ನಗರದ ಇಂದಿರಾ ಕ್ಯಾಂಟೀನ್‌ಗಳ ಅವ್ಯವಸ್ಥೆ ಸರಿಪಡಿಸುವ ಉದ್ದೇಶದಿಂದ ಒಂದೊಂದು ಕ್ಯಾಂಟೀನ್‌ಗೆ ಒಬ್ಬೊಬ್ಬ ಅಧಿಕಾರಿ ನೇಮಕ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಬೆಂಗಳೂರು (ಜು.11) : ನಗರದ ಇಂದಿರಾ ಕ್ಯಾಂಟೀನ್‌ಗಳ ಅವ್ಯವಸ್ಥೆ ಸರಿಪಡಿಸುವ ಉದ್ದೇಶದಿಂದ ಒಂದೊಂದು ಕ್ಯಾಂಟೀನ್‌ಗೆ ಒಬ್ಬೊಬ್ಬ ಅಧಿಕಾರಿ ನೇಮಕ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿಗಳು ಭಾನುವಾರ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಅದರಂತೆ ನಗರದ ಪ್ರತಿ ಇಂದಿರಾ ಕ್ಯಾಂಟೀನ್‌ಗೆ ನಿರ್ದಿಷ್ಟವಾಗಿ ಒಬ್ಬೊಬ್ಬ ಅಧಿಕಾರಿಯನ್ನು ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಡಿಕೆಶಿ ದಿಢೀರ್ ಸಿಟಿ ರೌಂಡ್ಸ್: ಇಂದಿರಾ ಕ್ಯಾಂಟೀನ್ನಲ್ಲಿ ಉಪಹಾರ, ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ
ನಿಯೋಜಿತ ಅಧಿಕಾರಿಯು ಕಡ್ಡಾಯವಾಗಿ ಪ್ರತಿ ದಿನ ಆಹಾರ ಪೂರೈಕೆ ಆಗುವ ಸಮಯಕ್ಕೆ ಸರಿಯಾಗಿ ಕ್ಯಾಂಟೀನ್‌ಗೆ ಭೇಟಿ ನೀಡಬೇಕು. ಆಹಾರ ಸೇವನೆ ಮಾಡಿ ಗುಣಮಟ್ಟಪರಿಶೀಲಿಸಬೇಕು. ಕೆಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣ ಪಡೆಯುತ್ತಿರುವುದು ಉಪ ಮುಖ್ಯಮಂತ್ರಿಗಳ ಪರಿಶೀಲನೆ ವೇಳೆ ತಿಳಿದು ಬಂದಿದೆ. ಈ ಬಗ್ಗೆ ನಿಗಾ ವಹಿಸಬೇಕು. ಇದಲ್ಲದೇ, ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಪ್ರತಿಯೊಂದನ್ನು ಪರಿಶೀಲಿಸಿ ದೈನಂದಿನ ವರದಿ ತಯಾರಿಸಿ ಸಲ್ಲಿಸಬೇಕು ಎಂದು ತಿಳಿಸಿದರು.
ಪ್ರತ್ಯೇಕ ತಂತ್ರಾಂಶ ರಚನೆ
ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡುವ ಅಧಿಕಾರಿಗಳು ದೈನಂದಿನ ವರದಿ ಸಲ್ಲಿಸಲು ಪ್ರತ್ಯೇಕ ತಂತ್ರಾಂಶವೊಂದನ್ನು ರಚಿಸಲಾಗುವುದು. ಈ ತಂತ್ರಾಂಶದ ಮೂಲಕ ವರದಿ ಸಲ್ಲಿಸಬೇಕಾಗುತ್ತದೆ. ಪ್ರತ್ಯೇಕ ತಂತ್ರಾಂಶ ಸಿದ್ಧಗೊಳ್ಳುವವರೆಗೆ ಕೈಪಿಡಿ ಮೂಲಕ ಸಲ್ಲಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.
ಸಹಾಯವಾಣಿ ಸಂಖ್ಯೆ 1533
ಇನ್ನು ಇಂದಿರಾ ಕ್ಯಾಂಟೀನ್‌ಗಳಲ್ಲಿ ಬಿಬಿಎಂಪಿಯ ಹಳೆಯ ಸಹಾಯವಾಣಿ ಸಂಖ್ಯೆ ಇದೆ. ಇದೀಗ 1533 ಸಹಾಯವಾಣಿಯನ್ನು ಹೊಸದಾಗಿ ಆರಂಭಿಸಲಾಗಿದೆ. ಈ ಸಂಖ್ಯೆಯನ್ನು ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲಿ ಅಳವಡಿಕೆ ಮಾಡುವುದಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ತುಷಾರ್ ತಿಳಿಸಿದರು.
ಇಂದಿರಾ ಕ್ಯಾಂಟೀನ್‌ಗೆ ಹೆಚ್ಚಿದ ಬೇಡಿಕೆ..!
3 ದಿನದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಟೆಂಡರ್
ನಗರದ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆಗೆ ಸಂಬಂಧಿಸಿದಂತೆ ಟೆಂಡರ್ ಆಹ್ವಾನಿಸುವುದಕ್ಕೆ ಸರ್ಕಾರದ ಅನುಮತಿ ಕೇಳಲಾಗಿತ್ತು. ಆಹಾರದ ಮೆನು ಹಾಗೂ ಗುತ್ತಿಗೆದಾರರಿಗೆ ನೀಡುವ ಹಣದಲ್ಲಿ ಕೆಲವು ಬದಲಾವಣೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ ಅನುಮೋದನೆ ನೀಡಿದೆ. ಹೀಗಾಗಿ, ಎರಡ್ಮೂರು ದಿನದಲ್ಲಿ ಕ್ಯಾಂಟೀನ್‌ಗಳ ಆಹಾರ ಪೂರೈಕೆಗೆ ಹೊಸದಾಗಿ ವಲಯವಾರು ಟೆಂಡರ್ ಆಹ್ವಾನಿಸಲಾಗುವುದು. 15 ದಿನದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಭಾಗವಹಿಸುವ ಗುತ್ತಿಗೆದಾರರ ಬಗ್ಗೆ ಟೆಂಡರ್ ಷರತ್ತಿನಲ್ಲಿ ಉಲ್ಲೇಖಿಸಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
