ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆಡಳಿತ ವೈಫಲ್ಯ, ಆರ್ಥಿಕ ಸಂಕಷ್ಟವನ್ನು ಮರೆಮಾಚಲು ಸರ್ಕಾರ ಆರೆಸ್ಸೆಸ್ ವಿವಾದ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ ಅವರು, ಆರ್‌ಎಸ್‌ಎಸ್ ಅನ್ನು ಕೆಣಕಿದರೆ ಸರ್ಕಾರವೇ ಭಸ್ಮವಾಗಲಿದೆ ಎಂದು ಎಚ್ಚರಿಸಿದರು.
ಧಾರವಾಡ (ಅ.19): ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಏನಾಗಿದೆಯೋ ಗೊತ್ತಿಲ್ಲ.ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಆರ್ಥಿಕ ಪರಿಸ್ಥಿತಿ ಕ್ಷೀಣಿಸಿದೆ ಎಂದು ಸಂಸದ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರದ ಆಡಳಿತ ವೈಫಲ್ಯ, ಆರೆಸ್ಸೆಸ್ ನಿರ್ಬಂಧ ವಿಚಾರವಾಗಿ ಇಂದು ಧಾರವಾಡದಲ್ಲಿ ಜಗದೀಶ ಶೆಟ್ಟರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಆಡಳಿತ ವೈಫಲ್ಯ:
ಗುತ್ತಿಗೆದಾರರ ₹33,000 ಕೋಟಿ ಬಿಲ್ ಬಾಕಿಯಿದೆ, ಸರಕಾರಿ ನೌಕರರಿಗೆ ಸಂಬಳ ಕೊಡಲಾಗುತ್ತಿಲ್ಲ, ರೈತರಿಗೆ ಪರಿಹಾರ ಒದಗಿಸಿಲ್ಲ. ಇದರಿಂದ ಗುತ್ತಿಗೆದಾರರು, ಸರಕಾರಿ ನೌಕರರು ಮತ್ತು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಡೀ ಆಡಳಿತ ಕುಸಿದುಹೋಗಿದೆ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸರಕಾರ ಜಾತಿ ಸಮೀಕ್ಷೆ, ಆರ್‌ಎಸ್‌ಎಸ್ ವಿವಾದದಂತಹ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಎತ್ತುತ್ತಿದೆ ಎಂದು ಆರೋಪಿಸಿದರು.
ಆರ್‌ಎಸ್‌ಎಸ್ ಪಥಸಂಚಲನ ವಿವಾದ:
ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಯಾವುದೇ ಆದೇಶದಲ್ಲಿ ಅದರ ಹೆಸರು ಉಲ್ಲೇಖವಾಗಿಲ್ಲ ಎಂದು ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ. 2013ರಲ್ಲಿ ತಾವು ಸಿಎಂ ಆಗಿದ್ದಾಗ ಬಂದ ಆದೇಶವನ್ನು ಶಿಕ್ಷಣ ಇಲಾಖೆಯಿಂದ ನೀಡಲಾಗಿತ್ತು, ಆದರೆ ಅದು ಕ್ಯಾಬಿನೆಟ್ ನಿರ್ಧಾರವಲ್ಲ. 'ಶಿಕ್ಷಣ ಇಲಾಖೆಯ ಸುತ್ತೋಲೆಯನ್ನು ತಪ್ಪಾಗಿ ತಿರುಚಿ, ಆರ್‌ಎಸ್‌ಎಸ್ ವಿರುದ್ಧ ನಾಟಕ ಮಾಡಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಂಘದ ಚಟುವಟಿಕೆ ನಡೆಸದಂತೆ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಧೈರ್ಯವಿದ್ದರೆ ಸಂಘದ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಿ ಎಂದು ಸವಾಲು ಹಾಕಿದರು.
ಕೇಂದ್ರದ ಆದೇಶದ ಉಲ್ಲೇಖ:
ಅ. 13 ರಂದು ಮತ್ತೊಂದು ಪ್ರಿಯಾಂಕ್ ಪತ್ರ ಬರೆದಿದ್ದಾರೆ. ಅದರಲ್ಲಿ ಸರಕಾರಿ ನೌಕರರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಅಂತಾ ಬರೆದಿದ್ದಾರೆ. ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡಿರಿ? ನಿಮಗೆ ನಿರ್ಧಾರ ತೆಗೆದುಕೊಳ್ಳಲು ಅಧಿಕಾರವೇ ಇಲ್ಲ. ಈ ಅಧಿಕಾರ ಇರೋದು ಕೇಂದ್ರಕ್ಕೆ ಮಾತ್ರ. 1966ರಲ್ಲಿ ನೆಹರೂರವರು ಆರ್‌ಎಸ್‌ಎಸ್ ಮತ್ತು ಜಮಾತೆ ಇಸ್ಲಾಮ್‌ನ ಚಟುವಟಿಕೆಗಳಲ್ಲಿ ಸರಕಾರಿ ನೌಕರರು ಭಾಗವಹಿಸದಂತೆ ಆದೇಶಿಸಿದ್ದರು. ಆದರೆ, 2024ರ ಜುಲೈ 9ರಂದು ಕೇಂದ್ರ ಸರಕಾರ ಈ ಆದೇಶದಿಂದ ಆರ್‌ಎಸ್‌ಎಸ್ ಹೆಸರನ್ನು ತೆಗೆದು, ಸರಕಾರಿ ನೌಕರರಿಗೆ ಸಂಘದ ಚಟುವಟಿಕೆಯಲ್ಲಿ ಭಾಗವಹಿಸಲು ಅನುಮತಿ ನೀಡಿದೆ. ಹೀಗಾಗಿ, ರಾಜ್ಯ ಸರಕಾರಕ್ಕೆ ಈ ರೀತಿಯ ಆದೇಶ ನೀಡುವ ಅಧಿಕಾರವಿಲ್ಲ. ಲಿಂಗಸೂರಿನಲ್ಲಿ ಪಿಡಿಒ ಅಮಾನತು ಕಾನೂನುಬಾಹಿರವಾಗಿದ್ದು, ತಕ್ಷಣ ಹಿಂಪಡೆಯಬೇಕು. ಕೋರ್ಟ್‌ಗೆ ಹೋದರೆ ಸರಕಾರದ ಆದೇಶ ವಜಾಗೊಳ್ಳುತ್ತದೆ ಎಂದು ಶೆಟ್ಟರ್ ಎಚ್ಚರಿಸಿದರು.
