ಸಂಸದ ಶ್ರೀನಿವಾಸ ಪ್ರಸಾದ್‌ಗೆ ತೀವ್ರ ಅನಾರೋಗ್ಯ: ಐಸಿಯುನಲ್ಲಿ ಚಿಕಿತ್ಸೆ
ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿರುವ ಸಂಸದ ಶ್ರೀನಿವಾಸ್ ಪ್ರಸಾದ್ (75) ಅವರ ಆರೋಗ್ಯ ಗಂಭೀರವಾಗಿದ್ದು, ಮಣಿಪಾಲ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು (ಏ.28): ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿರುವ ಸಂಸದ ಶ್ರೀನಿವಾಸ್ ಪ್ರಸಾದ್ (75) ಅವರ ಆರೋಗ್ಯ ಗಂಭೀರವಾಗಿದ್ದು, ಮಣಿಪಾಲ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚಾಮರಾಜನಗರ ಕ್ಷೇತ್ರದ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ, ಶನಿವಾರ ಅನಾರೋಗ್ಯ ಉಲ್ಬಣಿಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಐಸಿಯುನಲ್ಲಿ ಇರಿಸಲಾಗಿದ್ದು, ತಜ್ಞ ವೈದ್ಯರು ಅವರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಿದ್ದಾರೆ. ಪ್ರಸಾದ್ ಅವರು ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿದ ಕೂಡಲೆ ಸಿಎಂ ಸಿದ್ದರಾಮಯ್ಯ ಅವರು ಪ್ರಸಾದ್‌ರ ಕುಟುಂಬದ ಸದಸ್ಯರಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದರು. ಅಲ್ಲದೆ, ಪ್ರಸಾದ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.
ಬರ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್‌ಗೆ ಧನ್ಯವಾದ: ಸಿಎಂ ಸಿದ್ದರಾಮಯ್ಯ
ಸಂಸದರ ಆರೋಗ್ಯ ಕುರಿತು ವೈದ್ಯ ಸುದರ್ಶನ್ ಬಲ್ಲಾಳ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ. ಸುದರ್ಶನ್ ಬಲ್ಲಾಳ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ಅವರು 25 ವರ್ಷದಿಂದ ನಮ್ಮ ಬಳಿ ಚಿಕಿತ್ಸೆಗೆ ಬರ್ತಾ ಇದ್ದಾರೆ. ಎಪ್ರಿಲ್ 22 ರಂದು ಇನ್‌ಫೆಕ್ಷನ್ ಅಂತಾ ಬಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಗರ್, ಬಿಪಿ ವ್ಯತ್ಯಾಸ ಇರುವುದರಿಂದ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ.