ರಾಜ್ಯಪಾಲರನ್ನು ಅಡ್ಡಗಟ್ಟಿದ ಆರೋಪದ ಮೇಲೆ ಕಾಂಗ್ರೆಸ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಮತ್ತು ಎಸ್. ರವಿ ಅವರನ್ನು ಅಮಾನತುಗೊಳಿಸಬೇಕೆಂದು ಬಿಜೆಪಿ ಪಟ್ಟುಹಿಡಿದರೆ, ರಾಷ್ಟ್ರಗೀತೆಗೆ ರಾಜ್ಯಪಾಲರು ಅಗೌರವ ತೋರಿದ್ದಾರೆಂದು ಕಾಂಗ್ರೆಸ್ ಚರ್ಚೆಗೆ ಒತ್ತಾಯಿಸಿತು. .

ಬೆಂಗಳೂರು: ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮುಗಿಸಿ ನಿರ್ಗಮಿಸುವಾಗ ರಾಜ್ಯಪಾಲರನ್ನು ಅಡ್ಡಗಟ್ಟಿದ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಹಾಗೂ ಎಸ್‌.ರವಿ ಅಮಾನತು ಮಾಡಬೇಕೆಂದು ಬಿಜೆಪಿ ಬಿಗಿ ಪಟ್ಟು, ಇದಕ್ಕೆ ಪ್ರತಿಯಾಗಿ ರಾಷ್ಟ್ರಗೀತೆಗೂ ರಾಜ್ಯಪಾಲರು ಅಪಮಾನ ಮಾಡಿರುವ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಕಾಂಗ್ರೆಸ್‌ ಒತ್ತಾಯ ಮಾಡಿದ ಪರಿಣಾಮ ಕಲಾಪದಲ್ಲಿ ಕೋಲಾಹಲಕರ ವಾತಾವರಣ ನಿರ್ಮಾಣ‍ವಾಗಿ, ಸದನವನ್ನು 4 ಬಾರಿ ಮುಂದೂಡಿದ ಪ್ರಸಂಗ ನಡೆಯಿತು. ಇದರಿಂದಾಗಿ ಇಡೀ ದಿನ ಬೇರೆ ಯಾವುದೇ ಕಲಾಪ ನಡೆಯಲಿಲ್ಲ.

ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿ ನಿರ್ಗಮಿಸುವಾಗ ಅಡ್ಡಗಟ್ಟಿ, ಘೋಷಣೆ ಕೂಗಿದ ಸದಸ್ಯರನ್ನು ಅಮಾನತು ಮಾಡಬೇಕು. ಈ ರೀತಿಯ ವರ್ತನೆ ಸಹಿಸಲು ಸಾಧ್ಯವಿಲ್ಲ. ತಕ್ಷಣ ಸದಸ್ಯರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

‘ಗೋ ಬ್ಯಾಕ್‌ ಗವರ್ನರ್‌’, ಬಿಜೆಪಿ ಶೇಮ್‌ ಶೇಮ್‌

ಈ ಮಧ್ಯೆ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌ ಅವರು ಕ್ರಿಯಾಲೋಪ ಎತ್ತಿದರೆ. ಬಿಜೆಪಿ ಸದಸ್ಯರು ಗೂಂಡಾಗಿರಿ ಮಾಡಿದ ಸದಸ್ಯರನ್ನು ಅಮಾನತು ಮಾಡಿ, ಗೂಂಡಾಗಿರಿ ನಡೆಯಲ್ಲ ಎಂದು ಘೋಷಣೆ ಕೂಗಿದರೆ, ಕಾಂಗ್ರೆಸ್‌ ಸದಸ್ಯರು ‘ಗೋ ಬ್ಯಾಕ್‌ ಗವರ್ನರ್‌’, ಬಿಜೆಪಿ ಶೇಮ್‌ ಶೇಮ್‌ ಎಂದು ಘೋಷಣೆ ಕೂಗತೊಡಗಿದರು.

ಇದೇ ವೇಳೆ ಹೊರಟ್ಟಿ ಅವರು ಹರಿಪ್ರಸಾದ್‌ ಅವರ ಕ್ರಿಯಾಲೋಪವನ್ನು ತಿರಸ್ಕರಿಸಿರುವುದಾಗಿ ರೂಲಿಂಗ್‌ ನೀಡಿದರು.

