ಅಸ್ತಮಾ ಔಷಧಕ್ಕೆ ಕೊಪ್ಪಳಕ್ಕೆ ಬಂದ 80 ಸಾವಿರಕ್ಕೂ ಹೆಚ್ಚಿನ ಜನರು!
ಮೃಗಶಿರ ಮಳೆ ಸೇರುವ ಸಮಯದಲ್ಲಿಯೇ ಅಸ್ತಮಾ ರೋಗಕ್ಕೆ ಔಷಧ ವಿತರಣೆ ಮಾಡುವ ಪದ್ಧತಿ ಕುಟುಗನಳ್ಳಿ ಗ್ರಾಮದಲ್ಲಿ ಕುಲಕರ್ಣಿ ಕುಟುಂಬದವರು ನಡೆಸಿಕೊಂಡು ಬರುತ್ತಿದ್ದು, ಈ ವರ್ಷ ನಿರೀಕ್ಷೆಗೂ ಮೀರಿ ಜನಸಾಗರ ಹರಿದು ಬಂದಿದೆ.
ಕೊಪ್ಪಳ (ಜೂ.08): ಮೃಗಶಿರ ಮಳೆ ಸೇರುವ ಸಮಯದಲ್ಲಿಯೇ ಅಸ್ತಮಾ ರೋಗಕ್ಕೆ ಔಷಧ ವಿತರಣೆ ಮಾಡುವ ಪದ್ಧತಿ ಕುಟುಗನಳ್ಳಿ ಗ್ರಾಮದಲ್ಲಿ ಕುಲಕರ್ಣಿ ಕುಟುಂಬದವರು ನಡೆಸಿಕೊಂಡು ಬರುತ್ತಿದ್ದು, ಈ ವರ್ಷ ನಿರೀಕ್ಷೆಗೂ ಮೀರಿ ಜನಸಾಗರ ಹರಿದು ಬಂದಿದೆ. ಜೂ. 8ರಂದು ಬೆಳಗ್ಗೆ 7.47ಕ್ಕೆ ಸರಿಯಾಗಿ ಔಷಧ ಸೇವಿಸಬೇಕು. ಹೀಗಾಗಿ, ಶುಕ್ರವಾರ ಸಂಜೆಯೇ ಕುಟಗನಳ್ಳಿ ಗ್ರಾಮಕ್ಕೆ 70-80 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದಾರೆ. ಅವರಿಗೆ ಆಶ್ರಯ ಪಡೆಯುವುದು ಸಮಸ್ಯೆಯಾಗಿದೆ.
ಹೀಗಾಗಿ, ರಾತ್ರಿಪೂರ್ತಿ ಬೀದಿ ಬೀದಿಯಲ್ಲಿ, ಗುಡಿ-ಗುಂಡಾರಗಳಲ್ಲಿ ತಂಗಿದ್ದು, ವಿಪರೀತ ಮಳೆಯಾಗಿದ್ದರಿಂದ ಬಂದಿದ್ದ ಜನರ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ನೆರೆಯ ಆಂಧ್ರ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗೋವಾ ಸೇರಿದಂತೆ ಹತ್ತಾರು ರಾಜ್ಯಗಳಿಂದ ಹತ್ತಾರು ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದಾರೆ. ಹಾಗೆಯೇ ರಾಜ್ಯದ ಮೂಲೆ ಮೂಲೆಯಿಂದ ಅಪಾರ ಸಂಖ್ಯೆಯ ಜನರು ಆಗಮಿಸಿದ್ದಾರೆ. ಶುಕ್ರವಾರವೇ ಸುಮಾರು 80 ಸಾವಿರ ಜನರು ಸೇರಿದ್ದಾರೆ.
ಮಂಡ್ಯದಲ್ಲಿ ಹಣ ಬಲವಲ್ಲ, ಜನ ಬಲ ಗೆದ್ದಿದೆ: ಶಾಸಕ ಎಚ್.ಟಿ.ಮಂಜು
ಔಷಧ ವಿತರಣೆ: ಔಷಧವನ್ನು ಜೂ. 8ರಂದು ಬೆಳಗ್ಗೆ 7.47ಕ್ಕೆ ಸರಿಯಾಗಿ ಸೇವಿಸಬೇಕಾಗಿರುವುದರಿಂದ ಅದಕ್ಕಿಂತ ಮುಂಚೆ ಬೆಳಗಿನ ಜಾವ 4 ಗಂಟೆಗೆ ಔಷಧ ವಿತರಣೆ ಮಾಡಲಾಗುತ್ತದೆ. ಹೀಗಾಗಿ, ರಾತ್ರಿಯೇ ಬಂದು ಜನರು ಸರದಿಯಲ್ಲಿ ನಿಂತಿದ್ದಾರೆ. ವಿಶಾಲವಾದ ಜಾಗದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆಯಾದರೂ ಮಳೆ ಬಂದಿದ್ದರಿಂದ ತೀವ್ರ ಸಮಸ್ಯೆಯಾಗಿದೆ. ಬಂದಿದ್ದ ಜನರು ಸುತ್ತಮುತ್ತಲ ಪ್ರದೇಶಗಳಲ್ಲಿ ಇರುವ ಗುಡಿ-ಗುಂಡಾರ ಸೇರಿದಂತೆ ಎಲ್ಲಿ ಜಾಗ ಸಿಗುತ್ತದೆಯೋ ಅಲ್ಲೆಲ್ಲ ಆಶ್ರಯ ಪಡೆದಿರುವುದು ಕಂಡು ಬಂದಿತು. ಔಷಧ ವಿತರಣೆ ಮಾಡುವ ಸ್ಥಳಕ್ಕೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಭೇಟಿ ನೀಡಿದ್ದರು. ಅಶೋಕ ಕುಲಕರ್ಣಿ ಅವರ ಕೋರಿಕೆಯ ಮೇರೆಗೆ ಭೇಟಿ ನೀಡಿದ ಶ್ರೀಗಳು ಔಷಧ ತಯಾರು ಮಾಡುವುದು ಸೇರಿದಂತೆ ಎಲ್ಲವನ್ನು ಪರಿಶೀಲಿಸಿದರು.
