾಸಗಿ ದರ್ಬಾರ್: ಅ.15 ರಿಂದ 24 ರವರೆಗೆ ದಸರಾ ಮಹೋತ್ಸವ ವೇಳೆ ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನಖಚಿತ ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸಲಿದ್ದಾರೆ. ದಸರೆ ಮುಗಿದ ನಂತರ ಸಂಪ್ರದಾಯದಂತೆ ಗೆಜ್ಜಗಳ್ಳಿ ವೀರಶೈವರೇ ಈ ಸಿಂಹಾಸನವನ್ನು ಬಿಡಿಭಾಗಗಳನ್ನು ನ.8 ರಂದು ವಿಸರ್ಜಿಸಿ, ಮೂಲ ಸ್ಥಾನಕ್ಕೆ ತೆಗೆದುಕೊಂಡು ಹೋಗಿ ಇರಿಸುತ್ತಾರೆ. ಸಿಂಹಾಸನ ಇರಿಸಲಾಗಿರುವ ಖಾಸಗಿ ದರ್ಬಾರ್ ಹಾಲ್‌ ನಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಸಹ ಅಳವಡಿಸಲಾಗುತ್ತದೆ.

ಸಿಂಹಾಸನ ಜೋಡನೆ ಹೇಗೆ: ರತ್ನಖಚಿತ ಸಿಂಹಾಸನವನ್ನು 8 ಬೆಳ್ಳಿಯ ಭದ್ರಾಸನವನ್ನು, 6 ಬಿಡಿಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಸಿಂಹಾಸನದ ಬಿಡಿಭಾಗ, ಭದ್ರಾಸನ ಜೋಡಿಸಿದ ಬಳಿಕ ಸಿಂಹಾಸನಕ್ಕೆ ಉಮಾಪಕ್ಷಿ, ಮುತ್ತಿನ ಜಾಲರಿ, ಮಕರ ತೋರಣ, 25 ಜೊತೆ ನಗಗಳು, 1 ಜೊತೆ ಚಿನ್ನದ ಕುದುರೆ, ತುರಾಯಿ ಜೋಡಿ, 1 ಜೊತೆ ಚಿನ್ನದ ಕಳಶ ಜೋಡಿಸಿ ಅಲಂಕರಿಸಲಾಗುತ್ತದೆ. ಇದರ ಬಿಡಿ ಭಾಗಗಳನ್ನು ಜೋಡಿಸಿ ಅದಕ್ಕೆ ಸಿಂಹದ ಮುಖವನ್ನು ಅಳವಡಿಸಿದಾಗ ಸಿಂಹಾಸನ ಜೋಡಣೆ ಕಾರ್ಯವು ಪೂರ್ಣಗೊಳ್ಳುತ್ತದೆ.

ಅರಮನೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧ: ಮೈಸೂರು ರಾಜವಂಶಸ್ಥರು ಮೈಸೂರು ಅರಮನೆಯಲ್ಲಿ ದಸರಾ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸುವುದರಿಂದ ಈ ಕೆಳಕಂಡ ದಿನಾಂಕಗಳಂದು ಅರಮನೆ ಒಳಾವರಣವನ್ನು ವೀಕ್ಷಣೆ ಮಾಡುವ ಪ್ರವಾಸಿಗರಿಗೆ ಮೈಸೂರು ಅರಮನೆ ಮಂಡಳಿ ನಿರ್ಬಂಧ ವಿಧಿಸಿದೆ.  ಸಿಂಹಾಸನ ಜೋಡಣೆ ಪ್ರಯುಕ್ತ ಅ.9ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. 

ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇವೇಗೌಡ ದಂಪತಿ ಭೇಟಿ: ವಿಶೇಷ ಪೂಜೆ ಸಲ್ಲಿಕೆ!

ಖಾಸಗಿ ದರ್ಬಾರ್‌ ನಲ್ಲಿ ರಾಜವಂಶಸ್ಥರ ಪೂಜಾ ಕೈಂಕರ್ಯದ ಪ್ರಯುಕ್ತ ಅ.15ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಪ್ರವೇಶ ಇರುವುದಿಲ್ಲ. ಆಯುಧ ಪೂಜೆ ಪ್ರಯುಕ್ತ ಅ.23ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ, ವಿಜಯದಶಮಿಯ ಪ್ರಯುಕ್ತ ಅ.24 ರಂದು ಸಂಪೂರ್ಣ ದಿನ ಪ್ರವೇಶ ಇರುವುದಿಲ್ಲ. ಸಿಂಹಾಸನ ವಿಸರ್ಜನೆ ಪ್ರಯುಕ್ತ ನ.8ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಅರಮನೆಗೆ ಪ್ರವೇಶ ಇರಿವುದಿಲ್ಲ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ತಿಳಿಸಿದ್ದಾರೆ.

Follow Us:
Download App:
  • android
  • ios