ಡಿಕೆಶಿ ದಿಢೀರ್ ಸಿಟಿ ರೌಂಡ್ಸ್: ಇಂದಿರಾ ಕ್ಯಾಂಟೀನ್‌ನಲ್ಲಿ ಉಪಹಾರ, ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಭಾನುವಾರ ಅನಿರೀಕ್ಷಿತವಾಗಿ ನಗರದ ಕೆಲವು ಇಂದಿರಾ ಕ್ಯಾಂಟೀನ್ ಹಾಗೂ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅವ್ಯವಸ್ಥೆ ಸರಿಪಡಿಸುವಂತೆ ತಾಕೀತು ಮಾಡಿದ್ದಾರೆ.
ಬೆಂಗಳೂರು (ಜು.10): ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಭಾನುವಾರ ಅನಿರೀಕ್ಷಿತವಾಗಿ ನಗರದ ಕೆಲವು ಇಂದಿರಾ ಕ್ಯಾಂಟೀನ್ ಹಾಗೂ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅವ್ಯವಸ್ಥೆ ಸರಿಪಡಿಸುವಂತೆ ತಾಕೀತು ಮಾಡಿದ್ದಾರೆ. ಭಾನುವಾರ ನಗರ ಪ್ರದಕ್ಷಿಣೆ ಹೊರಟ ಡಿ.ಕೆ.ಶಿವಕುಮಾರ್, ಬೆಳಗ್ಗೆ ದಾಸರಹಳ್ಳಿ ವಲಯದ ಚೊಕ್ಕಸಂದ್ರ ಹಾಗೂ ಟಿ.ದಾಸರಹಳ್ಳಿಯ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲಿಸಿ, ಸಾರ್ವಜನಿಕರಿಂದ ಆಹಾರದ ಬಗ್ಗೆ ಮಾಹಿತಿ ಪಡೆದರು. ಆಗ ಕ್ಯಾಂಟೀನ್ ಸಿಬ್ಬಂದಿ ಉಪಾಹಾರಕ್ಕೆ 5 ಬದಲು 10 ಪಡೆದಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಕ್ಯಾಂಟೀನ್ ಸಿಬ್ಬಂದಿಯನ್ನು ಪ್ರಶ್ನಿಸಿ ಈ ರೀತಿ ಆಗಬಾರದು ಎಂದು ಎಚ್ಚರಿಕೆ ನೀಡಿದರು.
ಸಂಪರ್ಕ ಸಿಗದ ಸಹಾಯವಾಣಿ: ಇಂದಿರಾ ಕ್ಯಾಂಟೀನ್‌ನಲ್ಲಿ ಕುಂದುಕೊರತೆ ಕುರಿತು ಸಾರ್ವಜನಿಕರು ದೂರು ಸಲ್ಲಿಸಲು ಪ್ರದರ್ಶಿಸಲಾದ ಸಹಾಯವಾಣಿ ಸಂಖ್ಯೆಗೆ ಸಚಿವರು ಕರೆ ಮಾಡಿದರು. ಆದರೆ, ಸಹಾಯವಾಣಿ ಸಂಖ್ಯೆ ದುರಸ್ತಿಯಲ್ಲಿ ಇರುವುದಾಗಿ ತಿಳಿದು ಬಂತು. ಕೂಡಲೇ ಸಹಾಯವಾಣಿ ಸರಿಪಡಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನಿರ್ದೇಶಿಸಿದರು.
ರಾಜಧಾನಿಯಲ್ಲಿ 24 ತಾಸು ಹೋಟೆಲ್ ತೆರೆಯಲು ಅವಕಾಶ ನೀಡಿ: ಡಿಕೆಶಿಗೆ ಮನವಿ
ಇಂದಿರಾ ಕ್ಯಾಂಟೀನ್‌ನಲ್ಲಿ ಉಪಹಾರ: ನಿವಾಸದಿಂದ ಹೊರಟ ಡಿ.ಕೆ.ಶಿವಕುಮಾರ್ ಮೊದಲು ಚೊಕ್ಕಸಂದ್ರ ಇಂದಿರಾ ಕ್ಯಾಂಟೀನ್‌ಗೆ ಭೇಟಿ ಉಪಹಾರ ನೀಡುವಂತೆ ಸೂಚಿಸಿದರು. ಆದರೆ, ಕ್ಯಾಂಟೀನ್‌ನಲ್ಲಿ ಉಪಹಾರ ಖಾಲಿ ಆಗಿದೆ ಎಂದು ಸಿಬ್ಬಂದಿ ಹೇಳಿದರು. ಆಗ ಎಷ್ಟುಪ್ಲೇಟ್ ಗ್ರಾಹಕರಿಗೆ ನೀಡಲಾಗಿದೆ ಎಂಬ ಮಾಹಿತಿ ಪಡೆದು, ಅಲ್ಲಿಂದ ಟಿ.ದಾಸರಹಳ್ಳಿ ಇಂದಿರಾ ಕ್ಯಾಂಟೀನ್‌ಗೆ ತೆರಳಿ ಅಲ್ಲಿ ಉಪ್ಪಿಟ್ಟು, ಕೇಸರಿಬಾತ್ ಸವಿದರು.
