ಶಿವಮೊಗ್ಗದ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವದ ಅಂಗವಾಗಿ 'ವೀಣಾ ತ್ರಿಶತೋತ್ಸವ' ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 301 ವೀಣಾ ಕಲಾವಿದರು ಏಕಕಾಲದಲ್ಲಿ ನಾದಸುಧೆ ಹರಿಸಿದ್ದು, ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಸ್ವತಃ ವೀಣೆ ನುಡಿಸಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.

ಶಿವಮೊಗ್ಗ (ಜ.18): ಶಿವಮೊಗ್ಗದ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವದ ಪ್ರಯುಕ್ತ ಸುಶ್ರಾವ್ಯ ಮತ್ತು ಶ್ರೀ ಸಾಯಿಶಕ್ತಿ ಸಂಗೀತ ವಿದ್ಯಾಲಯಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 'ವೀಣಾ ತ್ರಿಶತೋತ್ಸವ' ಕಾರ್ಯಕ್ರಮವು ಅತ್ಯಂತ ವೈಭವದಿಂದ ನೆರವೇರಿತು. ಮೈಸೂರು ರಾಜವಂಶಸ್ಥರು ಹಾಗೂ ಮೈಸೂರು-ಕೊಡಗು ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಈ ದೈವಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಒಂದೇ ವೇದಿಕೆಯಲ್ಲಿ 301 ಕಲಾವಿದರಿಂದ ಮೊಳಗಿದ ವೀಣಾ ನಾದದ ಝೇಂಕಾರವು ಮಲೆನಾಡಿಗರನ್ನು ರೋಮಾಂಚನಗೊಳಿಸಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಭಿಕರನ್ನು ಮಂತ್ರಮುಗ್ಧಗೊಳಿಸಿದ ಸಂಸದ ಯದುವೀರ್ ವೀಣಾವಾದನ!

ತಾವೂ ಒಬ್ಬ ನುರಿತ ವೀಣಾ ವಾದಕರಾಗಿರುವ ಯದುವೀರ್ ಒಡೆಯರ್ ಅವರು ಕಾರ್ಯಕ್ರಮದುದ್ದಕ್ಕೂ ಸಂಗೀತದ ಮೇಲಿನ ತಮ್ಮ ಆಸಕ್ತಿಯನ್ನು ಮೆರೆದರು. ಸ್ವತಃ ವೇದಿಕೆಯ ಮೇಲೆ ವೀಣಾವಾದನ ಮಾಡುವ ಮೂಲಕ ಸಭಿಕರನ್ನು ಮಂತ್ರಮುಗ್ಧಗೊಳಿಸಿದ ಅವರು, 'ನಮ್ಮ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುತ್ತಿರುವ ಈ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ' ಎಂದು ಪ್ರಶಂಸಿಸಿದರು. 301 ವೀಣಾವಾದಕರು ಏಕಕಾಲದಲ್ಲಿ ನಾದಸುಧೆ ಹರಿಸಿದ್ದು ಕಿವಿಗೆ ಹಬ್ಬದಂತಿತ್ತು.

ಗಣ್ಯರ ಉಪಸ್ಥಿತಿಯಲ್ಲಿ ಅದ್ಧೂರಿ ಸಮಾರಂಭ

ಈ ಕಾರ್ಯಕ್ರಮದಲ್ಲಿ ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಸಂಸದ ಬಿವೈ ರಾಘವೇಂದ್ರ, ಎಂಎಲ್‌ಸಿಗಳಾದ ಡಿಎಸ್ ಅರುಣ್ ಮತ್ತು ಡಾ ಧನಂಜಯ್ ಸರ್ಜಿ, ಶಿವಮೊಗ್ಗ ನಗರ ಶಾಸಕ ಎಸ್ಎನ್. ಚೆನ್ನಬಸಪ್ಪ ಹಾಗೂ ಮಾಜಿ ಶಾಸಕ ಬಿ ಪ್ರಸನ್ನ ಕುಮಾರ್ ಸೇರಿದಂತೆ ಹಲವು ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದು, ಸಂಸ್ಥೆಯ ಸಾಧನೆಯನ್ನು ಬೆಂಬಲಿಸಿದರು.