ಜೂ.3ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ: ಮುಂಗಾರು ಪೂರ್ವ ಭಾರೀ ಮಳೆ
- ಕೃಷಿ ಚಟುವಟಿಕೆ ಮತ್ತು ಆರ್ಥಿಕತೆಯ ಜೀವನಾಡಿಯಾಗಿರುವ ನೈಋುತ್ಯ ಮುಂಗಾರು
- ಜೂ.3ರಂದು ಕೇರಳ ಕರಾವಳಿ ಮಾರ್ಗವಾಗಿ ರಾಜ್ಯ ಪ್ರವೇಶ
- ಜೂನ್ ಮೊದಲ ವಾರ ರಾಜ್ಯದಲ್ಲಿ ಮುಂಗಾರು ಆರ್ಭಟಿಸುವ ಸಾಧ್ಯತೆ
ಬೆಂಗಳೂರು (ಮೇ.01): ಕೃಷಿ ಚಟುವಟಿಕೆ ಮತ್ತು ಆರ್ಥಿಕತೆಯ ಜೀವನಾಡಿಯಾಗಿರುವ ನೈಋುತ್ಯ ಮುಂಗಾರು ಮಾರುತಗಳು ಜೂ.3ರಂದು ಕೇರಳ ಕರಾವಳಿ ಮಾರ್ಗವಾಗಿ ರಾಜ್ಯ ಪ್ರವೇಶಿಸಲಿದೆ. ಜೂನ್ ಮೊದಲ ವಾರ ರಾಜ್ಯದಲ್ಲಿ ಮುಂಗಾರು ಆರ್ಭಟಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯಕ್ಕೆ ಸಮೀಪಿಸುತ್ತಿರುವ ನೈಋುತ್ಯ ಮುಂಗಾರು ಹಾಗೂ ಹಾಗೂ ಅರಬ್ಬಿ ಸಮುದ್ರದ ಮಧ್ಯ ಭಾಗದಲ್ಲಿನ ಮೇಲ್ಮೈ ಸುಳಿಗಾಳಿ ತೀವ್ರಗೊಂಡ ಪರಿಣಾಮವಾಗಿ ರಾಜ್ಯದಲ್ಲಿ ಜೂ.4 ರವರೆಗೆ ಭಾರಿ ಮಳೆಯಾಗಲಿದ್ದು, ಕೆಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಮುಂದಿನ ನಾಲ್ಕು ದಿನ ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಜೂ.1 ಮತ್ತು 3ರಂದು ‘ಯೆಲ್ಲೋ ಅಲರ್ಟ್’ ನೀಡಿದೆ.
ಅದೇ ರೀತಿ ಉತ್ತರ ಹಾಗೂ ದಕ್ಷಿಣ ಒಳನಾಡಿಗೂ ಉತ್ತಮ ಮಳೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಜೂ.2 ಮತ್ತು 3ರಂದು ಬೀದರ್,ಗದಗ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ವಿಜಯಪುರ, ಬೆಂಗಳೂರು ಗ್ರಾಮಾಂತರ ಮತ್ತು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ. ಈ ಭಾಗದಲ್ಲಿ ತಾಪಮಾನ ತುಸು ಇಳಿಕೆಯಾಗಿ ಮೋಡ ಮುಸುಕಿನ ವಾತಾವರಣ ಸೃಷ್ಟಿಯಾಗಲಿದೆ.
ಕಳೆದ 24 ಗಂಟೆಯಲ್ಲಿ ಕೋಲಾರ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಗುಡುಗು ಸಹಿತ 6 ಸೆಂ.ಮೀ.ಗಿಂತ ಹೆಚ್ಚು ಮಳೆ ದಾಖಲಾಗಿದೆ. ದಕ್ಷಿಣ ಕನ್ನಡದ ಸುಬ್ರಹ್ಮಣ್ಯ, ಸುಳ್ಯ, ಮಾಣಿ, ಉಡುಪಿಯ ಕುಂದಾಪುರ, ಚಿಕ್ಕಮಗಳೂರಿನ ಕೊಟ್ಟಿಗೆಹಾರ ಮುಂತಾದೆಡೆ ಹಗುರದಿಂದ ಸಾಧಾರಣ ಮಳೆ ಬಿದ್ದಿದೆ.