ಚಿತ್ತಾಪುರ ಪಥಸಂಚಲನ ಮತ್ತು ಹೈಕೋರ್ಟ್ ಆದೇಶ:
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ತಡೆಯೊಡ್ಡಲು ಪ್ರಯತ್ನಿಸಿದ್ದ ಸರಕಾರ, ಧ್ವಜಗಳನ್ನು ಕಿತ್ತುಹಾಕಿತ್ತು. ಆದರೆ, ಹೈಕೋರ್ಟ್ ಈಗ ಪಥಸಂಚಲನಕ್ಕೆ ಅನುಮತಿ ನೀಡಿದೆ. ಕಾನೂನುಬಾಹಿರವಾಗಿದ್ದರೆ ಕೋರ್ಟ್ ಅನುಮತಿ ನೀಡುತ್ತಿರಲಿಲ್ಲ. ಸಂಘದ ಜನಪ್ರಿಯತೆಯನ್ನು ಸಿಎಂ ಮತ್ತು ಪ್ರಿಯಾಂಕ್ ಖರ್ಗೆ ಸಹಿಸಿಕೊಳ್ಳಲಾರದೆ, ಈ ರೀತಿಯ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ ಎಂದು ಶೆಟ್ಟರ್ ಆರೋಪಿಸಿದರು.
ಕಲಬುರ್ಗಿಯಲ್ಲಿ ಮತ್ತೊಂದು ವಿವಾದ:
ಕಲಬುರ್ಗಿಯ ಗ್ರಾಮವೊಂದರಲ್ಲಿ ಆರ್‌ಎಸ್‌ಎಸ್ ಪಥಸಂಚಲನವನ್ನು ದಲಿತ ಸಂಘಟನೆಗಳೊಂದಿಗೆ ಘರ್ಷಣೆಯ ಸಾಧ್ಯತೆಯ ನೆಪದಲ್ಲಿ ನಿಷೇಧಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಕನೇರಿ ಸ್ವಾಮಿಗಳನ್ನು ವಿಜಯಪುರ ಮತ್ತು ಬಾಗಲಕೋಟೆಗೆ ನಿರ್ಬಂಧಿಸಿರುವುದು ತಪ್ಪು. ಅವರ ಮಾತಿನಲ್ಲಿ ತಪ್ಪಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಿ. ರಾಜ್ಯದಲ್ಲಿ ತುರ್ತು ಪರಿಸ್ಥಿತಿಯಂತಹ ವಾತಾವರಣ ಸೃಷ್ಟಿಯಾಗಿದೆ.
ಸಿದ್ದರಾಮಯ್ಯ ಸರಕಾರದ ವಿರುದ್ಧ ಆಕ್ರೋಶ:
ಸಿದ್ದರಾಮಯ್ಯನವರ ಉದ್ದೇಶ ಹಿಂದೂ ಸಮಾಜವನ್ನು ಒಡೆಯುವುದು, ಲಿಂಗಾಯತರನ್ನು ವಿಭಜಿಸುವುದು ಮತ್ತು ಅಲ್ಪಸಂಖ್ಯಾತರ ತುಷ್ಠೀಕರಣ. ಆರ್‌ಎಸ್‌ಎಸ್ ಹಿಂದುತ್ವ ಉಳಿಸುವ, ರಾಷ್ಟ್ರ ಕಟ್ಟುವ ಕೆಲಸ ಮಾಡುತ್ತಿದೆ. ಅವರನ್ನು ಎದುರು ಹಾಕಿಕೊಂಡರೆ ಸರಕಾರ ಭಸ್ಮವಾಗಲಿದೆ. ಸಿದ್ದರಾಮಯ್ಯ ಸರಕಾರದ ಅಂತಿಮ ಕ್ಷಣ ಬಂದಿದೆ. ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ, ಅದೇ ರೀತಿ ಈ ಸರಕಾರದ ಸ್ಥಿತಿಯಾಗಿದೆ ಎಂದು ಶೆಟ್ಟರ್ ಕಟುವಾಗಿ ಟೀಕಿಸಿದರು.
ಕಾಂಗ್ರೆಸ್‌ಗೆ ಎಚ್ಚರಿಕೆ:
ಡಿಕೆ ಶಿವಕುಮಾರ್‌ರವರಿಗೆ ಸಿಎಂ ಕುರ್ಚಿಯ ಆಕಾಂಕ್ಷೆ ಇದ್ದು, ಸಿದ್ದರಾಮಯ್ಯ ಅದಕ್ಕೆ ಅಡ್ಡಿಪಡಿಸಲು ಈ ರೀತಿಯ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ ಎಂದು ಶೆಟ್ಟರ್ ಆರೋಪಿಸಿದರು ಈ ಎಲ್ಲ ಕೃತ್ಯಗಳಿಂದ ಕಾಂಗ್ರೆಸ್‌ಗೆ ಹಾನಿಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