ಈ ಹಂತದಲ್ಲಿ ಎರಡು ಕಡೆ ಘೋಷಣೆ, ವಾಗ್ವಾದ ಕೆಲಕಾಲ ನಡೆಯಿತು. ಆಗ ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.

ಎರಡು ಪತ್ರ ಸಲ್ಲಿಕೆ

ಪುನಃ ಸದನ ಆರಂಭವಾಗುತ್ತಿದ್ದಂತೆ ಸಭಾಪತಿಗಳು ಬಿಜೆಪಿ ಕಡೆಯಿಂದ ಹರಿಪ್ರಸಾದ್‌ ಹಾಗೂ ಎಸ್. ರವಿ ಅವರನ್ನು ಅಮಾನತು ಮಾಡಬೇಕೆಂಬ ಪತ್ರ ಬಂದಿದೆ. ಕಾಂಗ್ರೆಸ್‌ನಿಂದ ರಾಜ್ಯಪಾಲರಿಂದ ರಾಷ್ಟ್ರಗೀತೆಗೆ ಅಗೌರವ ಆಗಿದೆ, ಈ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಪತ್ರ ಸಲ್ಲಿಕೆಯಾಗಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿದರು. ಈ ಹಂತದಲ್ಲಿ ಎರಡು ಕಡೆ ಸದಸ್ಯರು ಏಕ ಕಾಲದಲ್ಲಿ ವಾಗ್ವಾದ ಶುರುವಾಗುತ್ತಿದ್ದಂತೆ ಸಭಾಪತಿಗಳು ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

ರೂಲಿಂಗ್‌ ನೀಡಿದ ಸಭಾಪತಿ

ಭೋಜನ ವಿರಾಮದ ನಂತರವೂ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ತಮ್ಮ ಪ್ರಸ್ತಾವನೆಗಳ ಚರ್ಚೆಗೆ ಪಟ್ಟು, ವಾಗ್ವಾದ ಮುಂದುವರೆಸಿದ್ದರಿಂದ ಕಲಾಪವನ್ನು ಸಭಾಪತಿ ಅವರು ಮತ್ತೆ 10 ನಿಮಿಷ ಮುಂದೂಡಿದರು.

ತಿರಸ್ಕಾರ

ಪುನಃ ಸದನ ಆರಂಭವಾದಾಗ ಸಭಾಪತಿ ಅವರು, ನಿಯಮ 306/10ರ ಅನ್ವಯ ರಾಜ್ಯಪಾಲರ ಕುರಿತು ಚರ್ಚಿಸಲು ಅವಕಾಶವಿಲ್ಲ. ಹೀಗಾಗಿ ರಾಜ್ಯಪಾಲರು ಭಾಷಣ ಮುಗಿಸಿ ಹೊರಡುವಾಗ ರಾಷ್ಟ್ರಗೀತೆ ಗಾಯನಕ್ಕೆ ಅವಕಾಶ ನೀಡದೆ ಅವಮಾನ ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆಗೆ ಕೋರಿದ್ದ ಆಡಳಿತ ಪಕ್ಷದ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದಾಗಿ ರೂಲಿಂಗ್‌ ನೀಡಿದರು.

ಪುರಸ್ಕಾರ

ರಾಜ್ಯಪಾಲರು ಸಭೆಯಿಂದ ನಿರ್ಗಮಿಸುವಾಗ ಸದಸ್ಯರಾದ ಬಿ.ಕೆ.ಹರಿಪ್ರಸಾದ್‌ ಮತ್ತು ಎಸ್‌.ರವಿ ಅಡ್ಡಗಟ್ಟಿ, ಅವಮಾನಿಸಿದ್ದಾರೆ. ಹಾಗಾಗಿ ಅವರನ್ನು ಅಮಾನತು ಮಾಡಬೇಕೆಂದು ಬಿಜೆಪಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ವಿಧಾನ ಪರಿಷತ್‌ನ ನೀತಿ ನಿರೂಪಣಾ ಸಮಿತಿಗೆ ವಹಿಸಲಾಗಿದೆ ಎಂದು ತೀರ್ಪು ನೀಡಿದರು.