ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ, ಅಂತಿಮ ವರದಿ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಹೆಚ್ಚಿನ ಸಮಯ ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ಡಿಸೆಂಬರ್ 18ರೊಳಗೆ ವರದಿ ಸಲ್ಲಿಸಲು ಖಡಕ್ ಗಡುವು ನೀಡಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧದ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ ಸಂಬಂಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಖಾಸಗಿ ದೂರು ಅರ್ಜಿ ಹಿನ್ನೆಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮಂಗಳವಾರ ಮಹತ್ವದ ವಿಚಾರಣೆ ನಡೆಯಿತು. ಈ ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಸಲು ಪ್ರಾಸಿಕ್ಯೂಷನ್ ಮತ್ತೆ ಸಮಯ ಕೋರಿ ನ್ಯಾಯಾಲಯದ ಮುಂದೆ ಮನವಿ ಮಾಡಿತ್ತು. ಆದರೆ, ನ್ಯಾಯಾಲಯ ಪ್ರಾಸಿಕ್ಯೂಷನ್‌ಗೆ ಮತ್ತಷ್ಟು ಸಮಯ ನೀಡುವುದಕ್ಕೆ ನಿರಾಕರಿಸಿ, ವಿಚಾರಣೆಗೆ ಹೊಸ ಗಡುವುಗಳನ್ನು ಸೂಚಿಸಿದೆ.
SPP ಗೈರು
ವಿಚಾರಣೆ ವೇಳೆ ವಿಶೇಷ ಸಾರ್ವಜನಿಕ ಅಭಿಯೋಜಕ (SPP) ವೆಂಕಟೇಶ್ ಅರಬಟ್ಟಿ ಅವರ ಜ್ಯೂನಿಯರ್ ವಕೀಲರು ಹಾಜರಾಗಿ, ಅಂತಿಮ ವರದಿ ಸಲ್ಲಿಸಲು ಸಮಯ ಬೇಕೆಂದು ಮನವಿ ಮಾಡಿದರು. ಇದಕ್ಕೆ ಖಡಕ್ ಆಗಿ ಉತ್ತರಿಸಿದ ಜಡ್ಜ್ ಇನ್ನೂ ಸಮಯ ನೀಡಲು ಸಾಧ್ಯವಿಲ್ಲ. ನೀವು ಅಂತಿಮ ವರದಿ ಹಾಕ್ತೀರಾ ಇಲ್ಲವೋ ? ಎಂದರು. ವಿಚಾರಣೆ ಸಮಯದಲ್ಲಿ ಎಸ್ಪಿಪಿ ವೆಂಕಟೇಶ್ ಅರಬಟ್ಟಿ ಗೈರು ಹಾಜರಾಗಿದ್ದನ್ನು ಕೋರ್ಟ್ ಗಮನಿಸಿ, ಅವರ ಹಾಜರಿಗೆ ಸೂಚಿಸಿ ಕೆಲ ಕಾಲ ವಿಚಾರಣೆ ಮುಂದೂಡಿತು.
ಮತ್ತೆ ವಿಚಾರಣೆ ಆರಂಭವಾದಾಗ ಡಿ.8ರ ಒಳಗೆ ಅಂತಿಮ ವರದಿ ಸಲ್ಲಿಸುವುದಾಗಿ ಹೇಳಿದ ಎಸ್ಪಿಪಿ ಕೋರ್ಟ್ ಗೆ ತಿಳಿಸಿದರು. ಆದರೆ ನ್ಯಾಯಾಲಯವು ಡಿಸೆಂಬರ್ 18ರೊಳಗೆ ಅಂತಿಮ ವರದಿ ನಿಸ್ಸಂದೇಹವಾಗಿ ಸಲ್ಲಿಸಬೇಕೆಂದು ಸೂಚಿಸಿದೆ. ಬಿ.ರಿಪೋರ್ಟ್ ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡುವುದಿದ್ದರೇ ಡಿ. 16ರ ಒಳಗೆ ಸಲ್ಲಿಸುವುವಂತೆ ದೂರುದಾರರು, ಲೋಕಾಯುಕ್ತ ಹಾಗೂ ಇಡಿಗೆ ಸೂಚನೆ ನೀಡಿದೆ.
2 ತಿಂಗಳು ಗಡುವು ನೀಡಿದ್ದ ಕೋರ್ಟ್
ಬಿ.ರಿಪೋರ್ಟ್ ಸಲ್ಲಿಸಲು ಅಕ್ಟೋಬರ್ 8 ರಿಂದ 2 ತಿಂಗಳು ಗಡುವು ನೀಡಿದ್ದ ಕೋರ್ಟ್, ಹೀಗಾಗಿ ಮತ್ತೆ ಸಮಯ ನೀಡಲು ನಿರಾಕರಿಸಿದ ಕೋರ್ಟ್. ಒಂದು ವೇಳೆ ಅಂತಿಮ ವರದಿ ಸಲ್ಲಿಸಿದ್ದರೆ ಬಿ.ರಿಪೋರ್ಟ್ ಪ್ರಶ್ನಿಸಿದ ಅರ್ಜಿ ಮೇಲೇ ಆದೇಶ ಮಾಡಲಾಗುವುದು ಎಂದು ಎಚ್ಚರಿಸಿದ ಕೋರ್ಟ್. ಈ ವೇಳೆ ಡಿ.8 ಒಳಗೆ ಅಂತಿಮ ವರದಿ ನೀಡುವುದಾಗಿ ತಿಳಿಸಿದ ಎಸ್ಪಿಪಿ. ಬಳಿಕ ಡಿ. 18ರ ಒಳಗೆ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿದ ಕೋರ್ಟ್
ಇನ್ನು ಈ ಪ್ರಕರಣದಲ್ಲಿ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ನೀಡಿದ್ದ ಪೂರ್ವಾನುಮತಿ ಪುರಸ್ಕರಿಸಿ ಹೈಕೋರ್ಟ್ ಏಕಸದಸ್ಯ ಪೀಠ ಹೊರಡಿಸಿದ ತೀರ್ಪು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನು ವಿಭಾಗೀಯ ಪೀಠ ಮುಂದಿನ ವರ್ಷ ಜ.8ಕ್ಕೆ ವಿಚಾರಣೆಗೆ ಬರಲಿದೆ.


