ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್ ಅವರ ಫೋಟೋ ಮತ್ತು ಆಡಿಯೋ ಎಡಿಟ್ ಮಾಡಿ ಅಪಪ್ರಚಾರ ನಡೆಸಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ವಶಕ್ಕೆ. ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ, ಮಹತ್ವದ ಡಿಜಿಟಲ್ ಪುರಾವೆಗಳನ್ನು ಜಪ್ತಿ ಮಾಡೀದ್ದಾರೆ.

ಮೈಸೂರು (ಫೆ.21): ಮುಡಾ ಮಾಜಿ ಆಯುಕ್ತ ಹಾಗೂ ಹಿರಿಯ ಕೆಎಎಸ್ ಅಧಿಕಾರಿ ಡಿಬಿ ನಟೇಶ್ ಅವರ ಫೋಟೋ ಮತ್ತು ಆಡಿಯೋ ತುಣುಕು ಎಡಿಟ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಸಿಸಿಬಿ ಪೊಲೀಸರ ತಂಡವು ಸ್ನೇಹಮಯಿ ಕೃಷ್ಣ ಅವರಿಗೆ ಸಂಬಂಧಿಸಿದ ಎರಡು ಮನೆ ಹಾಗೂ ಒಂದು ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ತಪಾಸಣೆ ನಡೆಸಿದೆ.

ನಾಲ್ಕು ಗಂಟೆಗಳ ಕಾಲ ತಲಾಷ್; ಮಹತ್ವದ ದಾಖಲೆ ಜಪ್ತಿ

ಶುಕ್ರವಾರ ಮಧ್ಯಾಹ್ನ 2:30ಕ್ಕೆ ಆರಂಭವಾದ ಈ ತಲಾಷ್ ಸಂಜೆ 6:30ರ ವರೆಗೆ ಸತತ ನಾಲ್ಕು ಗಂಟೆಗಳ ಕಾಲ ಮುಂದುವರಿಯಿತು. ಅಧಿಕಾರಿಗಳು ಪ್ರತಿಯೊಂದು ಮೂಲೆಯನ್ನು ಜಾಲಾಡಿದ್ದು, ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಸ್ನೇಹಮಯಿ ಕೃಷ್ಣ ಸಿಸಿಬಿ ಪೊಲೀಸರ ವಶದಲ್ಲಿದ್ದು, ತನಿಖೆ ತೀವ್ರಗೊಂಡಿದೆ.

ಜಪ್ತಿಯಾದ ದಾಖಲೆಗಳ ಪಟ್ಟಿ: ಸುವರ್ಣ ನ್ಯೂಸ್‌ಗೆ ಲಭ್ಯ

ಸ್ನೇಹಮಯಿ ಕೃಷ್ಣ ಅವರ ಮನೆಯಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕ ಮಹತ್ವದ ದಾಖಲೆಗಳ ಪಟ್ಟಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದ್ದು, ಜಪ್ತಿಯಾದ ವಸ್ತುಗಳ ವಿವರ ಹೀಗಿದೆ:

  • 16 GB ಸಾಮರ್ಥ್ಯದ ಕೆಂಪು ಬಣ್ಣದ ಪೆನ್‌ಡ್ರೈವ್.
  • ನೇರಳೆ ಬಣ್ಣದ ರೆಡ್‌ಮಿ ಫೋನ್ (ಸ್ವಿಚ್ ಆಫ್ ಸ್ಥಿತಿಯಲ್ಲಿತ್ತು).
  • ಸಿಲ್ವರ್ ಬಣ್ಣದ ಐಫೋನ್ (ಸ್ಕ್ರೀನ್ ಒಡೆದು ಹೋಗಿತ್ತು).
  • ಲೆನೆವೋ ಕಂಪನಿಯ ಐಪ್ಯಾಡ್.
  • ಒಂದು ಮೈಕ್ರೋ ಎಸ್‌ಡಿ ಕಾರ್ಡ್.
  • ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದ 20 ಪುಟಗಳ ದಾಖಲೆಗಳು.
  • 1 TB ಸಾಮರ್ಥ್ಯದ ಹಾರ್ಡ್ ಡಿಸ್ಕ್.

ಸೀಲ್ ಆದ ದಾಖಲೆಗಳು, ಮುಂದೇನು?

ದಾಳಿಯ ವೇಳೆ ಸಿಕ್ಕ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ದಾಖಲೆಗಳನ್ನು ಸಿಸಿಬಿ ಪೊಲೀಸರು ಸ್ಥಳದಲ್ಲೇ ಸೀಲ್ ಮಾಡಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಡಿಜಿಟಲ್ ಪುರಾವೆಗಳನ್ನು ಎಫ್‌ಎಸ್‌ಎಲ್ (FSL) ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯಿದೆ. ನಕಲಿ ಆಡಿಯೋ ತುಣುಕು ಸೃಷ್ಟಿಸಿದವರ ಹಿಂದೆ ಯಾರಿದ್ದಾರೆ ಮತ್ತು ಇದರ ಉದ್ದೇಶವೇನಿತ್ತು ಎಂಬುದು ಸಿಸಿಬಿ ವಿಚಾರಣೆಯಿಂದ ಹೊರಬರಬೇಕಿದೆ. 

