ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ, ಮಾಜಿ ಮುಡಾ ಆಯುಕ್ತ ದಿನೇಶ್ ಕುಮಾರ್ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 24 ಗಂಟೆಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿದೆ. ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಕೋರಿದ್ದು, ಡಿ.18 ರಂದು ಅಂತಿಮ ತನಿಖಾ ವರದಿ ಸಲ್ಲಿಕೆಯಾಗಲಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಬಹುಚರ್ಚಿತ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಡಾ ಆಯುಕ್ತ ದಿನೇಶ್ ಕುಮಾರ್ ಅವರನ್ನು 24 ಗಂಟೆಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಈ ಹಿಂದೆ ಜೈಲಿನಲ್ಲಿಯೇ ದಿನೇಶ್ ಕುಮಾರ್ ಅವರನ್ನು ವಿಚಾರಣೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಹೆಚ್ಚಿನ ದಾಖಲೆಗಳ ಆಧಾರದ ಮೇಲೆ ಇನ್ನಷ್ಟು ವಿಚಾರಣೆ ಅಗತ್ಯವಿದೆ ಎಂದು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಇದರ ಹಿನ್ನೆಲೆ, ಒಂದು ದಿನದ ಪೊಲೀಸ್ ಕಸ್ಟಡಿಗೆ ನೀಡುವಂತೆ ಲೋಕಾಯುಕ್ತ ಪೊಲೀಸರ ಬೇಡಿಕೆಯನ್ನು ಕೋರ್ಟ್ ಅಂಗೀಕರಿಸಿದೆ.
ಕೋರ್ಟ್‌ನಲ್ಲಿಯೇ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು
ಮಂಗಳವಾರ ಜೈಲು ಸಿಬ್ಬಂದಿ ದಿನೇಶ್ ಕುಮಾರ್ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಿದ್ದರು. ಕೋರ್ಟ್ ಆದೇಶ ಹೊರಬಂದ ಕೂಡಲೇ, ಲೋಕಾಯುಕ್ತ ಪೊಲೀಸರು ಕೋರ್ಟ್ ಆವರಣದಲ್ಲಿಯೇ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಲೋಕಾಯುಕ್ತ ಎಸ್‌ಪಿ ಉದೇಶ್ ನೇತೃತ್ವದಲ್ಲಿ ತನಿಖೆ
ಲೋಕಾಯುಕ್ತ ಎಸ್‌ಪಿ ಉದೇಶ್ ಅವರ ನೇತೃತ್ವದಲ್ಲಿ ವಿಶೇಷ ತಂಡ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ. ಹೀಗಾಗಿ ಕೋರ್ಟ್ ಒಪ್ಪಿಗೆ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಿನೇಶ್ ಕುಮಾರ್ ಅವರನ್ನು ವಿಚಾರಣೆಗಾಗಿ ಲೋಕಾಯುಕ್ತ ಕಚೇರಿಗೆ ಕರೆತಂದಿದ್ದಾರೆ.
ಈ ಹಿಂದೆ ಆರೋಪ ನಿರಾಕರಿಸಿದ್ದ ದಿನೇಶ್ ಕುಮಾರ್
ಡಿಸೆಂಬರ್ 12ರಂದು ಜೈಲಿನಲ್ಲಿಯೇ ನಡೆದ ವಿಚಾರಣೆ ವೇಳೆ, ದಿನೇಶ್ ಕುಮಾರ್ ಅವರು ತಮ್ಮ ಮೇಲಿನ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು. ಆದರೆ, ಕೆಲ ಮಹತ್ವದ ದಾಖಲೆಗಳನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಆಳವಾದ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಡಿ.18ಕ್ಕೆ ಮುಡಾ ಕೇಸ್ ಅಂತಿಮ ತನಿಖಾ ವರದಿ
ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತನಿಖಾ ವರದಿಯನ್ನು ಡಿಸೆಂಬರ್ 18ರಂದು ಕೋರ್ಟ್‌ಗೆ ಸಲ್ಲಿಸುವುದಾಗಿ ಲೋಕಾಯುಕ್ತ ಮೂಲಗಳು ಮಾಹಿತಿ ನೀಡಿವೆ. ಈ ಹಿಂದೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ಅಂತಿಮ ವರದಿ ಸಲ್ಲಿಸಲು ಗಡುವು ನೀಡಿದೆ. ಈ ಪ್ರಕರಣದಲ್ಲಿ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಾರ್ವತಿ ಸಿದ್ದರಾಮಯ್ಯ , ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜ್ ವಿರುದ್ಧ ಬಿ-ರಿಪೋರ್ಟ್ ಸಲ್ಲಿಸಲಾಗಿತ್ತು. ಆದರೆ ಹಗರಣದಲ್ಲಿ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ಮುಂದುವರಿಸಲಾಗಿತ್ತು.
ಫೈನಲ್ ರಿಪೋರ್ಟ್ ಸಲ್ಲಿಕೆಗೆ ಸಿದ್ಧತೆ
ಅಧಿಕಾರಿಗಳ ಪಾತ್ರದ ಕುರಿತು ಅಗತ್ಯ ದಾಖಲೆಗಳು, ಹೇಳಿಕೆಗಳು ಮತ್ತು ಪುರಾವೆಗಳನ್ನು ಸಂಗ್ರಹಿಸಿದ ಬಳಿಕ, ಇದೀಗ ಲೋಕಾಯುಕ್ತ ಪೊಲೀಸರು ಪ್ರಕರಣದ ಫೈನಲ್ ರಿಪೋರ್ಟ್ ಅನ್ನು ಕೋರ್ಟ್‌ಗೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಇಂದು ದಿನೇಶ್ ಕುಮಾರ್ ವಿಚಾರಣೆ ನಡೆಸಿ, ಗುರುವಾರ ಅಂತಿಮ ವರದಿ ಸಲ್ಲಿಸುವ ನಿಟ್ಟಿನಲ್ಲಿ ತನಿಖೆ ಅಂತಿಮ ಹಂತಕ್ಕೆ ತಲುಪಿದೆ.