60 ವರ್ಷಗಳಿಂದ ವಿತರಣೆ: ಕುಟುಗನಳ್ಳಿ ಗ್ರಾಮದಲ್ಲಿ ಕಳೆದ 60 ವರ್ಷಗಳಿಂದಲೂ ಕುಲಕರ್ಣಿ ಕುಟುಂಬ ಅಸ್ತಮಾ ರೋಗಿಗಳಿಗೆ ಔಷಧ ವಿತರಣೆ ಮಾಡುತ್ತಾ ಬಂದಿದೆ. ಇಲ್ಲಿ ನೀಡುವ ಔಷಧವನ್ನು ಮೃಗಶಿರ ಮಳೆ ಸೇರುವ ಕಾಲದಲ್ಲಿಯೇ ಸ್ವೀಕಾರ ಮಾಡಿದರೆ ಅಸ್ತಮಾ ನಿವಾರಣೆಯಾಗುತ್ತದೆ ಎನ್ನುವುದು ನಂಬಿಕೆ. ಸತತ ಮೂರ ವರ್ಷಗಳ ಕಾಲ ಸೇವನೆ ಮಾಡಿದರೂ ರೋಗ ಸಂಪೂರ್ಣ ವಾಸಿಯಾಗುತ್ತದೆ ಎನ್ನುವ ನಂಬಿಕೆಯಿಂದ ನಾನಾ ರಾಜ್ಯದಿಂದಲೂ ರೋಗಿಗಳು ಆಗಮಿಸುವ ಸಂಪ್ರದಾಯ ಇದೆ.
ಮೊದಲ ವ್ಯಾಸರಾವ್ ಕುಲಕರ್ಣಿ ಅವರು ಔಷಧ ವಿತರಣೆ ಪ್ರಾರಂಭಿಸಿದ್ದು, ಈಗ ಅವರ ಪುತ್ರ ಅಶೋಕ ಕುಲಕರ್ಣಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದಕ್ಕಾಗಿ ವರ್ಷಪೂರ್ತಿ ತಯಾರಿ ಮಾಡಿಕೊಳ್ಳಲಾಗುತ್ತದೆ. ಹತ್ತಾರು ವರ್ಷಗಳ ಹಳೆಯ ಬೆಲ್ಲದಲ್ಲಿ ತಯಾರು ಮಾಡುವ ಈ ಔಷಧವನ್ನು ಗುಳಿಗೆ ರೂಪದಲ್ಲಿ ನೀಡಲಾಗುತ್ತದೆ. ಈ ಗುಳಿಗೆಯನ್ನು ತಯಾರು ಮಾಡಲು ಹದಿನೈದು ದಿನಗಳ ಕಾಲ ಕುಲಕರ್ಣಿ ಕುಟುಂಬ ಶ್ರಮಿಸುತ್ತದೆ.
ಕೃಷಿ ಸಚಿವ ಚಲುವರಾಯಸ್ವಾಮಿ ರಾಜೀನಾಮೆ ರಾಜಕೀಯ ಗಿಮಿಕ್: ಸುರೇಶ್ ಗೌಡ
ನಮ್ಮ ತಂದೆಯವರ ಕಾಲದಿಂದ ವಿತರಣೆ ಮಾಡುತ್ತಿದ್ದೇವೆ. ಈಗ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಈ ವರ್ಷ ಹೊಸದಾಗಿ ದೊಡ್ಡ ಸಂಖ್ಯೆಯಲ್ಲಿ ಅಸ್ತಮಾ ರೋಗಿಗಳು ಆಗಮಿಸಿದ್ದಾರೆ.
-ಅಶೋಕ ಕುಲಕರ್ಣಿ, ಔಷಧ ವಿತರಕರು