ಸಿಸಿಬಿ ವಿಚಾರಣೆಯಲ್ಲೂ ತಮ್ಮ ಆರೋಪಕ್ಕೆ ಬದ್ಧರಾದ ಸ್ನೇಹಮಯಿ ಕೃಷ್ಣ!

ಸದ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿರುವ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಅಧಿಕಾರಿಗಳು ತಡರಾತ್ರಿಯವರೆಗೂ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವೈರಲ್ ಆಗಿರುವ ಆಡಿಯೋ ತುಣುಕಿನ ಕುರಿತು ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವ ಕೃಷ್ಣ, 'ಆಡಿಯೋದಲ್ಲಿ ಮಾತನಾಡಿರುವುದು ಮುಡಾ ಮಾಜಿ ಆಯುಕ್ತ ನಟೇಶ್ ಅವರೇ' ಎಂದು ಕೃಷ್ಣ ವಾದಿಸುತ್ತಿದ್ದು, ತಮ್ಮ ಆರೋಪಕ್ಕೆ ಬದ್ಧರಾಗಿರುವುದಾಗಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

FSL ಪರೀಕ್ಷೆಗೆ ಆಡಿಯೋ; ನಟೇಶ್ ವಾಯ್ಸ್ ಸ್ಯಾಂಪಲ್ ಸಂಗ್ರಹ

ವೈರಲ್ ಆಗಿರುವ ಆಡಿಯೋದ ಅಸಲಿಯತ್ತನ್ನು ಭೇದಿಸಲು ಸಿಸಿಬಿ ಪೊಲೀಸರು ಈಗ ವೈಜ್ಞಾನಿಕ ಹಾದಿ ಹಿಡಿದಿದ್ದಾರೆ. ಆಡಿಯೋ ತುಣುಕನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲು ಸಿದ್ಧತೆ ನಡೆಸಲಾಗಿದ್ದು, ಇದರೊಂದಿಗೆ ಹಿರಿಯ ಕೆಎಎಸ್ ಅಧಿಕಾರಿ ಡಿಬಿ ನಟೇಶ್ ಅವರ ಧ್ವನಿಯ ಮಾದರಿಯನ್ನು (Voice Sample) ಪೊಲೀಸರು ಪಡೆಯಲಿದ್ದಾರೆ. ಎಫ್‌ಎಸ್‌ಎಲ್ ವರದಿ ಬಂದ ನಂತರವೇ ಆ ಧ್ವನಿ ನಟೇಶ್ ಅವರದ್ದೇ ಅಥವಾ ನಕಲಿಯೇ ಎಂಬುದು ಅಧಿಕೃತವಾಗಿ ಸಾಬೀತಾಗಲಿದೆ.

ಮೈಸೂರು ಮೂಲದ ಆ ವ್ಯಕ್ತಿ ಯಾರು?

ಈ ಪ್ರಕರಣದಲ್ಲಿ ಆಡಿಯೋ ಸಂಭಾಷಣೆಯಲ್ಲಿದ್ದಾನೆನ್ನಲಾದ ಮತ್ತೊಬ್ಬ ವ್ಯಕ್ತಿಯ ಮೇಲೆ ಸಿಸಿಬಿ ಕಣ್ಣಿಟ್ಟಿದೆ. ಮೈಸೂರು ಮೂಲದ ಈ ವ್ಯಕ್ತಿ ನಟೇಶ್ ಅವರ ಸ್ನೇಹಿತ ಎನ್ನಲಾಗುತ್ತಿದ್ದು, ಆತನನ್ನು ವಶಕ್ಕೆ ಪಡೆದು ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈ ಆಡಿಯೋ ಅಸಲಿಯೇ? ಇದನ್ನು ಕೃಷ್ಣ ಅವರಿಗೆ ನೀಡಿದವರು ಯಾರು? ಮತ್ತು ಈ ಸಂಭಾಷಣೆ ರೆಕಾರ್ಡ್ ಆಗಿರುವ ಮೂಲ ಡಿವೈಸ್ ಯಾವುದು? ಎಂಬ ಪ್ರಶ್ನೆಗಳಿಗೆ ಈ ವ್ಯಕ್ತಿಯ ವಿಚಾರಣೆಯಿಂದ ಉತ್ತರ ಸಿಗುವ ನಿರೀಕ್ಷೆಯಿದೆ.

ಪೂರ್ಣ ಸಂಭಾಷಣೆಯ ಆಡಿಯೋ ಹುಡುಕಾಟದಲ್ಲಿ ಪೊಲೀಸರು

ಕೇವಲ ವೈರಲ್ ಆಗಿರುವ ತುಣುಕಷ್ಟೇ ಅಲ್ಲದೆ, ಆಡಿಯೋದ ಪೂರ್ಣ ಸಂಭಾಷಣೆಯನ್ನು ಪತ್ತೆಹಚ್ಚಲು ಸಿಸಿಬಿ ಮುಂದಾಗಿದೆ. ಆಡಿಯೋದಲ್ಲಿ ಬೇರೆ ಯಾವ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ ಮತ್ತು ಇದು ಯೋಜಿತ ಸಂಚೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಕೃಷ್ಣ ನೀಡಿದ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಮುಂದಿನ ಹಂತವಾಗಿ ಆಡಿಯೋದ ಮೂಲವನ್ನು ಜಾಲಾಡುತ್ತಿದ್ದಾರೆ.

YouTube video player