ಪ್ರತಿವಾರ ಪರಿಶೀಲಿಸಿ: ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರದ ಗುಣಮಟ್ಟ, ವ್ಯವಸ್ಥೆ ಬಗ್ಗೆ ಪ್ರತಿವಾರ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಬೇಕು. ಲೋಪದೋಷಗಳು ಕಂಡು ಬಂದರೆ ಸರಿಪಡಿಸಬೇಕು ಎಂದು ಉಪ ಮುಖ್ಯಮಂತ್ರಿ ನಿರ್ದೇಶಿಸಿದರು.
ರಸ್ತೆಯಲ್ಲಿ ಕಸ ಸುರಿದರೆ ಹೊಣೆ ಯಾರು?: ಸೀಗೇಹಳ್ಳಿ, ಕನ್ನಹಳ್ಳಿ, ದೊಡ್ಡಬಿದರಕಲ್ಲು ಘನ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಡಿ.ಕೆ.ಶಿವಕುಮಾರ್, ಘಟಕಕ್ಕೆ ಪೂರೈಕೆ ಆಗುವ ತ್ಯಾಜ್ಯದ ಬಗ್ಗೆ ದಾಖಲೆ ಪರಿಶೀಲಿಸಿದರು. ನಗರದ ಪ್ರಮುಖ ರಸ್ತೆಯಲ್ಲಿ ಅನಧಿಕೃತವಾಗಿ ತ್ಯಾಜ್ಯ ಸುರಿದಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸೀಗೆಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ತೆರಳುವ ರಸ್ತೆಯ ಅಕ್ಕ-ಪಕ್ಕದಲ್ಲಿ ಅನಧಿಕೃತವಾಗಿ ತ್ಯಾಜ್ಯ ಸುರಿದಿರುವುದನ್ನು ಗಮನಿಸಿ, ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ರೀತಿ ನಗರದ ರಸ್ತೆಯಲ್ಲಿ ಕಸ ಎಸೆದು ಹೋದರೆ ಅದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು. ಕಾರ್ಯಾರಂಭ ಮಾಡದ ಯಶವಂತಪುರದ ಸೀಗೇಹಳ್ಳಿಯ ಘಟಕ ದುರ್ವಾಸನೆಯಿಂದ ಕೂಡಿತ್ತು. ಕನ್ನಹಳ್ಳಿ ಘನ ತ್ಯಾಜ್ಯ ಸಂಸ್ಕರಣೆದಲ್ಲಿ ಇಂಧನ ಉತ್ಪಾದನೆ ಮಾಡದಿರುವ ಬಗ್ಗೆ ಅಲ್ಲಿನ ಮೇಲ್ವಿಚಾರಕರಿಂದ ಮಾಹಿತಿ ಪಡೆದರು. ನಂತರ ದೊಡ್ಡಬಿದರಕಲ್ಲು ಘನತ್ಯಾಜ್ಯ ಸಂಸ್ಕಾರಣೆ, ಇಂಧನ ಉತ್ಪಾದನೆ ಘಟಕಕ್ಕೆ ಭೇಟಿ ನೀಡಿದರು.
ಕ್ಯಾಂಟೀನ್, ತ್ಯಾಜ್ಯ ಘಟಕ ಕೆಲಸ ತೃಪ್ತಿ ನೀಡಿಲ್ಲ: ನಗರದ ಇಂದಿರಾ ಕ್ಯಾಂಟೀನ್ ಹಾಗೂ ಘನತ್ಯಾಜ್ಯ ಘಟಕಗಳನ್ನು ಪರಿಶೀಲನೆ ಮಾಡಿದ್ದು, ಅಲ್ಲಿನ ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲ. ಎಲ್ಲವನ್ನೂ ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಎಲ್ಲ ಸಂಸ್ಥೆಗಳ ಕಾರ್ಯವೈಖರಿ ಸರಿಯಾದ ಹಳಿಗೆ ತರಬೇಕು. ಮೊದಲು ಆ ಕೆಲಸ ಮಾಡುತ್ತೇವೆ. ಕಸದಿಂದ ಇಂಧನ ಉತ್ಪಾದನೆ ಮಾಡುವುದಾಗಿ ಹೇಳಿ ಜವಾಬ್ದಾರಿ ವಹಿಸಿಕೊಂಡವರು ಇಂಧನ ಉತ್ಪಾದನೆ ಮಾಡುತ್ತಿಲ್ಲ. ಇನ್ನು ಈ ಘಟಕಗಳ ಕಾರ್ಯವೈಖರಿ ಬಗ್ಗೆ ಜವಾಬ್ದಾರಿಯುತ ಅಧಿಕಾರಿಗಳು ಪರಿಶೀಲನೆ ಮಾಡುತ್ತಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.
