ಕೂಡ್ಲಿಗಿ: ಬಿತ್ತನೆ ಬೀಜ ಖರೀದಿಗೆ ಲಾಕ್‌ಡೌನ್ ಅಡ್ಡಿ
* ಬಿತ್ತನೆ ಬೀಜ ಖರೀದಿಗೆ ಸಮಯದ ಅಭಾವ
* ನಾಲ್ಕು ಗಂಟೆಯಲ್ಲಿ ಎಲ್ಲ ಖರೀದಿ ಅಸಾಧ್ಯ
* ಜಿಲ್ಲಾಡಳಿತದಿಂದ ಐದು ದಿನಗಳ ಕಾಲ ಕಠಿಣ ಲಾಕ್‌ಡೌನ್ ಘೋಷಣೆ
ಭೀಮಣ್ಣ ಗಜಾಪುರ
ಕೂಡ್ಲಿಗಿ(ಮೇ.24): ಮುಂಗಾರು ಬಿತ್ತನೆಗೆ ರೈತರು ಭೂಮಿ ಹದಗೊಳಿಸಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಬಿತ್ತನೆ ಬೀಜ ಖರೀದಿಸಲು ಸಮಯದ ಅಭಾವದಿಂದ ಹಿನ್ನಡೆಯಾಗಿದೆ.
ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕೆ ಜಿಲ್ಲಾಡಳಿತ ಐದು ದಿನಗಳ ಕಾಲ ಕಠಿಣ ಲಾಕ್‌ಡೌನ್ ಘೋಷಿಸಿದ್ದು ಯಾವ ಅಂಗಡಿಗಳು ತೆರೆಯುವಂತಿಲ್ಲ. ತಾಲೂಕಿನಲ್ಲಿ ಮಳೆಯಾಗುತ್ತಿದ್ದು ಇನ್ನೊಂದು ಮಳೆ ಉತ್ತಮವಾಗಿ ಸುರಿದರೆ ಹೈಬ್ರೀಡ್ ತೊಗರಿ ಬಿತ್ತನೆಗೆ ಕಾಯ್ದಿರುವ ರೈತರಿಗೆ ಬೀಜಗಳೇ ಸಿಗುತ್ತಿಲ್ಲ. ಹೀಗಾಗಿ ಎಲ್ಲಿ ಮುಂಗಾರು ಬಿತ್ತನೆಗೆ ಹಿನ್ನಡೆಯಾಗುತ್ತದೆ ಎಂಬ ಭಯ ರೈತರಲ್ಲಿ ಮೂಡಿದೆ.
ನಾಲ್ಕು ಗಂಟೆ ಮಾತ್ರ ಅವಕಾಶ:
ಸೋಮವಾರದಿಂದ ಕೃಷಿಗೆ ಸಂಬಂಧಿಸಿದ ಅಂಗಡಿಗಳು ಬೆಳಗ್ಗೆ 6ರಿಂದ 10ರ ವರೆಗೆ ಮಾತ್ರ ಓಪನ್ ಆಗಲಿವೆ. ಈ ಅವಧಿಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಸಲಕರಣೆಗಳನ್ನು ಖರೀದಿಸಲು ಅಸಾಧ್ಯ. ಒಂದು ವೇಳೆ ಮುಗಿಬಿದ್ದರೂ ಅಂಗಡಿಗಳು ಕೊರೋನಾ ಹಾಟ್ಸ್ಪಾಟ್ ಆಗುವ ಆತಂಕ ಎದುರಾಗಿದೆ. ಕಡಿಮೆ ಅವಧಿ ಇರುವುದರಿಂದ ಒಮ್ಮೇಲೆ ರೈತರು ಆಗಮಿಸುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಗುವುದಿಲ್ಲ. ಇದರಿಂದ ಮತ್ತಷ್ಟು ಸೋಂಕು ಉಲ್ಬಣವಾಗುವ ಸಾಧ್ಯ ಇದೆ. ಹೀಗಾಗಿ ಈ ಅವಧಿಯನ್ನು ಹೆಚ್ಚಿಸಿ ಅನುಕೂಲ ಮಾಡಿಕೊಡಬೇಕೆಂದು ರೈತರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಬಳ್ಳಾರಿ- ವಿಜಯನಗರ ಜಿಲ್ಲೆಯಲ್ಲಿ 24,140 ಜನರಿಗೆ ಸೋಂಕಿನ ಲಕ್ಷಣ!
ಸೋಂಕಿನ ಭಯದಿಂದ ವಿಳಂಬ:
ರೈತರು ಪ್ರತಿ ವರ್ಷ ಹೊಲ ಹದಗೊಳಿಸಲು ಆರಂಭಿಸುತ್ತಿದ್ದಂತೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಮುಂದಾಗುತ್ತಿದ್ದರು. ಆದರೆ, ರಾಜ್ಯದಲ್ಲಿ ಕೊರೋನಾ ಅಬ್ಬರಿಸಿದ್ದರಿಂದ ಸರ್ಕಾರ ಸೆಮಿ ಲಾಕ್‌ಡೌನ್, ಲಾಕ್‌ಡೌನ್ ಘೋಷಿಸಿದ್ದರಿಂದ ರೈತರು ನಗರಗಳಿಗೆ ಹೋಗಲೇ ಇಲ್ಲ. ಜತೆಗೆ ಸೋಂಕಿನ ಭಯದಿಂದ ಊರು ಬಿಟ್ಟು ಹೊರಬರಲಿಲ್ಲ. ಹೀಗಾಗಿ ಬಿತ್ತನೆಗೆ ಬೇಕಾಗುವ ವಸ್ತುಗಳ ಖರೀದಿಸಲು ವಿಳಂಬವಾಯಿತು ಎನ್ನುತ್ತಾರೆ ರೈತರು.
