ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ‘ಅರಿವು ಕೇಂದ್ರ’ಗಳ (ಗ್ರಂಥಾಲಯ) ಮೇಲ್ವಿಚಾರಕರು ಕಳೆದ 1 ವರ್ಷಕ್ಕೂ ಅಧಿಕ ಕಾಲದಿಂದ ಪೂರ್ಣ ಸಂಬಳ ಪಡೆಯದೆ ಪರದಾಡುತ್ತಿದ್ದಾರೆ. ಇವರಿಗೆ ₹19201 ಕನಿಷ್ಠ ವೇತನವಿದ್ದು, ಈ ಪೈಕಿ ಸರ್ಕಾರ ₹12 ಸಾವಿರ, ಪಂಚಾಯಿತಿ ₹7201 ನೀಡಬೇಕು.

ಶಿವಾನಂದ ಗೊಂಬಿ

ಹುಬ್ಬಳ್ಳಿ : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ‘ಅರಿವು ಕೇಂದ್ರ’ಗಳ (ಗ್ರಂಥಾಲಯ) ಮೇಲ್ವಿಚಾರಕರು ಕಳೆದ 1 ವರ್ಷಕ್ಕೂ ಅಧಿಕ ಕಾಲದಿಂದ ಪೂರ್ಣ ಸಂಬಳ ಪಡೆಯದೆ ಪರದಾಡುತ್ತಿದ್ದಾರೆ.

ಇವರಿಗೆ ₹19201 ಕನಿಷ್ಠ ವೇತನವಿದ್ದು, ಈ ಪೈಕಿ ಸರ್ಕಾರ ₹12 ಸಾವಿರ, ಪಂಚಾಯಿತಿ ₹7201 ನೀಡಬೇಕು. ಆದರೆ, ಕಳೆದ ಒಂದು ವರ್ಷಕ್ಕೂ ಅಧಿಕ ಕಾಲದಿಂದ ಪಂಚಾಯಿತಿಗಳಿಂದ ನೀಡಲಾಗುವ ₹7201 ಬಂದಿಲ್ಲ.

ಏನಿದು ಸಮಸ್ಯೆ?:

ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳು, ಯುವಕರಿಗೆ ಜ್ಞಾನಾರ್ಜನೆ ಸುಲಭವಾಗಲಿ ಎಂಬ ಉದ್ದೇಶದಿಂದ 1987-88ರಲ್ಲಿ ಪ್ರತಿ ಗ್ರಾ.ಪಂ.ಗೆ ಒಂದರಂತೆ ರಾಜ್ಯದಲ್ಲಿ 5,742 ಗ್ರಂಥಾಲಯ ನಿರ್ಮಾಣ ಮಾಡಲಾಗಿದ್ದು, ಪ್ರತಿಯೊಂದಕ್ಕೂ ಒಬ್ಬ ಮೇಲ್ವಿಚಾರಕರಿದ್ದಾರೆ. ಈ ಮಧ್ಯೆ, ಗೌರವಧನದಿಂದ ದುಡಿಯುತ್ತಿದ್ದ ಇವರನ್ನು ಕಾರ್ಮಿಕ ಎಂದು ಪರಿಗಣಿಸಿ ಕನಿಷ್ಠ ವೇತನ ನೀಡಬೇಕು ಎಂದು ಕಾರ್ಮಿಕ ಇಲಾಖೆ 2016ರಲ್ಲೇ ಆದೇಶ ಹೊರಡಿಸಿತ್ತು. ಆದರೆ, ಆಗ ಗ್ರಂಥಾಲಯ ಇಲಾಖೆ ತನ್ನ ವ್ಯಾಪ್ತಿಗೆ ಬರುವ ನೌಕರರ ಪರವಾಗಿ ಕಾರ್ಮಿಕ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಆಕ್ಷೇಪಿಸಿ, ಕನಿಷ್ಠ ವೇತನದ ಆದೇಶವನ್ನು ತಡೆ ಹಿಡಿದಿತ್ತು. ಇದರ ವಿರುದ್ಧ ಮೇಲ್ವಿಚಾರಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಗ್ರಂಥಾಲಯ ಇಲಾಖೆ ಹೊರಡಿಸಿದ್ದ ಆದೇಶವನ್ನು ತಿರಸ್ಕರಿಸಿದ ಹೈಕೋರ್ಟ್‌, ಕನಿಷ್ಠ ವೇತನದಡಿ ಸಂಬಳ ನೀಡಬೇಕು ಎಂದು ಸೂಚಿಸಿ 2022ರಲ್ಲಿ ತೀರ್ಪು ನೀಡಿತ್ತು.