ನಗರ ಸ್ವಚ್ಚವಾಗಿ ಇಡಬೇಕು. ಆದರೆ, ರಸ್ತೆ ಮಧ್ಯದಲ್ಲಿ ಕಸದ ರಾಶಿ ಇದೆ. ಈ ಬಗ್ಗೆ ಅಧಿಕಾರಿಗಳ ಪ್ರಶ್ನೆ ಮಾಡಿದ್ದೇನೆ. ಇದಕ್ಕೆ ಹೊಣೆಗಾರಿಕೆ ಯಾರು ಹೊರಬೇಕು ಎಂದು ಕೇಳಿದ್ದೇನೆ. ಕಸ ತಂದು ರಸ್ತೆಗೆ ಸುರಿಯುತ್ತಿರುವ ವಾಹನಗಳ ಬಗ್ಗೆ ಗಮನಹರಿಸಬೇಕು. ಕಸ ವಿಲೇವಾರಿ ಮಾಡುವ ಲಾರಿ ಮಾಲಿಕರ ಸಂಘದ ಜತೆಗೆ ಚರ್ಚೆ ಮಾಡುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. ತ್ಯಾಜ್ಯ ಸಂಸ್ಕರಣ ಘಟಕಗಳ ಲೆಕ್ಕಾಚಾರದಲ್ಲಿ ಏರುಪೇರುಗಳಿವೆ. ಅದೆಲ್ಲವನ್ನೂ ಸರಿಪಡಿಸುತ್ತೇವೆ. ಘಟಕಕ್ಕೆ ಬರುವ ಪ್ರತಿ ಕಸದ ವಾಹನಗಳ ವಿಡಿಯೋ ದಾಖಲೆ ಮಾಡಿಸಿದ್ದೇನೆ. ಎಲ್ಲವೂ ಲೆಕ್ಕ ಸರಿಯಾಗಿ ಹೊಂದಾಣಿಕೆ ಆಗುತ್ತದೆಯೇ ಎಂಬುದನ್ನು ನೋಡಬೇಕಿದೆ ಎಂದು ಹೇಳಿದರು.
ಸಂಪನ್ಮೂಲ ಸೋರಿಕೆಗೆ ತಡೆ: ಬೆಂಗಳೂರು ಅಭಿವೃದ್ಧಿಗೆ ಸರ್ಕಾರದ ಬಜೆಟ್‌ನಲ್ಲಿ ನಿರೀಕ್ಷೆಗೆ ತಕ್ಕ ಅನುದಾನ ಸಿಕ್ಕಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಆಯವ್ಯಯದಲ್ಲಿ ಅನುದಾನ ಸಿಗುತ್ತದೆಯೋ ಇಲ್ಲವೋ. ನಾನು ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸಂಪನ್ಮೂಲ ಸೋರಿಕೆಯಾಗುತ್ತಿದೆ. ತೆರಿಗೆ ವಂಚನೆ ಮಾಡಲಾಗುತ್ತಿದೆ. ಯಾವ ತೆರಿಗೆ ಹೆಚ್ಚಿಸಬೇಕು ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.
ರೈತರನ್ನು ವಿಶ್ವಾಸಕ್ಕೆ ಪಡೆದು ಪೆರಿಫೆರಲ್ ರಸ್ತೆಗೆ ಭೂ ಪರಿಹಾರ ನಿರ್ಧಾರ: ಡಿಕೆಶಿ
ಡಿಕೆಶಿ ಭೇಟಿ ಮಾಡಿದ ಶಾಸಕ ಮನಿರಾಜು: ನಗರ ಪ್ರದಕ್ಷಿಣೆಗೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ, ಸ್ಥಳೀಯ ಬಿಜೆಪಿ ಶಾಸಕ ಮುನಿರಾಜು ಅವರು, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಕ್ಷೇತ್ರದ ಸಮಸ್ಯೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು.
ಡಿಕೆಶಿ ಸಿಟಿ ರೌಂಡ್ಸ್ ವೇಳೆ ಪಾಲಿಕೆ ವಾಹನಗಳ ಡಿಕ್ಕಿ: ಡಿ.ಕೆ.ಶಿವಕುಮಾರ್ ಅವರು ನಗರದ ವಿವಿಧ ಕಡೆ ಭೇಟಿ ನೀಡಲು ತೆರಳುವ ವೇಳೆಯಲ್ಲಿ ಬಿಬಿಎಂಪಿಯ ಮುಖ್ಯ ಆಯುಕ್ತರ ಕಾರಿಗೆ ಹಿಂಬದಿಯಿಂದ ಮತ್ತೊಂದು ಪಾಲಿಕೆ ಕಾರು ಗುದ್ದಿದ ಘಟನೆ ನಡೆಯಿತು. ಮಾಗಡಿ ರಸ್ತೆಯಲ್ಲಿ ಉಪ ಮುಖ್ಯಮಂತ್ರಿಯ ವಾಹನ ಹಿಂಬಾಲಿಸುವಾಗ ಈ ಘಟನೆ ನಡೆಯಿತು. ವಾಹನದಲ್ಲಿ ಆಯುಕ್ತರು ಇರಲಿಲ್ಲ ಎಂದು ತಿಳಿದು ಬಂದಿದೆ.