ಬೆಂಗಳೂರು [ನ.07]:  ಇತ್ತೀಚಿನ ಹುಬ್ಬಳ್ಳಿಯ ಬಿಜೆಪಿ ಸಭೆಯಲ್ಲಿನ ಆಡಿಯೋ ಬಹಿರಂಗ ಪ್ರಕರಣದ ಹಿನ್ನೆಲೆಯಲ್ಲಿ ಜಾಗೃತರಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮನ್ನು ಭೇಟಿ ಮಾಡಲು ಕಚೇರಿ ಮತ್ತು ನಿವಾಸಕ್ಕೆ ಬರುವವರು ಮೊಬೈಲ್ ತರುವುದನ್ನು ನಿರ್ಬಂಧಿಸಿದ್ದಾರೆ. 

ಸಚಿವರು ಹಾಗೂ ಹಿರಿಯ ನಾಯಕರನ್ನು ಹೊರತುಪಡಿಸಿ ಇನ್ನುಳಿದ ಸಣ್ಣ ಪುಟ್ಟ ಮುಖಂಡರು, ಕಾರ್ಯಕರ್ತರು ಅಥವಾ ಜನಸಾಮಾನ್ಯರು ಯಡಿಯೂರಪ್ಪ ಅವರನ್ನು ಭೇಚಿ ಮಾಡುವ ವೇಳೆ ಮೊಬೈಲ್ ತರುವಂತಿಲ್ಲ. ವಿಧಾನಸೌಧದಲ್ಲಿನ ಮುಖ್ಯಮಂತ್ರಿಗಳ ಕಚೇರಿ, ಗೃಹ ಕಚೇರಿ ‘ಕೃಷ್ಣಾ’, ಖಾಸಗಿ ನಿವಾಸ ಮತ್ತಿತರೆಡೆ ಮೊಬೈಲ್ ಜೊತೆಗೆ ಪ್ರವೇಶಿಸುವಂತಿಲ್ಲ ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾತನಾಡುವ ವೇಳೆ ಏನೇ ಹೆಚ್ಚೂ ಕಡಮೆ ಆದರೂ ಅದನ್ನು ರೆಕಾರ್ಡ್ ಮಾಡಿಟ್ಟುಕೊಳ್ಳುವ ಆತಂಕವಿದೆ. ಯಾರು ರೆಕಾರ್ಡ್ ಮಾಡಿಕೊಳ್ಳುತ್ತಾರೆ ಎಂಬುದನ್ನು ಪತ್ತೆಹಚ್ಚುವುದು ಕಷ್ಟ. ಅದರ ಬದಲು ಮೊಬೈಲ್‌ಗಳನ್ನೇ ಒಳಗೆ ತರದಂತೆ ನಿರ್ಬಂಧಿಸಿದರೆ ಸಮಸ್ಯೆ ಕಡಮೆಯಾಗಬಹುದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಭದ್ರತಾ ಪಡೆ, ಅವರ ಸಚಿವಾಲಯದ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಬುಧವಾರದಿಂದಲೇ ಇದು ಜಾರಿಗೆ ಬಂದಿದೆ.

ನವೆಂಬರ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