ಇದರ ನಡುವೆ, 2019ರಲ್ಲಿ ಗ್ರಂಥಾಲಯ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ (ಆರ್‌ಡಿಪಿಆರ್‌) ವ್ಯಾಪ್ತಿಗೆ ಇವರನ್ನು ಸೇರಿಸಲಾಯಿತು. ಆಗ ಗ್ರಂಥಾಲಯಗಳಿಂದ ‘ಅರಿವು ಕೇಂದ್ರ’ ಎಂದು ಇವುಗಳ ಹೆಸರು ಬದಲಾಯಿತು.

ಮುಂದೆ, ಹೈಕೋರ್ಟ್‌ ಆದೇಶದನ್ವಯ 2023ರ ಸೆಪ್ಟೆಂಬರ್‌ನಲ್ಲಿ ಇವರಿಗೆ ಕನಿಷ್ಠ ವೇತನ ಕೊಡಲು ಆರ್‌ಡಿಪಿಆರ್‌ ಇಲಾಖೆ ಒಪ್ಪಿಗೆ ಸೂಚಿಸಿತು. ಅದರಂತೆ ಸದ್ಯ ₹19201 ಇವರಿಗೆ ಸಂಬಳವಿದ್ದು, ಇದರಲ್ಲಿ ₹12 ಸಾವಿರ ಸರ್ಕಾರ, ಇನ್ನುಳಿದ ₹7201ಗಳನ್ನು ಗ್ರಾ.ಪಂ.ಗಳು ನೀಡಬೇಕು. ಗ್ರಾ.ಪಂ.ಗಳು ಕರ ವಸೂಲಿ ವೇಳೆ, ಗ್ರಂಥಾಲಯ ಸೆಸ್‌ ವಿಧಿಸಿ, ಆ ಹಣವನ್ನು ಇವರಿಗೆ ನೀಡಬೇಕು.

ಸರ್ಕಾರ ತನ್ನ ಪಾಲಿನ ₹12 ಸಾವಿರಗಳನ್ನು ಕಳೆದ ನವೆಂಬರ್‌ವರೆಗೂ ಸರಿಯಾಗಿ ನೀಡಿದೆ. ಡಿಸೆಂಬರ್‌, ಜನವರಿಯದ್ದು ಅಷ್ಟೇ ಬಾಕಿಯಿದೆ. ಆದರೆ, ಹೆಚ್ಚುವರಿ ₹7201 ಮಾತ್ರ ಪಂಚಾಯಿತಿಗಳಿಂದ ಬಂದಿಲ್ಲ. ಕೆಲ ಪಂಚಾಯಿತಿಗಳು ವರ್ಷ, 14 ತಿಂಗಳು, 18 ತಿಂಗಳಿಂದ ಬಾಕಿಯುಳಿಸಿಕೊಂಡಿವೆ. ಸರಾಸರಿ 14 ತಿಂಗಳದ್ದು ಕೊಡುವುದು ಬಾಕಿಯಿದೆ ಎಂದು ಲೆಕ್ಕ ಹಾಕಿದರೂ 5,742 ಮೇಲ್ವಿಚಾರಕರಿಗೆ ₹57.78 ಕೋಟಿಗೂ ಅಧಿಕ ಹಣ ಕೊಡುವುದು ಬಾಕಿ ಇದೆ.

ಸಂಬಳ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ:

ಪಂಚಾಯಿತಿಯಲ್ಲಿ ಕರ ವಸೂಲಾತಿ ಆಗುತ್ತಿಲ್ಲ. ಕರ ವಸೂಲು ಆದರೂ ವಸೂಲಾದ ಗ್ರಂಥಾಲಯ ಸೆಸ್‌ ನ ಹಣವನ್ನು ಅನ್ಯ ಕೆಲಸಗಳಿಗೆ ಬಳಕೆ ಮಾಡಲಾಗುತ್ತಿದೆ. ಹೀಗಾಗಿ, ಸರ್ಕಾರವೇ ನೇರವಾಗಿ ತಮಗೆ ಪೂರ್ಣ ಸಂಬಳ ಕೊಡಲಿ. ಬಾಕಿಯಿರುವ ಹಣವನ್ನು ಏಕಕಾಲಕ್ಕೆ ಬಿಡುಗಡೆ ಮಾಡಿ ಪುಣ್ಯ ಕಟ್ಕೊಳ್ಳಿ ಎಂಬ ಬೇಡಿಕೆ ಮೇಲ್ವಿಚಾರಕರದ್ದು.