ಫಸಲು ಸಿಗುವುದಿಲ್ಲ:
ಹೈಬ್ರೀಡ್ ಜೋಳವನ್ನು ಕೃತಿಕಾ ಮಳೆಯ ಕಡೆ ಹಾಗೂ ರೋಹಿಣಿ ಮಳೆಯ ಮೊದಲ ಪಾದದಲ್ಲಿಯೇ ಬಿತ್ತನೆ ಮಾಡಲಾಗುತ್ತಿದೆ. ಇದೀಗ ಕೃತಿಕಾ ಮಳೆಯ ಕಡೆಯ ಪಾದ ಬಂದಿದ್ದು ಇಂದು ಅಥವಾ ನಾಳೆ ಮಳೆ ಸುರಿದರೇ ರೈತರು ಬಿತ್ತನೆಗೆ ಮುಂದಾಗುತ್ತಾರೆ. ಆದರೆ, ಅವರಿಗೆ ಬಿತ್ತನೆ ಬೀಜಗಳೇ ದೊರಕಿಲ್ಲ. ವಿಳಂಬವಾದರೆ ತೆನೆ ಕಾಳು ಕಟ್ಟುವುದಿಲ್ಲ ಎಂಬ ಆತಂಕದೊಂದಿಗೆ ಕೀಟ ಭಾದೆ ಕಾಡುತ್ತದೆ ಎಂಬ ಅಳಲು ರೈತರದ್ದು.
ಕೃತಿಕಾ ಮಳೆಯಲ್ಲಿ ಹೈಬ್ರೀಡ್ ಜೋಳ ಬಿತ್ತನೆ ಮಾಡದಿದ್ದರೆ ವರ್ಷಪೂರ್ತಿ ಉಪವಾಸ ಇರಬೇಕಾಗುತ್ತದೆ. ಲಾಕ್‌ಡೌನ್‌ನಿಂದ ನಮಗೆ ಬಿತ್ತನೆ ಬೀಜ, ಗೊಬ್ಬರ, ಇತರೆ ಸಲಕರಣೆ ಖರೀದಿಸಲು ಆಗಿಲ್ಲ. ಸರ್ಕಾರ ರೈತರ ಬಿತ್ತನೆಗೆ ಬೇಕಾದ ಎಲ್ಲ ಸಲಕರಣೆಗಳ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಕೂಡ್ಲಿಗಿ ತಾಲೂಕು ಕಕ್ಕುಪ್ಪಿಯ ರೈತ ಮಾರಣ್ಣ ತಿಳಿಸಿದ್ದಾರೆ.
ಲಾಕ್‌ಡೌನ್ ನಿಯಮ ಪಾಲಿಸಿ ರೈತ ಸಂಪರ್ಕ ಕೇಂದ್ರ ಸೇರಿದಂತೆ ಖಾಸಗಿ ಮಾರಾಟ ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಬಹುದು. ಇನ್ನೆರಡು ದಿನಗಳಲ್ಲಿ ಡಿಎಪಿ ಹಳೇ ದರದಲ್ಲಿಯೇ ಮಾರಾಟ ಮಾಡುವ ಆದೇಶ ಬರಲಿದ್ದು 1900 ಬದಲಿಗೆ 1200ಗೆ ರಸಗೊಬ್ಬರ ಮಾರಾಟ ಮಾಡಲಾಗುವುದು ಎಂದು ಕೂಡ್ಲಿಗಿ ತಾಲೂಕು ಕೃಷಿ ಅಧಿಕಾರಿ ಕೆ. ವಾಮದೇವ ಹೇಳಿದ್ದಾರೆ.
ಬಿತ್ತನೆ ಬೀಜ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಬರುವುದರಿಂದ ಕೊರೋನಾ ಸೋಂಕು ಉಲ್ಬಣವಾಗುವ ಸಾಧ್ಯತೆ ಇದೆ. ಹೀಗಾಗಿ ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕೃಷಿಗೆ ಸಂಬಂಧಿಸಿದಂತೆ ಅಂಗಡಿಗಳ ಅವಧಿಯನ್ನು ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಕೇಳಲಾಗುವುದು. ಕೃಷಿ ಸಂಬಂಧಿತ ಸಲಕರಣೆಗಳ ಖರೀದಿಗೂ ಅವಕಾಶ ಮಾಡಿಕೊಡಲಾಗುವುದು ಎಂದು ತಹಸೀಲ್ದಾರ್ ಜಿ. ಅನಿಲಕುಮಾರ ತಿಳಿಸಿದ್ದಾರೆ.