ಗುರುವಾರ ಅಧಿಕೃತವಾಗಿ ಕೇರಳಕ್ಕೆ ಆಗಮಿಸಿದ ಮುಂಗಾರು ಎರಡು ದಿನದ ಬಳಿಕ ಕರ್ನಾಟಕದ ಗಡಿ ಪ್ರವೇಶ ಮಾಡಿದೆ. ಈಗಾಗಲೇ ಮಡಿಕೇರಿ ಹಾಗೂ ಕಾರವಾರದವರೆಗೆ ವ್ಯಾಪಿಸಿರುವ ಮುಂಗಾರು ಮಳೆ ಇನ್ನೆರಡು ದಿನದಲ್ಲಿ ರಾಜ್ಯದ ಹಲವು ಪ್ರದೇಶಗಳಿಗೆ ಕಾಲಿಡಲಿದೆ: ಭಾರತೀಯ ಹವಾಮಾನ ಇಲಾಖೆ
ಬೆಂಗಳೂರು(ಜೂ.11): ರಾಜ್ಯಕ್ಕೆ ಶನಿವಾರ ಮುಂಗಾರು ಮಳೆಯ ಪ್ರವೇಶವಾಗಿದ್ದು, ಮುಂದಿನ ಎರಡು ದಿನದಲ್ಲಿ ರಾಜ್ಯದ ಇನ್ನಷ್ಟು ಪ್ರದೇಶಗಳಿಗೆ ವ್ಯಾಪಿಸಲಿದೆ. ಗುರುವಾರ ಅಧಿಕೃತವಾಗಿ ಕೇರಳಕ್ಕೆ ಆಗಮಿಸಿದ ಮುಂಗಾರು ಎರಡು ದಿನದ ಬಳಿಕ ಕರ್ನಾಟಕದ ಗಡಿ ಪ್ರವೇಶ ಮಾಡಿದೆ. ಈಗಾಗಲೇ ಮಡಿಕೇರಿ ಹಾಗೂ ಕಾರವಾರದವರೆಗೆ ವ್ಯಾಪಿಸಿರುವ ಮುಂಗಾರು ಮಳೆ ಇನ್ನೆರಡು ದಿನದಲ್ಲಿ ರಾಜ್ಯದ ಹಲವು ಪ್ರದೇಶಗಳಿಗೆ ಕಾಲಿಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಪ್ರವೇಶವಾಗಿರುವ ಹಿನ್ನೆಲೆಯಲ್ಲಿ ಮುಂದಿನ ಐದು ದಿನ ಕರಾವಳಿಯ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕದ ಕರಾವಳಿಗೆ ಈಗ ಚಂಡಮಾರುತ ದಾಳಿ ಭೀತಿ: ಇಂದಿನಿಂದ ಕರಾವಳಿಯಲ್ಲಿ 3 ದಿನ ಮಳೆ ಸಾಧ್ಯತೆ
ಮುಂದಿನ ಎರಡು ದಿನ ದಕ್ಷಿಣ ಒಳನಾಡು ಜಿಲ್ಲೆಗಳ ಕೆಲವು ಪ್ರದೇಶದಲ್ಲಿ ಮಳೆಯಾಗಲಿದ್ದು, ಜೂ.13ರಿಂದ 15ರವರೆಗೆ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಹೀಗಾಗಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಮೂರು ದಿನ ‘ಎಲ್ಲೋ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ. ಇನ್ನು ಉತ್ತರ ಒಳನಾಡಿನಲ್ಲಿ ಮುಂದಿನ ಐದು ದಿನ ಸಾಧಾರಣ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗಾಳಿಯು ಗಂಟೆಗೆ 40 ರಿಂದ 55 ಕಿ.ಮೀ ವೇಗದಲ್ಲಿ ಬೀಸುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಅಲೆಗಳು ಹೆಚ್ಚಾಗಲಿವೆ. ಹಾಗಾಗಿ, ಮುಂದಿನ ಐದು ದಿನ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ ಸರಾಸರಿ 83 ಸೆಂ.ಮೀ. ಮಳೆ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಶೇ.92 ರಿಂದ 96 ರಷ್ಟುಮಳೆಯಾಗಲಿದೆ. ಜೂನ್ ಅವಧಿಯಲ್ಲಿ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಸರಾಸರಿ 63 ಸೆಂ.ಮೀ. ಮಳೆಯಾಗಲಿದೆ.
ಶುಕ್ರವಾರ ಉಡುಪಿಯ ಕಾರ್ಕಳ ಹಾಗೂ ಕೊಲ್ಲೂರಿನಲ್ಲಿ ತಲಾ 7 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಮಂಗಳೂರು, ಕಾರವಾರದಲ್ಲಿ ತಲಾ 5, ಉಡುಪಿಯ ಕೋಟ, ಉತ್ತರ ಕನ್ನಡದ ಶಿರಾಲಿಯಲ್ಲಿ ತಲಾ 4 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂಗಾರು ಬಿರುಸಿಲ್ಲ
ರಾಜ್ಯಕ್ಕೆ ಪ್ರವೇಶವಾಗಿರುವ ಮುಂಗಾರು ಅಷ್ಟೊಂದು ಬಿರುಸು ಇಲ್ಲ. ಹೀಗಾಗಿ, ನಿರೀಕ್ಷಿತ ಮಳೆ ಆಗುವ ಸಾಧ್ಯತೆ ಇಲ್ಲ. ಶನಿವಾರವೂ ಕರಾವಳಿಯ ಕೆಲವು ಭಾಗದಲ್ಲಿ ಮಳೆಯಾಗಿಲ್ಲ. ಜತೆಗೆ, ಮುಂದಿನ ದಿನಗಳಲ್ಲಿ ಮಳೆ ನಿರಂತರವಾಗಿ ಮುಂದುವರೆಯುವುದು ಅನುಮಾನವಾಗಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