ಸರ್ಕಾರ ತಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಅವರು ನೀಡುತ್ತಿದ್ದಾರೆ. ಹೀಗಾಗಿ, ಗ್ರಾಮೀಣ ಜನರ ಜ್ಞಾನಾರ್ಜನೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಅರಿವು ಕೇಂದ್ರಗಳ ಮೇಲ್ವಿಚಾರಕರು ಅರ್ಧ ಸಂಬಳ ಪಡೆದು ಪರದಾಡುವಂತಾಗಿರುವುದಂತೂ ಸತ್ಯ.

ಸರ್ಕಾರ ತನ್ನ ಪಾಲಿನ ₹12 ಸಾವಿರವನ್ನು ಎರಡ್ಮೂರು ತಿಂಗಳಿಗೊಮ್ಮೆ ನೀಡುತ್ತಿದೆ. ಪಂಚಾಯಿತಿಗಳಿಂದ ಬರಬೇಕಿರುವ ₹7201 ಸರಿಯಾಗಿ ಬರುತ್ತಿಲ್ಲ. ಕೆಲ ಜಿಲ್ಲೆಗಳಲ್ಲಿ ವರ್ಷದಿಂದ ಬಾಕಿಯಿಟ್ಟುಕೊಂಡರೆ, ಕೆಲ ಜಿಲ್ಲೆಗಳಲ್ಲಿ 15- 18 ತಿಂಗಳು ಬಾಕಿಯುಳಿಸಿಕೊಂಡಿವೆ.

- ಶಿವರಾಮೇಗೌಡ, ರಾಜ್ಯ ಉಪಾಧ್ಯಕ್ಷ, ಅರಿವು ಕೇಂದ್ರ ಮೇಲ್ವಿಚಾರಕರ ಸಂಘ.

ಪಂಚಾಯಿತಿಗಳಿಂದ ನೀಡಬೇಕಿರುವ ₹7201ರನ್ನು ಸರ್ಕಾರವೇ ನೀಡಲಿ. ಪಂಚಾಯಿತಿಗಳು ಬಾಕಿಯುಳಿಸಿಕೊಂಡಿರುವ ಎಲ್ಲ ಹಣವನ್ನು ಏಕಕಾಲಕ್ಕೆ ನೀಡಿ ಪುಣ್ಯ ಕಟ್ಕೊಳ್ಳಿ. ನಮಗೂ ಸಂಸಾರ ಇದೆ. ಕುಟುಂಬದವರನ್ನು ಸಲಹಬೇಕು ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.

- ಮಲ್ಲೇಶಪ್ಪ ಭೀಮಪ್ಪ ಬಾಡಗಿ, ಪ್ರಧಾನ ಕಾರ್ಯದರ್ಶಿ, ಗದಗ ಜಿಲ್ಲೆ.

- ‘ಅರಿವು ಕೇಂದ್ರ’ದ ಮೇಲ್ವಿಚಾರಕರಿಗೆ ₹19201 ಕನಿಷ್ಠ ವೇತನ

- ರಾಜ್ಯ ಸರ್ಕಾರ ₹ 12 ಸಾವಿರ, ಪಂಚಾಯ್ತಿ ₹7201 ನೀಡಬೇಕು

- 1 ವರ್ಷಕ್ಕೂ ಅಧಿಕ ಕಾಲದಿಂದ ಗ್ರಾ.ಪಂ.ಗಳಿಂದ ಬಂದಿಲ್ಲ ₹7201

- ಪಂಚಾಯ್ತಿಗಳ ಆರ್ಥಿಕ ಮುಗ್ಗಟ್ಟೇ ಇದಕ್ಕೆ ಕಾರಣ. ಸಿಬ್ಬಂದಿ ಬೇಸರ

- ಸಂಸಾರ ನಡೆಸಲು ಆಗ್ತಿಲ್ಲ, ವೇತನ ಕೊಡಿ ಎಂದು ಸಿಬ್ಬಂದಿ ಅಳಲು