ಆನ್‌ಲೈನ್‌ ಅಭಿಪ್ರಾಯಕ್ಕೆ ಒಗ್ಗಿಕೊಳ್ಳಿ| ಉಪ ಆಯುಕ್ತ ಜಿ.ಎನ್‌.ಶಿವಮೂರ್ತಿ ಅವರಿಗೆ ಪತ್ರ ಸಂಸದ ರಾಜೀವ್‌ ಚಂದ್ರಶೇಖರ್‌| ಬೆಂಗಳೂರಿನ ಅಭಿವೃದ್ಧಿಯಲ್ಲಿ ಇಲ್ಲಿನ ನಾಗರಿಕರು ಪ್ರಮುಖ ಪಾಲುದಾರರು| ಯೋಜನೆ ರೂಪಿಸುವ ಸಂದರ್ಭದಲ್ಲಿ ಜನರೊಂದಿಗೆ ಸಮಾಲೋಚನೆ ನಡೆಸಬೇಕು|

ಬೆಂಗಳೂರು(ಆ.07): ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ 33 ಸಾವಿರ ಮರಗಳನ್ನು ಕಡಿಯುವ ಮತ್ತು 25 ಎಕರೆ ಮೀಸಲು ಅರಣ್ಯ ಭೂಮಿಯನ್ನು ಸ್ವಾಧೀನ ಪಡಿಸುವ ಪ್ರಸ್ತಾವನೆಯ ಬಗ್ಗೆ ಆನ್‌ಲೈನ್‌ ಮೂಲಕ ಜನರ ಅಭಿಪ್ರಾಯ ಆಲಿಸಬೇಕು ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಆಗ್ರಹಿಸಿದ್ದಾರೆ.

ಬೆಂಗಳೂರು ನಗರದ ಉಪ ಆಯುಕ್ತ ಜಿ.ಎನ್‌.ಶಿವಮೂರ್ತಿ ಅವರಿಗೆ ಪತ್ರ ಬರೆದಿರುವ ರಾಜೀವ್‌ ಚಂದ್ರಶೇಖರ್‌, ಪ್ರಸ್ತುತ ಕೋವಿಡ್‌ 19ರ ಸೋಂಕು ಭಾರಿ ಪ್ರಮಾಣದಲ್ಲಿ ಹಬ್ಬಿರುವ ಸಂದರ್ಭದಲ್ಲಿ ಯೋಜನೆಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯುವ ಪ್ರಕ್ರಿಯೆಯನ್ನು ಆನ್‌ಲೈನ್‌ಗೊಳಿಸಬೇಕು ಎಂಬ ಸಲಹೆಯನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಆನ್‌ಲೈನ್‌ ಪ್ರಕ್ರಿಯೆಯಲ್ಲಿ ಜನ ಅಭಿಪ್ರಾಯ ಸಲ್ಲಿಸುವವರ ನೋಂದಣಿ ಮಾಡಿಕೊಂಡು ಬಳಿಕ ಅಭಿಪ್ರಾಯ ಸಲ್ಲಿಕೆಗೆ ಅವಕಾಶ ನೀಡಿದರೆ ಜನರು ವ್ಯವಸ್ಥಿತವಾಗಿ ಆನ್‌ಲೈನ್‌ನಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಕೇರಳದಂತಹ ಘಟನೆ ಕರ್ನಾಟಕದಲ್ಲಿ ನಡೆಯದಿರಲಿ: ಸಿಂಎಗೆ ಸಂಸದ ರಾಜೀವ್ ಪತ್ರ

ಕೋವಿಡ್‌ 19 ಇನ್ನಷ್ಟು ದಿನ ನಮ್ಮೊಡನೆ ಇರಲಿದ್ದು, ಆನ್‌ಲೈನ್‌ ಮೂಲಕ ಜನಾಭಿಪ್ರಾಯ ಆಲಿಸುವ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಸಾಮಾನ್ಯವಾಗಲಿದೆ. ಸರ್ಕಾರ ಮತ್ತು ಜನರು ಇಂತಹ ಪ್ರಕ್ರಿಯೆಗಳಿಗೆ ಒಗ್ಗಿಕೊಳ್ಳಬೇಕು ಎಂದು ರಾಜೀವ್‌ ಚಂದ್ರಶೇಖರ್‌ ತಮ್ಮ ಪತ್ರದಲ್ಲಿ ಸಲಹೆ ನೀಡಿದ್ದಾರೆ.

ನಮ್ಮ ಬೆಂಗಳೂರಿನ ಅಭಿವೃದ್ಧಿಯಲ್ಲಿ ಇಲ್ಲಿನ ನಾಗರಿಕರು ಪ್ರಮುಖ ಪಾಲುದಾರರಾಗಿದ್ದಾರೆ. ಯೋಜನೆ ರೂಪಿಸುವ ಸಂದರ್ಭದಲ್ಲಿ ಜನರೊಂದಿಗೆ ಸಮಾಲೋಚನೆ ನಡೆಸಬೇಕು. ಹಾಗೆಯೇ ಯೋಜನೆಯ ಅನುಷ್ಠಾನದಲ್ಲಿಯೂ ನಾಗರಿಕರು ಭಾಗಿಯಾಗಲು ಅವಕಾಶ ಇರುವಂತೆ ನೋಡಿಕೊಳ್ಳಬೇಕು ಎಂದು ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.